ಚಿಕ್ಕಬಳ್ಳಾಪುರ: ಹಿರಿಯ ನಾಗರಿಕರು ಮನೆಯಲ್ಲಿದ್ದರೆ ಮಕ್ಕಳಿಗೆ ಅವರ ಅನುಭವದ ವಿಚಾರಗಳನ್ನು, ಸಂಪ್ರದಾಯ, ಸಂಸ್ಕೃತಿಯನ್ನು ತಿಳಿಸಿಕೊಡುತ್ತಾರೆ. ಅಂತಹ ಹಿರಿಯರಿಗೆ ಪ್ರೀತಿ ತೋರಿ ಗೌರವದಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕ್ರೀಡೆ ಮತ್ತು ಯುವಜನರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ತಂದೆ ತಾಯಿಯನ್ನು ಪೋಷಿಸುವುದನ್ನು ಬಿಟ್ಟು ಮನೆಯಿಂದ ಹೊರಹಾಕುವ ಪರಿಸ್ಥಿತಿ ನೋಡುತ್ತಿದ್ದೇವೆ. ಎಷ್ಟೋ ಜನ ಹಿರಿಯರು ಶ್ರೀಮಂತರಾದರೂ ವೃದ್ಧಾಶ್ರಮಕ್ಕೆ ಸೇರುತ್ತಿದ್ದಾರೆ. ಹಿರಿಯರು ಪ್ರೀತಿ ಹಾಗೂ ಗೌರವ ಬಿಟ್ಟರೆ ಮತ್ತೆ ಏನು ಬಯಸುವುದಿಲ್ಲ ಎಂದರು.
ಜಿಲ್ಲಾಡಳಿತ ಹಿರಿಯ ನಾಗರಿಕರಿಗೋಸ್ಕರ ಕೆಲಸ ಮಾಡಲು ಸದಾ ಸಿದ್ಧವಿದೆ. ತೊಂದರೆಗೆ ಸಿಲುಕಿದ ಹಿರಿಯ ನಾಗರಿಕರು ಯಾವುದೇ ಸಮಯದಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ತ್ವರಿತ ಸ್ಪಂದನೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1,47,263 ಹಿರಿಯ ನಾಗರಿಕರು ಇದ್ದಾರೆ. ಈ ಪೈಕಿ 56,880 ಜನರು ಗುರುತಿನ ಚೀಟಿ ಪಡೆದಿದ್ದಾರೆ. 23,642 ಜನರಿಗೆ ರಾಷ್ಟ್ರೀಯ ವೃದ್ಯಾಪ್ಯ ವೇತನ ತಲುಪುತ್ತಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ 85,985 ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ವಿ ಕೃಷ್ಣಪ್ಪ ಮಾತನಾಡಿ, ಆಧುನಿಕ ಕಾಲದಲ್ಲಿ ಕುಟುಂಬದ ವ್ಯವಸ್ಥೆ, ಸಂಪ್ರದಾಯ, ಪದ್ಧತಿಗಳು ಬದಲಾಗಿವೆ. ಅವಿಭಕ್ತ ಕುಟುಂಬಗಳು ಮಾಯವಾಗಿ ಅಣು ಕುಟುಂಬಗಳಲ್ಲಿ ವಾಸಿಸಲು ಬಯಸುತ್ತಿದ್ದಾರೆ. ವೃದ್ದಾಶ್ರಮಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯ ಎಂದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ, ನಗದು ಪುರಸ್ಕಾರ, ಪ್ರಮಾಣಪತ್ರ ಹಾಗೂ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಈಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್. ಗಂಗಾಧರಯ್ಯ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಸಂಸ್ಥಾಪಕ ಕೆ. ಎನ್ ಮೂರ್ತಿ, ಸಾಯಿ ದ್ವಾರಕಾಮಯಿ ವೃದ್ಯಾಶ್ರಮ ವ್ಯವಸ್ಥಾಪಕ ಮುರುಳಿ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ನೋಡಲ್ ಅಧಿಕಾರಿ ಆರ್. ಗಣೇಶ್, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿವೃತ್ತ ಅಧಿಕಾರಿ ಎನ್.ಎಂ ಶಾಂತರಸ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.