ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ ತಾಲ್ಲೂಕು ಕಚೇರಿಯಲ್ಲೇ ನೀರಿಗೆ ಬರ

Last Updated 29 ನವೆಂಬರ್ 2020, 2:10 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕು ಕಚೇರಿ ಆವರಣದಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ಕಳೆದ ಎಂಟು ತಿಂಗಳಿನಿಂದಲೂ ಕೆಟ್ಟಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗಿದೆ.

ಶೌಚಾಲಯ ಇಲ್ಲದೇ ಪುರುಷರು ಮತ್ತು ಮಹಿಳೆಯರು ಪರದಾಡುವಂತಾಗಿದೆ. ತಾಲ್ಲೂಕು ಆಡಳಿತದ ಕಚೇರಿಯಲ್ಲಿಯೇ ಈ ಪರಿಸ್ಥಿತಿಯಾದರೆ, ಉಳಿದ ಕಚೇರಿಗಳಲ್ಲಿನ ಪರಿಸ್ಥಿತಿ ಏನು ಎಂಬುದು ನಾಗರಿಕರ ಪ್ರಶ್ನೆ.

‌ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಮಿನಿ ವಿಧಾನಸೌಧವಿದೆ. ಪಕ್ಕದಲ್ಲಿಯೇ ಪುರಸಭೆಯ ಮಳಿಗೆಗಳು ಹಾಗೂ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವಿದೆ. ಮಿನಿ ವಿಧಾನಸೌಧದ ಕೆಳ ಮಹಡಿಯ ಬಲಭಾಗದಲ್ಲಿ ಚುನಾವಣಾ ಶಾಖೆ, ತಹಶೀಲ್ದಾರ್, ಗ್ರೇಡ್-2 ತಹಶೀಲ್ದಾರ್ ಕೊಠಡಿಗಳು, ಆಡಳಿತ ಸಿಬ್ಬಂದಿ ಕಚೇರಿ ಕೊಠಡಿ ಹಾಗೂ ಬಲಭಾಗದಲ್ಲಿ ಉಪಖಜಾನೆ, ಆಹಾರ ನಿರೀಕ್ಷಕರ ಕಚೇರಿಯ ಕೊಠಡಿಗಳಿವೆ. ದಾಖಲೆಗಳ ಕೊಠಡಿ ಇದೆ.

ಮೊದಲ ಮಹಡಿಯಲ್ಲಿ ವಿಡಿಯೊ ಕಾನ್ಪರೆನ್ಸ್ ಹಾಲ್, ಭೂ ನೋಂದಣಿ ಕಚೇರಿ ಹಾಗೂ ಸಭಾಂಗಣ ಇದೆ. ಉಳಿದಂತೆ ಪಡಿತರ ಚೀಟಿ, ಆಧಾರ್ ಕಾರ್ಡ್‌, ವೃದ್ಧಾಪ್ಯ, ಅಂಗವಿಕಲರ, ವಿಧವಾ ವೇತನ, ಜನನ- ಮರಣ ಪ್ರಮಾಣ ಪತ್ರಗಳ ವಿತರಣೆ, ಖಾತೆ, ವಂಶವೃಕ್ಷ, ಪವತಿ ವಿತರಿಸಲು ಪ್ರತ್ಯೇಕವಾಗಿ ಕೌಂಟರ್ ತೆರೆಯಲಾಗಿದೆ.

ತಾಲ್ಲೂಕಿನಿಂದ ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಹಗಲೆಲ್ಲಾ ಕಚೇರಿಯ ಬಳಿ ಕೆಲಸಕ್ಕೆ ಅಲೆದಾಡುತ್ತಿದ್ದಾರೆ.

ಆಹಾರ ನಿರೀಕ್ಷಕರ ಕೊಠಡಿ ಮುಂದೆ ಕುಡಿಯುವ ನೀರಿನ ಶುದ್ಧೀಕರಣ ಘಟಕ ಇದೆ. ಅದು ಕೆಟ್ಟು ನಿಂತಿದ್ದರೂ ದುರಸ್ತಿಪಡಿಸಿಲ್ಲ. ಶುದ್ಧೀ‌ಕರಣ ಯಂತ್ರದ ಉಪಕರಣಗಳು ತುಕ್ಕು ಹಿಡಿದಿವೆ. ತಾಲ್ಲೂಕು ಕಚೇರಿಯ ಅಧಿಕಾರಿಗಳು ಕನಿಷ್ಠ ಕುಡಿಯುವ ನೀರಿನ ಕ್ಯಾನ್‌ಗಳನ್ನೂ ಇಟ್ಟಿಲ್ಲ. ಇದರಿಂದ ತಾಲ್ಲೂಕು ಕಚೇರಿಯಲ್ಲಿ ಕುಡಿಯಲು ನೀರು ಸಿಗದೆ ಜನರು ಪರಿತಪಿಸುವಂತಾಗಿದೆ.

ಇದೇ ಆವರಣದ ಸಂಕೀರ್ಣದಲ್ಲಿ ಪೊಲೀಸ್ ಠಾಣೆ, ಪತ್ರಕರ್ತರ ಭವನ, ಹಿಂಭಾಗದಲ್ಲಿ ಬಿಎಸ್‌ಎನ್‌ಎಲ್ ಕಚೇರಿ ಇದೆ. ತಾಲ್ಲೂಕು ಕಚೇರಿಯ ಮುಖ್ಯದ್ವಾರದಿಂದ ಕಚೇರಿ ಮುಂದೆ ಸೂಕ್ತವಾದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ತಹಶೀಲ್ದಾರ್, ಪೊಲೀಸ್ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್, ಆಂಬುಲೆನ್ಸ್ ವಾಹನಗಳ ಸಂಚಾರಕ್ಕೂ ಅಡೆತಡೆಯಾಗಿದೆ. ಇದರಿಂದ ಸುಗಮ ಸಂಚಾರಕ್ಕೂ ತೊಂದರೆ ಆಗಿದೆ.

‘ತಾಲ್ಲೂಕು ಆಡಳಿತ ಕಚೇರಿಯಲ್ಲಿಯೇ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಕನಿಷ್ಠ ಮೂಲಸೌಲಭ್ಯ ಇಲ್ಲ. ಇದು ಆಡಳಿತ ಯಂತ್ರದ ಕಾರ್ಯವೈಖರಿ ಬಗ್ಗೆ ತಿಳಿಯುತ್ತದೆ. ಅಧಿಕಾರಿಗಳು ಬಿಸ್ಲೆರಿ ನೀರಿನ ಬಾಟೆಲ್ ಬಳಸುತ್ತಾರೆ. ಆದರೆ, ಕಚೇರಿಯಲ್ಲಿ ಕುಡಿಯುವ ನೀರು ಇದೆಯೇ ಎಂದು ಪರಿಶೀಲನೆ ಮಾಡಿಲ್ಲ’ ಎಂದು ದೂರುತ್ತಾರೆ ನಾಗರಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT