ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಮೀಸಲಾತಿಗೆ ಆಗ್ರಹ

ಸವಿತಾ ಸಮಾಜದಿಂದ ಡಿ.ಸಿ ಕಚೇರಿ ಎದುರು ಪ್ರತಿಭಟನೆ
Last Updated 16 ನವೆಂಬರ್ 2022, 4:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸವಿತಾ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಮುದಾಯದ ಮುಖಂಡರು ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

‘ಸವಿತಾ ಸಮಾಜಕ್ಕೆ ನ್ಯಾಯ, ಸಮಾನತೆ ಕೊಡಿ’, ‘ಸವಿತ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಕೊಡಿ’ ಎಂದು ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕ್ಷೌರ ಮಾಡುವ ಮೂಲಕ ಪ್ರತಿಭಟನೆ ದಾಖಲಿಸಿದರು.

ಸವಿತಾ ಸಮಾಜವನ್ನು ಪ್ರವರ್ಗ ‘2ಎ’ನಿಂದ ಪ್ರತ್ಯೇಕಿಸಿ ಒಳ ಮೀಸಲಾತಿ ನೀಡಬೇಕು ಅಥವಾ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ‍ಪ್ರತಿಭಟನಕಾರರು ಆಗ್ರಹಿಸಿದರು.

ಸವಿತಾ ಸಮಾಜವು ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ವೃತ್ತಿಯನ್ನು ನಂಬಿ ಜೀವನ ನಡೆಸುತ್ತಿದ್ದೇವೆ. ಸಮಾಜಕ್ಕೆ ಸರ್ಕಾರವು ನ್ಯಾಯ ಒದಗಿಸಬೇಕು. ಅಸ್ಪೃಶ್ಯರಿಗಿಂತಲೂ ನಮ್ಮನ್ನು ಕಡೆಯಾಗಿ ಕಾಣಲಾಗುತ್ತಿದೆ. ಬೇರೆ ಸಮುದಾಯಗಳು ನಮ್ಮನ್ನು ಅತ್ಯಂತ ಕೀಳಾಗಿ ನೋಡುತ್ತಾರೆ. ಯಾವುದೇ ಜಾತಿ, ಧರ್ಮದ ತಾರತಮ್ಯವಿಲ್ಲದೆ ಎಲ್ಲರಿಗೂ ನಮ್ಮ ಸೇವೆ ನೀಡುತ್ತಿದ್ದೇವೆ.

ಗ್ರಾಮಾಂತರ ಪ್ರದೇಶಗಳಲ್ಲಿ ನಮ್ಮ ಸಮಾಜಕ್ಕೆ ಸ್ವಲ್ಪವೂ ಕಿಮ್ಮತ್ತಿಲ್ಲ. ಸಮುದಾಯಕ್ಕೆ ನೋವು ತರುವ ಶಬ್ದಗಳನ್ನು ಬಳಸಿ ಜಾತಿನಿಂದೆ ಕೂಡು ಮಾಡುತ್ತಾರೆ. ಹೀಗಿದ್ದರೂ ನೋವು ಸಹಿಸಿಕೊಂಡು ಬದುಕು ನಡೆಸುತ್ತಿದ್ದೇವೆ. ಅತಿ ಸಣ್ಣ, ತೀರಾ ಹಿಂದುಳಿದಿರುವ ಈ ತಳ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು. ಇದರಿಂದ ಸಮುದಾಯದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಪ್ರತಿಭಟನಕಾರರು ತಿಳಿಸಿದರು.

ಸವಿತಾ ಸಮಾಜ ಮೀಸಲಾತಿ ಹೋರಾಟ ಸಮಿತಿ ಸಂಸ್ಥಾಪಕ ಎಂ.ಎಸ್. ಮುತ್ತುರಾಜ್, ರಾಜ್ಯ ಅಧ್ಯಕ್ಷ ನಾಗರಾಜ್, ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್, ರಾಮಾಂಜಪ್ಪ, ಶಿವಕುಮಾರ್, ಮಂಜುನಾಥ್, ನಾಗೇಶ್, ನಟರಾಜ್, ಗಂಗಾಧರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT