ಬುಧವಾರ, ಅಕ್ಟೋಬರ್ 28, 2020
28 °C
ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಹಲವು ಸಂಘಟನೆಗಳು, ವಿವಿಧ ಪಕ್ಷಗಳ ಬೆಂಬಲ ಘೋಷಣೆ

ಚಿಕ್ಕಬಳ್ಳಾಪುರ: ಬಂದ್‌ ಬೆಂಬಲಿಸಿ ಪ್ರತಿಭಟನೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ವಿವಿಧ ಕಾಯ್ದೆಗಳ ತಿದ್ದುಪಡಿ ಸುಗ್ರಿವಾಜ್ಞೆಗಳ ವಿರೋಧಿಸಿ ಆಗ್ರಹಿಸಿ ರೈತ ಸಂಘಟನೆಗಳು ಸೋಮವಾರ (ಸೆ.28) ಕರೆ ನೀಡಿರುವ ಕರ್ನಾಟಕ ಬಂದ್ ಬೆಂಬಲಿಸಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲು ವಿವಿಧ ಪಕ್ಷಗಳ ಜತೆಗೆ ಅನೇಕ ಸಂಘಟನೆಗಳು ನಿರ್ಧರಿಸಿವೆ.

ರಾಜ್ಯ ರೈತ ಸಂಘದ ವಿವಿಧ ಬಣಗಳು, ಕೇಂದ್ರಿಯ ಕಾರ್ಮಿಕ ಸಂಘಟನೆಗಳಾದ ಎಐಟಿಯುಸಿ ( ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್), ರೈತ–ದಲಿತ–ಕಾರ್ಮಿಕ ಸಂಘಟನೆಗಳ ಐಕ್ಯ ವೇದಿಕೆ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ, ಕನ್ನಡಪರ ಸಂಘಟನೆಗಳು ಸೇರಿ 20ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿವೆ. ಸಿಪಿಎಂ, ಕಾಂಗ್ರೆಸ್‌, ಜೆಡಿಎಸ್‌, ಪ್ರಜಾ ಸಂಘರ್ಷ ಸಮಿತಿ ಪಕ್ಷಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಸೋಮವಾರ ನಡೆಯಲಿರುವ ಬಂದ್ ಅನ್ನು ಬೆಂಬಲಿಸಿ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಭಾನುವಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಟೊದಲ್ಲಿ ಪ್ರಚಾರ ನಡೆಸಿದರು. ಪ್ರತಿ ಅಂಗಡಿಗಳಿಗೆ ತಲುಪಿದ ಕಾರ್ಯಕರ್ತರು ಕರ ಪತ್ರ ಹಂಚಿಕೆ ಮಾಡಿ ಮನವಿ ಮಾಡಿಕೊಂಡರು.

ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಬೆಳಗ್ಗೆ 5.30 ಗಂಟೆಗೆ ಶಿಡ್ಲಘಟ್ಟ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಇದೇ ಸಂದರ್ಭ ಬೈಕ್‌ ರ್‍ಯಾಲಿ ಸಹ ನಡೆಯಲಿದೆ.

ಭದ್ರತೆ: ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ತಡೆಯುವ ಸಲುವಾಗಿ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, 650 ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ, ಎರಡು ಕೆಎಸ್‌ಆರ್‌ಪಿ ತುಕಡಿಗಳು, 8 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿಗಳು ಹಾಗೂ 12 ಸೆಕ್ಟರ್‌ ಸಂಚಾರಿ ತಂಡಗಳನ್ನು ನಿಯೋಜಿಸಲಾಗಿದೆ.

ಪರೀಕ್ಷೆ ಮುಂದೂಡಿಕೆ: ಬಂದ್ ಹಿನ್ನಲೆಯಲ್ಲಿ ಸೋಮವಾರ ನಡೆಯಬೇಕಿದ್ದ ವಿಜ್ಞಾನ, ರಾಜ್ಯಶಾಸ್ತ್ರ ಮತ್ತು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ವಿಷಯದ ಪರೀಕ್ಷೆಗಳು ಹಾಗೂ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯನ್ನು 29ಕ್ಕೆ ಮುಂದೂಡಲಾಗಿದೆ.

ಸರ್ಕಾರ ಸೋಮವಾರ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ನಿಲ್ಲಿಸದಿರಲು ನಿರ್ಧರಿಸಿದೆ. ಮೊದಲೇ ಲಾಕ್‌ಡೌನ್‌, ಕೋವಿಡ್‌ 19 ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಿವಿಧ ಉದ್ಯಮಗಳ ವರ್ತಕರು, ಆಟೊ ಚಾಲಕರು ಬಂದ್‌ ಕುರಿತು ಸ್ಪಷ್ಟ ನಿಲುವು ತಳೆದಿಲ್ಲ. ಕೆಲವರು ಬಂದ್‌ ಬೆಂಬಲಿಸುವುದಾಗಿ ತಿಳಿಸಿದರೆ, ಕೆಲವರು ಬಂದ್‌ಗೆ ನೈತಿಕ ಬೆಂಬಲ ಮಾತ್ರ ವಹಿವಾಟು ನಡೆಸುತ್ತೇವೆ ಎಂದು ಹೇಳಿದರು. ಹೀಗಾಗಿ ಮುಷ್ಕರ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ನಗರದಲ್ಲಿ ಭಾನುವಾರ ಬಂದ್‌ ಬಗ್ಗೆ ಪ್ರಚಾರ ನಡೆಸಿದ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ‘ರಾಜ್ಯ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿ ಭೂಸುಧಾರಣೆ, ಕೈಗಾರಿಕೆ, ಎಪಿಎಂಸಿ ಸೇರಿ ಹಲವು ಕಾಯ್ದೆಗಳನ್ನು ತಿದ್ದುಪಡಿಗೆ ಹೊರಡಿಸಿರುವ ಸುಗ್ರಿವಾಜ್ಞೆಗಳನ್ನು ಹಿಂದೆ ಪಡೆಯಬೇಕು. ಅದಕ್ಕೆ ಆಗ್ರಹಿಸಿ ನಡೆಸುತ್ತಿರುವ ಈ ಬಂದ್‌ಗೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ಜಿಲ್ಲಾ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆ ಬೈಕ್ ರ್‍ಯಾಲಿ, ಮೆರವಣಿಗೆ ಮೂಲಕ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು. ಜಿಲ್ಲೆಯ ವರ್ತಕರು, ಹೋಟೆಲ್ ಮಾಲೀಕರು ಸ್ವಯಂ ಪ್ರೇರಿತರಾಗಿ ಮುಷ್ಕರಕ್ಕೆ ಬೆಂಬಲ ನೀಡಬೇಕು. ಕೂಲಿ, ಕಾರ್ಮಿಕ ಸಂಘಟನೆಗಳು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು