ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ

172 ಎಕರೆಯಲ್ಲಿ ಬೆಂಗಳೂರು ಉತ್ತರ ವಿ.ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ತಾಲ್ಲೂಕಿನ ಅಮರಾವತಿ ಗ್ರಾಮದ ಬಳಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ಥಾಪನೆ ಯಾಗುವುದರಿಂದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವಿದ್ಯಾರ್ಥಿಗಳ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ವಿ.ವಿ ನಿರ್ಮಾಣಕ್ಕಾಗಿ ಈಗಾಗಲೇ 110.25ಎಕರೆ ಸರ್ಕಾರಿ ಜಮೀನನ್ನು ವಿ.ವಿಗೆ ಹಸ್ತಾಂತರಿಸಲಾಗಿದೆ. 61.15 ಎಕರೆ ಜಾಗವನ್ನು ಭೂ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಅಮರಾವತಿ ಬಳಿ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಅಮರಾವತಿ ಬಳಿ ವಿ.ವಿ ನಿರ್ಮಾಣಕ್ಕೆ ನೀರಿನ ಸಮಸ್ಯೆ ಇಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವಿದೆ ಎಂದರು.

ಬೆಂಗಳೂರು ಉತ್ತರ ವಿ.ವಿ ಉಪಕುಲಪತಿ ಕೆಂಪರಾಜು ಮಾತನಾಡಿ, ಬೆಂಗಳೂರು ವಿ.ವಿ ವಿಭಜನೆಯಾದ ನಂತರ ಬೆಂಗಳೂರು ಉತ್ತರ ವಿ.ವಿಯ ಚಟುವಟಿಕೆಗಳು ಪ್ರಸ್ತುತ ಕೋಲಾರ ಜಿಲ್ಲಾ ಕೇಂದ್ರದಿಂದ ನಡೆಯುತ್ತಿವೆ. ಈಗ ಅಮರಾವತಿ ಬಳಿ ಗುರುತಿಸಿರುವ ಸ್ಥಳದಲ್ಲಿ ವಿ.ವಿ ಆರಂಭವಾದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡ ಬೆಂಗಳೂರು ಉತ್ತರ ವಿ.ವಿಯ ಆಡಳಿತ ಕಟ್ಟಡಗಳು ಸೇರಿದಂತೆ ಎಲ್ಲ ಕಚೇರಿಗಳು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಕಾರ್ಯ ನಿರ್ವಹಿಸಲಿವೆ ಎಂದರು.

ವಿ.ವಿ ರಿಜಿಸ್ಟ್ರಾರ್ ವೆಂಕಟೇಶ್ ಮಾತನಾಡಿ, ಭೂ ಮಾಲಿಕರಿಂದ 61.15 ಎಕರೆ ಜಾಗವನ್ನು ನೇರ ಖರೀದಿ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೆಲೆ ನಿರ್ಧರಣಾ ಸಮಿತಿಯ ಸಭೆ ನಡೆಸಿ ಬೆಲೆ ನಿಗದಿಪಡಿಸಲಾಗಿದೆ. ಜೊತೆಗೆ ಭೂ ಸ್ವಾಧೀನಕ್ಕಾಗಿ ₹23 ಕೋಟಿ ಹಣವನ್ನ ಭೂ ಸ್ವಾಧೀನ ಅಧಿಕಾರಿಯವರ ಖಾತೆಗೆ ಜಮೆ ಮಾಡಲಾಗಿದೆ ಎಂದರು.

ಸಿಂಡಿಕೇಟ್ ಸದಸ್ಯರಾದ ಸಂತೋಷ್, ದೇವರಾಜು, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಶೀಲ್ದಾರ್ ರಾಜೀವ್, ಭೂ ದಾಖಲಾತಿ ಅಧಿಕಾರಿ ಡಿ.ರವಿಕುಮಾರ್ ಯಾದವ್, ಚೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು