ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ಬಸ್ ಸಂಚಾರಕ್ಕೆ ಆಗ್ರಹ

ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳಿಂದ ಕೆಎಸ್‌ಆರ್‌ಟಿಸಿ ವಿಭಾಗ ಕಚೇರಿಗೆ ಮುತ್ತಿಗೆ
Last Updated 1 ಅಕ್ಟೋಬರ್ 2019, 14:21 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಾಲಾ, ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಆಗ್ರಹಿಸಿ ನಗರದಲ್ಲಿ ಮಂಗಳವಾರ ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ವಿಭಾಗ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.

ಬಳಿಕ ವಿಭಾಗೀಯ ಸಾರಿಗೆ ಅಧಿಕಾರಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಕೂಡಲೇ ಬಸ್‌ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಎಬಿವಿಪಿ ವಿಭಾಗೀಯ ಸಂಚಾಲಕ ಮಂಜುನಾಥ್ ರೆಡ್ಡಿ, ‘ಶಿಕ್ಷಣಕ್ಕಾಗಿ ನಿತ್ಯ ಗ್ರಾಮೀಣ ಪ್ರದೇಶದಿಂದ ಸಾವಿರಾರು ವಿದ್ಯಾರ್ಥಿಗಳು ನಗರಕ್ಕೆ ಬರುತ್ತಾರೆ. ಕೋಲಾರ, ಬೆಂಗಳೂರು, ಗೌರಿಬಿದನೂರು, ಬಾಗೇಪಲ್ಲಿ, ಚಿಂತಾಮಣಿ, ದೊಡ್ಡಬಳ್ಳಾಪುರ ಮುಂತಾದ ಕಡೆಗಳಿಂದ ನಗರಕ್ಕೆ ಬರುವ ಬಹುತೇಕ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಅವಲಂಬಿಸಿದ್ದಾರೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳು ನಿತ್ಯ ಬೆಳಿಗ್ಗೆ 7ಕ್ಕೆ ನಿಲ್ದಾಣಕ್ಕೆ ಬಂದು 9ರವರೆಗೆ ಬಸ್‌ಗಾಗಿ ಕಾಯಬೇಕು. ಸಕಾಲದಲ್ಲಿ ಬಸ್ ಇಲ್ಲದೆ 9 ಗಂಟೆ ವರೆಗೂ ಕಾದು ತಡವಾಗಿ ಹೋಗುತ್ತಿರುವುದರಿಂದ, ದಿನದ ಒಂದು ತಾಸಿನ ಬೋಧನೆಯಿಂದ ವಂಚಿತರಾಗುತ್ತಿದ್ದೇವೆ. ಪ್ರತಿನಿತ್ಯ ಉಪನ್ಯಾಸಕರಿಂದ ಬೈಗುಳ ಕೇಳಬೇಕು. ಕಾಲೇಜಿನಿಂದ ಹೊರಹಾಕುತ್ತಾರೆ. ಪೋಷಕರಿಗೆ ದೂರವಾಣಿ ಕರೆ ಮಾಡಿ ತಡವಾಗಿ ಕಾಲೇಜಿಗೆ ಬರುತ್ತಾರೆ ಎಂದು ದೂರುತ್ತಾರೆ. ಈ ಸಮಸ್ಯೆಗೆ ಪರಿಹಾರ ನೀಡುವವರು ಯಾರು’ ಎಂದು ಪ್ರಶ್ನಿಸಿದರು.

‘ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ಸರಿಯಾದ ಸಮಯಗಳಿಗೆ ಬಸ್‌ ಸಂಚಾರ ಸಿಗದೆ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬರುವ ಒಂದೆರಡು ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಯಾಣಿಸಲಾಗದೆ ಬಿದ್ದು ಗಾಯಗೊಂಡ ಘಟನೆಗಳು ಮೇಲಿಂದ ಮೇಲೆ ಮರುಕಳುಹಿಸುತ್ತಿವೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ತಿಳಿಸಿದರು.

‘ಜಿಲ್ಲೆಯ ಮೂಲಕ ಸಂಚರಿಸುವ ಅಂತರರಾಜ್ಯ ಬಸ್‌ಗಳಲ್ಲಿ ಕೂಡ ವಿದ್ಯಾರ್ಥಿಗಳ ಪಾಸ್‌ಗೆ ಅನುಮತಿ ಕಲ್ಪಿಸಬೇಕು. ಎಸ್‌ಜೆಸಿಐಟಿ, ಕೆ.ವಿ ಕ್ಯಾಂಪಸ್‌, ಪೇರೇಸಂದ್ರ, ಮುದ್ದೇನಹಳ್ಳಿ ಸೇರಿದಂತೆ ಕಾಲೇಜುಗಳು ಇರುವ ಕಡೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸಂಚಾರ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

ವಿದ್ಯಾರ್ಥಿ ಮುಖಂಡರಾದ ಸಂತೋಷ್, ಗಿರೀಶ್, ಅಸ್ಲಂ, ಪಲ್ಲವಿ, ಸೃಜನ್, ಗಾಯತ್ರಿ, ಸೌಮ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT