ಶನಿವಾರ, ಮಾರ್ಚ್ 25, 2023
22 °C
ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಣೆ

ಹೈನುಗಾರರು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ಫಲಾನುಭವಿಗಳಿಗೆ ಚೆಕ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಹೈನುಗಾರರು ಒಕ್ಕೂಟದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗುಂಪು ರಾಸು ವಿಮೆ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಲಭ್ಯಗಳಿವೆ. ಇವುಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾಣಬೇಕು ಎಂದು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ತಿಳಿಸಿದರು. 

ಇಲ್ಲಿನ ಶಿಬಿರ ಕಚೇರಿಯಲ್ಲಿ ಸೋಮವಾರ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು. 

ಮೂಕ ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆ ಎದುರಾದರೆ ಅದನ್ನು ಅವುಗಳು ಹೇಳಿಕೊಳ್ಳಲು ಸಾಧ್ಯವಿಲ್ಲ. ಬಹಳಷ್ಟು ಬಡ ಕುಟುಂಬಗಳು ಒಂದು ಹಸುವನ್ನು ಸಾಕಿ ಜೀವನ ನಡೆಸುತ್ತಿವೆ. ಈ ಎಲ್ಲ ಕಾರಣದಿಂದ ರಾಸುಗಳಿಗೆ ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು. ‌

ಹೈನುಗಾರರ ಅಭಿವೃದ್ಧಿಗೆ ಕೋಚಿಮುಲ್ ಬದ್ಧವಾಗಿದೆ. ರೈತರಿಗೆ ಅವರ ಕುಟುಂಬಕ್ಕೆ ಅನುಕೂಲವಾಗುವ ಹಲವು ಯೋಜನೆಗಳು ಜಾರಿಯಲ್ಲಿವೆ. ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪುನೀತ್ ರಾಜ್‌ಕುಮಾರ್ ರೈತರ ಬಗ್ಗೆ ಅಪಾರವಾದ ಗೌರವ ಹೊಂದಿದ್ದರು. ನಂದಿ ಹಾಲಿನ ಉತ್ಪನ್ನಗಳ ರಾಯಭಾರಿ ಆಗಿದ್ದರು. ಹಾಲಿನ ಉತ್ಪನ್ನಗಳ ಜಾಹೀರಾತಿನಲ್ಲಿ ನಟಿಸಲು ಯಾವುದೇ ಸಂಭಾವನೆ ಸಹ ಪಡೆಯುತ್ತಿರಲಿಲ್ಲ ಎಂದು ಹೇಳಿದರು. 

ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಿ.ಕೆ.ಶಿವಕುಮಾರ್ ಮಾತನಾಡಿ, ಪಶು ಆಹಾರವನ್ನು ಬಳಕೆ ಮಾಡಿಕೊಂಡು ಹಾಲು ಉತ್ಪಾದನೆ ಹೆಚ್ಚಿಸಬೇಕು. ರಾಸು ವಿಮೆ, ಗುಂಪು ವಿಮೆ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೋವಿಡ್ ಸಂದರ್ಭದಲ್ಲಿ ಹಾಲು ಮಾರಾಟ ಆಗುತ್ತಿರಲಿಲ್ಲ. ಇದರಿಂದ ನಷ್ಟ ಅನುಭವಿಸಿದೆವು. ಕೋವಿಡ್ ನಂತರ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ. ರೈತರ ಕಲ್ಯಾಣಕ್ಕೆ ಒಕ್ಕೂಟ ಶ್ರಮಿಸುತ್ತಿದೆ ಎಂದರು.  

30 ಫಲಾನುಭವಿಗಳಿಗೆ ಗುಂಪು ರಾಸು ವಿಮೆ, 23 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ 2020–21ನೇ ಸಾಲಿನ ಸಾಮಾನ್ಯಸಭೆಯಲ್ಲಿ ಬಹುಮಾನ ಪಡೆದ ಸಂಘಗಳಿಗೆ ಚೆಕ್ ವಿತರಿಸಲಾಯಿತು. ಶಿಬಿರ ಕಚೇರಿ ಸಿಬ್ಬಂದಿ, ಹೈನುಗಾರರು
ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.