ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ ನಡೆಯಿಂದ ಕಳೆಗಟ್ಟಿದ ಹೊಸಹುಡ್ಯ

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ: ಗ್ರಾಮಸ್ಥರ ಸಮಸ್ಯೆ ಆಲಿಸಿದ ಅಧಿಕಾರಿಗಳು
Last Updated 20 ಫೆಬ್ರುವರಿ 2022, 6:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮವು ಗ್ರಾಮಕ್ಕೆ ಕಳೆಯನ್ನು ತಂದಿತ್ತು. ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್. ಲತಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಂದ ವಿವಿಧ ವಿಷಯ ಕುರಿತು ಅಹವಾಲು ಸ್ವೀಕರಿಸಿದರು.

ಬೆಳಿಗ್ಗೆ 10.30ರ ಸುಮಾರಿನಲ್ಲಿ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿತು. ಹೊಸಹುಡ್ಯ ಪ್ರವೇಶದಲ್ಲಿಯೇ ಮಹಿಳೆಯರು ಜಿಲ್ಲಾಧಿಕಾರಿ ಅವರಿಗೆ ಆರತಿ ಬೆಳಗಿ, ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಇಡೀ ಗ್ರಾಮದಲ್ಲಿ ರಂಗೋಲಿ ಹಾಕಿ ತೋರಣಗಳನ್ನು ಕಟ್ಟಲಾಗಿತ್ತು. ನೇರವಾಗಿ ಅಧಿಕಾರಿಗಳು ಗ್ರಾಮದ ಲಕ್ಷ್ಮಿಜನಾರ್ದನ ಸ್ವಾಮಿಗೆ ಪೂಜೆ ಸಲ್ಲಿಸಿದರು.

ಕೃಷಿ ವಸ್ತು ಪ್ರದರ್ಶನ, ತೋಟಗಾರಿಕೆ ಬೆಳೆಗಳ ವಸ್ತು ಪ್ರದರ್ಶನ, ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಪೌಷ್ಟಿಕ ಆಹಾರ ಸಪ್ತಾಹ ಶಿಬಿರ, ಬಾಲ್ಯವಿವಾಹ ತಡೆ ಕುರಿತ ಕಾರ್ಯಕ್ರಮ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಈ ಎಲ್ಲ ಕಡೆಗಳಿಗೂ ಭೇಟಿ ನೀಡಿದರು. ಕೃಷಿ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ವಿದ್ಯಾರ್ಥಿಗಳ ಜತೆ ಸಂವಾದ: ಹೊಸಹುಡ್ಯ ಪಂಚಾಯಿತಿ ವ್ಯಾಪ್ತಿಯ ಗಿಡ್ನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

‘ಶಿಕ್ಷಣ ಜೀವನ ಕಟ್ಟಿಕೊಳ್ಳಲು ಮಹತ್ವವಾದುದು. ಸಮಾಜದಲ್ಲಿ ನಿಮ್ಮ ಘನತೆಯೂ ಹೆಚ್ಚುತ್ತದೆ. ಇದನ್ನು ಅರಿತು ನೀವು ವಿದ್ಯಾಭ್ಯಾಸ ಮಾಡಬೇಕು. ಕನ್ನಡ ಮಾಧ್ಯಮದಲ್ಲಿ ಓದಿದರೆ ಕೀಳು ಅಥವಾ ಆಂಗ್ಲ ಮಾಧ್ಯಮ ಕಷ್ಟ ಎಂಬ ಮನೋಭಾವ ಬೇಡ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ನಾನು ಸಹ ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಿದ್ದೇನೆ. ನಂತರ ಆಂಗ್ಲ ಮಾಧ್ಯಮ ಆಯ್ಕೆ ಮಾಡಿಕೊಂಡೆ. ಇಲ್ಲಿ ಮಾಧ್ಯಮ ಮುಖ್ಯವಲ್ಲ. ನಾವು ಗಳಿಸುವ ಜ್ಞಾನವೇ ಮುಖ್ಯ’ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಡಿಡಿಪಿಐ ಜಯರಾಮರೆಡ್ಡಿ, ಪಿಡಿಒ ಪ್ರದೀಪ್,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT