ಸೋಮವಾರ, ಡಿಸೆಂಬರ್ 6, 2021
23 °C
ಪ್ರಜಾ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಶೀಘ್ರ ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಮಳೆಯಿಂದ ರೈತರಿಗೆ ಆಗಿರುವ ಬೆಳೆ ನಷ್ಟ ಪರಿಹಾರವನ್ನು ಸರ್ಕಾರ ಕೂಡಲೇ ವಿತರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಪ್ರಜಾ ಸಂಘರ್ಷ ಸಮಿತಿಯ ಮುಖಂಡರು ಗುರುವಾರ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚನ್ನರಾಯಪ್ಪ ಮಾತನಾಡಿ, ಕೊರೊನಾ ಸೋಂಕಿನಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇದೀಗ ಹೆಚ್ಚಾಗಿ ಮಳೆ ಆಗಿದೆ. ಇದರಿಂದ ತಾಲ್ಲೂಕಿನಲ್ಲಿ ರೈತರು ಬೆಳೆದ ಬೆಳೆಗಳು ಕಟಾವು ಹಂತದಲ್ಲಿಯೇ ನಷ್ಟಕ್ಕೀಡಾಗಿವೆ ಎಂದು ಹೇಳಿದರು.

ನೆಲಗಡಲೆ ಕಾಯಿಗಳನ್ನು ಬಿಡಿಸುವ ಹಂತದಲ್ಲಿ ಇದೆ. ಜೋಳ, ರಾಗಿ, ಭತ್ತದ ಫಸಲು ನೆಲ ಕಚ್ಚಿದೆ. ಇದರಿಂದ ಕೃಷಿಕರಿಗೆ ಭಾರಿ ನಷ್ಟ ಆಗಿದೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ತಾಲ್ಲೂಕಿನಲ್ಲಿ ಬೆಳೆ ನಷ್ಟ ಪರಿಹಾರ ನೀಡಲು ಸಮರ್ಪಕವಾಗಿ ಸರ್ವೆ ಮಾಡಿಲ್ಲ ಎಂದು ಟೀಕಿಸಿದರು.

ಇನ್ನೂ ಸರ್ಕಾರಕ್ಕೆ ಬೆಳೆ ನಷ್ಟದ ವರದಿ ನೀಡಿಲ್ಲ. ಇದರಿಂದ ರೈತರಿಗೆ ಪರಿಹಾರ ವಿತರಣೆ ಆಗುವುದು ಅನುಮಾನವಿದೆ. ಕೂಡಲೇ ಸರ್ಕಾರ ಬೆಳೆ ನಷ್ಟ ಪರಿಹಾರವನ್ನು ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಮಳೆಯಿಂದ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕೆರೆ-ಕುಂಟೆಗಳು, ಕಟ್ಟೆಗಳು ಒಡೆದಿವೆ. ಅಪಾರ ಪ್ರಮಾಣದ ನೀರು ಹೊಲ-ಗದ್ದೆಗಳಿಗೆ ಹರಿದಿದೆ. ನೀರು ಆಂಧ್ರ ಪ್ರದೇಶಕ್ಕೆ ಹರಿಯುತ್ತಿದ್ದರೂ ತಡೆದಿಟ್ಟುಕೊಳ್ಳುವಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಯೋಜನೆಗಳನ್ನು ರೂಪಿಸಿಲ್ಲ ಎಂದು ದೂರಿದರು. 

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಪಾಲಕೃಷ್ಣ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಾಲ್ಲೂಕಿನ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಕಾಟಾಚಾರಕ್ಕೆ ಜಿಲ್ಲೆಯ ಕೆಲವೆಡೆ ಆಗಮಿಸಿ ಹಾಗೆ ಬಂದು, ಹೀಗೆ ಹೋಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ತಾಲ್ಲೂಕಿನ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಸರ್ಕಾರ ಕೂಡಲೇ ಬೆಳೆ ನಷ್ಟದ ಬಗ್ಗೆ ಸಮಗ್ರವಾದ ವರದಿ ಸಿದ್ಧಪಡಿಸಿ ಪರಿಹಾರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಗ್ರೇಡ್-2 ತಹಶೀಲ್ದಾರ್ ಸುಬ್ರಮಣ್ಯಂ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಮುಖಂಡರಾದ ಜಿ.ಎಂ. ರಾಮಕೃಷ್ಣಪ್ಪ, ಜುಬೇರ್ ಅಹಮದ್, ಆರ್. ಚಂದ್ರಶೇಖರ ರೆಡ್ಡಿ, ಎಲ್. ವೆಂಕಟೇಶ್, ಎಚ್.ಎನ್. ಚಂದ್ರಶೇಖರ ರೆಡ್ಡಿ, ಟಿ.ಎಲ್. ವೆಂಕಟೇಶ್, ನಾರಾಯಣಸ್ವಾಮಿ, ಸಿ.ಕೆ. ನರಸಿಂಹಪ್ಪ, ರಾಮಾಂಜಿನಪ್ಪ, ಭಾಷಾ ಸಾಬ್, ಬೈರಾರೆಡ್ಡಿ, ಕಂಚುಕೋಟೆ ಮೂರ್ತಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು