ಬುಧವಾರ, ಆಗಸ್ಟ್ 17, 2022
25 °C

ಮೌಢ್ಯ ನಿರ್ಮೂಲನೆಗೆ ಶ್ರಮಿಸಿದ ದಾಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಡಿಲಿಜಿಯನ್ಸ್ ಸಂಯುಕ್ತ ಪ್ರೌಢಶಾಲೆಯಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಿಸಲಾಯಿತು.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೈವಾರ ಶ್ರೀನಿವಾಸ್ ಮಾತನಾಡಿ, 15ನೇ ಶತಮಾನದಲ್ಲಿ ಭಕ್ತ ಕನಕದಾಸ, ಪುರಂದರದಾಸರು ಭಕ್ತಿಮಾರ್ಗದಿಂದ ಸಮಾಜದಲ್ಲಿನ ಮೌಢ್ಯ ತೊಲಗಿಸಲು ಶ್ರಮಿಸಿದ ಮಹಾನ್ ತ್ಯಾಗಿಗಳಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸಮಾಜದ ಅನಿಷ್ಟ ಪದ್ಧತಿಗಳಾದ ಜಾತಿಪದ್ಧತಿಯನ್ನು ತೊಲಗಿಸಲು ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದರು. ಸರಳವಾದ ಹಾಗೂ ಜನತೆಗೆ ಸುಲಭ ಅರ್ಥವಾಗುಂತಹ ಆಡುಭಾಷೆಯಲ್ಲಿ ಜನಜಾಗೃತಿ ಮೂಡಿಸುತ್ತಿದ್ದರು ಎಂದರು.

ಕಾಲ್ನಡಿಗೆಯಲ್ಲಿ ಹಳ್ಳಿ ಹಳ್ಳಿ ಸುತ್ತಿ ಸಮಾಜದಲ್ಲಿನ ಮೂಢನಂಬಿಕೆ, ಅಸ್ಪೃಶ್ಯತೆ, ಮಹಿಳೆಯರ ಶೋಷಣೆ ಹೋಗಲಾಡಿಸಲು ಹಗಲಿರುಳು ಶ್ರಮಿಸುತ್ತಿದ್ದರು. ಇಂದಿನ ಜನರು ದಾಸ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕು. ದಾಸ ಸಾಹಿತ್ಯದ ನೀತಿ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯಶಿಕ್ಷಕ ರಾಜಣ್ಣ ಮಾತನಾಡಿ, ಮಹಾಪುರುಷರನ್ನು ಕುಲ, ಜಾತಿಗಳ ಚೌಕಟ್ಟಿನಲ್ಲಿ ಬಂಧಿಸಬಾರದು. ಸಮಾಜದ ಎಲ್ಲ ವರ್ಗಗಳ ಮಾರ್ಗದರ್ಶಕರು ಹಾಗೂ ಜಾತೀಯತೆ ಹೋಗಲಾಡಿಸಲು ಶ್ರಮಿಸಿದ ಮಹಾತ್ಮರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸುವುದು ಸಲ್ಲದು. ಸಮಾಜದ ಎಲ್ಲ ವರ್ಗದವರು ಒಗ್ಗೂಡಿ ಮಹಾತ್ಮರ ಜಯಂತಿ ಆಚರಿಸಬೇಕು ಎಂದರು.

ಶಿಕ್ಷಕರಾದ ರಾಮಚಂದ್ರಸಿಂಗ್, ಗೀತಾ, ಮಹಾದೇವಿ, ಶುಭವೆಂಕಟ ರೆಡ್ಡಿ, ಲಕ್ಷ್ಮೀಕುಮಾರ್, ಮುರಳಿ, ಮನೋಹರ್, ಕೃಷ್ಣ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.