ಶುಕ್ರವಾರ, ಸೆಪ್ಟೆಂಬರ್ 17, 2021
25 °C

ಹದಗೆಟ್ಟ ರಸ್ತೆ: ಸಂಚಾರ ದುಸ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೇಳೂರು: ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಮುಖ್ಯರಸ್ತೆ ತಿರುವಿನಲ್ಲಿ ನೋಡಿದವರಿಗೆ ವಾಹನಗಳು ಸಂಚರಿಸುತ್ತಿವೆಯೋ ಅಥವಾ ನರ್ತಿಸುತ್ತಿವೆಯೋ ಎಂಬ ಅನುಮಾನ ಮೂಡುತ್ತದೆ. ಇಂತಹ ಅನುಮಾನಕ್ಕೆ ರಸ್ತೆಗಳು ಹದಗೆಟ್ಟಿರುವುದೇ ಮೂಲ ಕಾರಣವಾಗಿದೆ.

ಗ್ರಾಮೀಣ ಭಾಗದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಈ ಗುಂಡಿಗಳ ನಡುವೆಯೇ ರಸ್ತೆ ಹುಡುಕುವ ಸ್ಥಿತಿ ಇದೆ ಎಂದರೆ ಅತಿಶಯೋಕ್ತಿಯಲ್ಲ. ಒಂದು ಗುಂಡಿ ತಪ್ಪಿಸುವುದರೊಳಗೆ ಮತ್ತೊಂದು ಗುಂಡಿ ಎದುರಾಗುತ್ತದೆ. ಇದರಿಂದ ಹೊಸಹುಡ್ಯ ಗ್ರಾಮದಲ್ಲಿ ವಾಹನ ಚಲಾಯಿಸುವುದು ಚಾಲಕರಿಗೆ ಸವಾಲಿನ ಕೆಲಸವಾಗಿದೆ.

ಈ ಭಾಗದ ರಸ್ತೆಗಳು ಡಾಂಬರು ದರ್ಶನ ಕಂಡು ಸುಮಾರು ವರ್ಷಗಳೇ ಉರುಳಿವೆ. ಆ ರಸ್ತೆಗಳ ಡಾಂಬರು ಕಿತ್ತು ಹೋಗಿದ್ದು, ಗುಂಡಿಗಳು ಅಪಾಯ ಆಹ್ವಾನಿಸುತ್ತಿವೆ. ಈ ರಸ್ತೆಯಲ್ಲಿ ಚಲಿಸುವ ವಾಹನಗಳು ಬೀಳುತ್ತವೆಯೇ ಎನ್ನುವ ಆತಂಕ ಪ್ರಯಾಣಿಕರದ್ದು. ಇತ್ತೀಚೆಗೆ ವೃದ್ಧಯೊಬ್ಬರು ದ್ವಿಚಕ್ರವಾಹನದಲ್ಲಿ ಬಿದ್ದು ಕೈಕಾಲು ಪೆಟ್ಟಾಗಿ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ. ಇಂತಹ ಅವಘಡಗಳು ಸರ್ವೇ ಸಾಮಾನ್ಯ.

ಈ ಭಾಗದ ಮಕ್ಕಳು ವಾಹನಗಳಲ್ಲಿ ಶಾಲೆಗೆ ಹೋಗಿ ಮರಳಿ ಮನೆಗೆ ಬರುವವರೆಗೆ ಪಾಲಕರು ಆತಂಕದಲ್ಲಿ ಇರುತ್ತಾರೆ. ರಸ್ತೆ ದುರಸ್ತಿಗೆ ಸಾಕಷ್ಟು ಹಣ ಬಂದರೂ ಕಾಮಗಾರಿ ನಡೆಸುವವರ ನಿರ್ಲಕ್ಷ್ಯದಿಂದ ಈ ಸಮಸ್ಯೆ ಹಾಗೆಯೇ ಉಳಿದಿದೆ ಎಂಬುದು ಜನರ ಆರೋಪ.

‘ಹದಗೆಟ್ಟ ರಸ್ತೆಯಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಸುಮಾರು ಎರಡು, ಮೂರು ಅಡಿಗಳಷ್ಟು ಗುಂಡಿಗಳು ಬಿದ್ದು ರಸ್ತೆ ಸಂಪೂರ್ಣ ಹದೆಗಟ್ಟಿದೆ. ಸುಮಾರು ವರ್ಷಗಳಿಂದ ಈ ರಸ್ತೆ ಸುಧಾರಣೆ ಕಂಡಿಲ್ಲ. ಯಾವೊಬ್ಬ ರಾಜಕಾರಣಿಯೂ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ಹೊಸಹುಡ್ಯ ಗ್ರಾಮದ ಮುಖ್ಯ ರಸ್ತೆ ಬದಿಯ ನಿವಾಸಿ ಕೆ.ವಿ. ವೆಂಕಟರವಣಪ್ಪ ದೂರುತ್ತಾರೆ.

‘ಕೇವಲ ಚುನಾವಣೆ ಬಂದಾಗ ಎಲ್ಲಾ ರಾಜಕೀಯ ನಾಯಕರಿಗೆ ಎಲ್ಲಾ ಕುಗ್ರಾಮಗಳು ಸಹ ಕಾಣಿಸುತ್ತವೆ. ಹೊಸಹುಡ್ಯ ಕಾಣಿಸುವುದೇ ಇಲ್ಲ’ ಎಂದು ದೂರುತ್ತಾರೆ ರೈತ ಮುಖಂಡ ಪಿ.ವಿ. ಕೃಷ್ಣಪ್ಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.