ಶುಕ್ರವಾರ, ಅಕ್ಟೋಬರ್ 18, 2019
27 °C
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಭಾಗಿ

ಅಭಿವೃದ್ಧಿಗೆ ಪರಸ್ಪರ ಸಹಕಾರ ಅಗತ್ಯ

Published:
Updated:
Prajavani

ಚಿಕ್ಕಬಳ್ಳಾಪುರ: ‘ಪ್ರಜೆಗಳ ಜತೆಗೆ ಜನಪ್ರತಿನಿಧಿಗಳು ಕೈಜೋಡಿಸಿದಾಗ ಮಾತ್ರ ಸಮಾಜಮುಖಿ ಕಾರ್ಯಗಳು, ಅಭಿವೃದ್ಧಿ ಕೆಲಸಗಳನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಗುತ್ತದೆ’ ಎಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಶನಿವಾರ ಭಾಗವಹಿಸಿ ಅವರು ಮಾತನಾಡಿದರು.

‘ದಕ್ಷಿಣ ಭಾರತದ ಅತ್ಯಂತ ಚಿಕ್ಕ ರಾಜ್ಯವಾದ ಪುದುಚೇರಿಯ ಸರ್ವಾಂಗೀಣ ಅಭಿವೃದ್ಧಿಗೆ ದಾರಿಯನ್ನು ಹುಡುಕುವಾಗ ಸತ್ಯಸಾಯಿ ಸಂಸ್ಥೆ ನಮಗೆ ಭರವಸೆಯ ಬೆಳಕಾಗಿ ದೊರಕಿತು. ಅವರ ಸಹಕಾರದಿಂದ ನಮ್ಮ ರಾಜ್ಯವು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗಿದೆ. ಸತ್ಯಸಾಯಿ ಸಂಸ್ಥೆಯು ಮಾನವ ಸೇವೆಯನ್ನೇ ಮಾಧವ ಸೇವೆಯನ್ನಾಗಿ ಮಾಡಿಕೊಂಡು ಕೃತಾರ್ಥ ಕೈಂಕರ್ಯ ಮಾಡುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ನಮ್ಮ ರಾಜ್ಯದ ಜನರು ಶಿಕ್ಷಣ ಸಂಸ್ಥೆಗಳನ್ನು ಬಯಸಿದ್ದರು. ಅದನ್ನು ಭಗವಾನ್ ಸತ್ಯ ಸಾಯಿಬಾಬಾ ಅವರ ಸಂಸ್ಥೆಯು ಉದಾರವಾಗಿ ನೀಡಿ, ಉಚಿತವಾಗಿ ಶಿಕ್ಷಣ ದೊರೆಯುವಂತೆ ಮಾಡಿದರು. ಆದ್ದರಿಂದ ಸತ್ಯಸಾಯಿ ಸಂಸ್ಥೆಗೆ ಪುದುಚೇರಿ ಜನತೆ ಸದಾ ಆಭಾರಿಯಾಗಿದ್ದೇವೆ. ಈ ಸಂಸ್ಥೆಯ ಆದರ್ಶವನ್ನು ಇತರರೂ ಪಾಲಿಸಿದರೆ ನೆಮ್ಮದಿಯ ನಾಳೆಯನ್ನು ಭರವಸೆಯಿಂದ ನಿರೀಕ್ಷಿಸಬಹುದು’ ಎಂದು ತಿಳಿಸಿದರು.

ಭಗವಾನ್ ಸತ್ಯ ಸಾಯಿಬಾಬಾ ಅವರ ಸಂದೇಶ ವಾಹಕ ಮಧುಸೂದನ ಸಾಯಿ ಮಾತನಾಡಿ, ‘ಅನ್ನ, ಅಕ್ಷರ, ಆರೋಗ್ಯ, ಆಯುಷ್ಯಗಳನ್ನು ದಯಪಾಲಿಸುವ ಲೋಕಮಾತೆಯರೇ ದುರ್ಗಾ, ಲಕ್ಷ್ಮೀ, ಸರಸ್ವತಿಯರು. ಈ ಮಾತೆಯರನ್ನು ಯಾಗ ಸಂದರ್ಭದಲ್ಲಿ ಸ್ಮರಿಸುವುದರಿಂದ ಪಂಚೇಂದ್ರಿಯಗಳು ಕಾರ್ಯಶೀಲವಾಗಿರುತ್ತವೆ. ಆಚರಣೆಗಳ ಮಹತ್ವ ಅರಿತು ಬಾಳಿದರೆ ಲೋಕದಲ್ಲಿರುವ ಎಲ್ಲ ಜೀವಿಗಳಿಗೂ ಒಳಿತಾಗುತ್ತದೆ’ ಎಂದರು.

ಗುಲ್ಬರ್ಗಾದ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ‘ನಿಸ್ವಾರ್ಥ ಪರರಾಗಿ ಮಾನವ ಸೇವೆಯನ್ನು ಮಾಡಿದರೆ ಮಾಧವನ ಅನುಗ್ರಹ ಪಡೆಯಲು ಸಾಧ್ಯವಾಗುತ್ತದೆ. ನಾವು ಸಲ್ಲಿಸುವ ಕಿಂಚಿತ್ ಸೇವೆಯು ನಮ್ಮ ಬದುಕಿನಲ್ಲಿ ಪುಣ್ಯ ಸಂಚಯನ ಮಾಡಲಿದೆ’ ಎಂದು ಹೇಳಿದರು.

‘ಕೆಲವೊಮ್ಮೆ ಜೀವನದಲ್ಲಿ ಪ್ರಮಾದಗಳು ಅರಿವಿಲ್ಲದೆ ಸಂಭವಿಸುತ್ತವೆ. ಅವುಗಳ ಪರಿಣಾಮ ನಿವಾರಿಸಿಕೊಳ್ಳಬೇಕಾದರೆ ಹೃದಯದಲ್ಲಿ ಪ್ರೀತಿ ಮತ್ತು ಕರುಣೆಯನ್ನು ತುಂಬಿಸಿಕೊಳ್ಳಬೇಕು. ದುಡ್ಡು ಇದ್ದರೆ ಎಲ್ಲವೂ ನೆರವೇರುತ್ತದೆ ಎಂಬುದು ಭ್ರಮೆ. ಜೀವನದಲ್ಲಿ ಮಾಡಿದ ಸತ್ಕಾರ್ಯಗಳೇ ಆಪತ್ಕಾಲ ಮತ್ತು ಅಗತ್ಯದ ಸನ್ನಿವೇಶಗಳಲ್ಲಿ ಕೈ ಹಿಡಿಯುತ್ತವೆ ಎಂಬ ವಿಚಾರ ಎಲ್ಲರೂ ಅರಿತು ಅದಕ್ಕೆ ತಕ್ಕಂತೆ ಕ್ರಿಯಾಶೀಲರಾಗಬೇಕು’ ಎಂದು ತಿಳಿಸಿದರು.

ದಸರಾ ಪ್ರಯುಕ್ತ ಹೃದಯ ಮಂದಿರದ ಯಾಗ ಮಂಟಪದಲ್ಲಿ ಶನಿವಾರ ಮಹಾರುದ್ರಯಾಗಕ್ಕೆ ಚಾಲನೆ ನೀಡಲಾಯಿತು. ನವದುರ್ಗಾರಾಧನೆ, ಸರಸ್ವತಿ ಮತ್ತು ಮೇಧಾ ದಕ್ಷಿಣಾಮೂರ್ತಿ ಹೋಮಗಳು ನೆರವೇರಿದವು. ಸಾಮೂಹಿಕ ಪ್ರಾರ್ಥನೆಯ ಜತೆಗೆ ದುರ್ಗಾ ಮಾತೆಯ ಏಳನೇ ಅವತಾರವಾದ ‘ಕಾಲರಾತ್ರಿಗೆ’ ಅಷ್ಟಾವಧಾನ ಸೇವೆಯನ್ನು ಸಲ್ಲಿಸಲಾಯಿತು.

Post Comments (+)