ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಂದ ಪರಿಸರ ಪ್ರಬಂಧ ಆಹ್ವಾನ

ನಾಲ್ಕು ವಸಂತಗಳನ್ನು ಪೂರೈಸಿ ಐದನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ‘ಉಸಿರಿಗಾಗಿ ಹಸಿರು ತಂಡ’
Last Updated 20 ಡಿಸೆಂಬರ್ 2019, 9:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಉಸಿರಿಗಾಗಿ ಹಸಿರು ತಂಡ’ ನಾಲ್ಕು ವಸಂತಗಳನ್ನು ಪೂರೈಸಿ ಐದನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಪ್ರಯುಕ್ತ ತಂಡ ಈವರೆಗೆ ಕೈಗೊಂಡ ಕಾರ್ಯಕ್ರಮಗಳ ಆತ್ಮಾವಲೋಕನ ಮಾಡಿಕೊಳ್ಳುವ ನಿಟ್ಟಿನಲ್ಲಿ 2020ರ ಫೆಬ್ರವರಿಯಲ್ಲಿ ಆತ್ಮಾವಲೋಕನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಜಿಲ್ಲೆಯಲ್ಲಿರುವ ಹಸಿರು ಶಾಲೆ ಮತ್ತು ಪರಿಸರ-ಸ್ನೇಹಿ ಶಾಲೆಗಳನ್ನು ಗುರುತಿಸಿ ಸನ್ಮಾನಿಸುವುದು, ಜಿಲ್ಲೆಯ ವ್ಯಾಪ್ತಿಯಲ್ಲಿ ನೀಲಗಿರಿಯನ್ನು ತಮ್ಮ ಕೃಷಿಭೂಮಿಯಿಂದ ತೆರವುಗೊಳಿಸಿದ ರೈತರನ್ನು ಸನ್ಮಾನಿಸುವುದು, ಶಾಲಾ ಮಕ್ಕಳಿಗೆ ಹಾಗೂ ಯುವಜನರಲ್ಲಿ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ನೀಡುವುದು ಮತ್ತು ಕಳೆದ ನಾಲ್ಕು ವಸಂತಗಳಿಂದ ಉಸಿರಿಗಾಗಿ ಹಸಿರು ತಂಡದ ಕಾರ್ಯಕ್ರಮಗಳಿಗೆ ಸಹಕರಿಸಿದ ಯುವ ಸಂಘಟನೆಗಳ ಸದಸ್ಯರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸುವ ಕಾರ್ಯಕ್ರಮ ಏರ್ಪಡಿಸಲು ತಂಡ ಉದ್ದೇಶಿಸಿದೆ.

ಇದಕ್ಕೆ ಪೂರ್ವಭಾವಿಯಾಗಿ ನಾಲ್ಕು ವಿಭಾಗಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಪ್ರಬಂಧ ಸ್ಪರ್ಧೆ ಏರ್ಪಡಿಸಲು ಉದ್ದೇಶಿಸಿದ್ದು, ಆಸಕ್ತ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು 2020ರ ಜನವರಿ 15ರ ಒಳಗೆ ಟ್ರಸ್ಟ್ ವಿಳಾಸಕ್ಕೆ ಕಳುಹಿಸಿಕೊಡಬೇಕು. 2020ರ ಫೆಬ್ರವರಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಸ್ಪರ್ಧೆಯ ವಿವರ:ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿಭಾಗ ವಿದ್ಯಾರ್ಥಿಗಳು ಗರಿಷ್ಠ 100 ಪದಗಳ ಮಿತಿಯಲ್ಲಿ ‘ನನ್ನ ಶಾಲಾವರಣ ಹೀಗಿದ್ದರೆ ಚೆಂದ’ ಎಂಬ ವಿಷಯದ ಮೇಲೆ ಪ್ರಬಂಧ ಬರೆದು ಕಳುಹಿಸಬೇಕು. ಪ್ರೌಢ ಶಾಲಾ ವಿಭಾಗ ವಿದ್ಯಾರ್ಥಿಗಳು ಗರಿಷ್ಠ 250 ಪದಗಳ ಮಿತಿಯಲ್ಲಿ ‘ಹಸಿರನ್ನು ಪಸರಿಸುವ ಕಾಯಕದಲ್ಲಿ ಶಾಲಾ ವಿದ್ಯಾರ್ಥಿಯಾದ ನನ್ನ ಪಾತ್ರ’, ಪದವಿ ಪೂರ್ವ ಶಿಕ್ಷಣ (ಪಿಯುಸಿ) ವಿಭಾಗದ ವಿದ್ಯಾರ್ಥಿಗಳು ಗರಿಷ್ಠ 500 ಪದಗಳ ಮಿತಿಯಲ್ಲಿ ‘ಪ್ರಾಕೃತಿಕ ಸಂಪನ್ಮೂಲಗಳ ವಿನಾಶದಿಂದ ಜೀವಸಂಕುಲದ ಮೇಲಾಗುವ ಪರಿಣಾಮಗಳು’ ಎಂಬ ವಿಷಯದ ಮೇಲೆ ಪ್ರಬಂಧ ಬರೆದು ಕಳುಹಿಸಬೇಕು.

ಪದವಿ ವಿಭಾಗದ ವಿದ್ಯಾರ್ಥಿಗಳು ಗರಿಷ್ಠ 750 ಪದಗಳ ಮಿತಿಯಲ್ಲಿ ‘ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಹಸಿರು ಪರಿಸರ ಅಥವಾ ಅರಣ್ಯಗಳ ಪಾತ್ರ’ ಎಂಬ ವಿಷಯದ ಮೇಲೆ ಪ್ರಬಂಧ ಬರೆದು ಕಳುಹಿಸಬೇಕು. ಕನ್ನಡ ಭಾಷೆಯಲ್ಲಿ ಬರಹ ಅಥವಾ ಬೆರಳಚ್ಚು (ಟೈಫ್) ಮಾಡಿದ ಮಾದರಿಯಲ್ಲಿರುವ ಪ್ರಬಂಧಗಳನ್ನು ಸಲ್ಲಿಸಬೇಕು.

ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರಿಂದ ಪ್ರಬಂಧ ದೃಢೀಕರಿಸಿರಬೇಕು. ಒಂದು ಶಾಲೆ ಅಥವಾ ಕಾಲೇಜಿನಿಂದ ಗರಿಷ್ಠ ಮೂರು ಪ್ರಬಂಧಗಳನ್ನು ಸಲ್ಲಿಸಲು ಅವಕಾಶವಿದೆ. ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಗೆ ಬರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಶಾಲೆಯ ವಿಳಾಸ ಸ್ಪಷ್ಟವಾಗಿ ಬರೆದಿರಬೇಕು ಹಾಗೂ ದೃಢೀಕರಿಸಿದ ಮುಖ್ಯೋಪಾಧ್ಯಾಯರ ಅಥವಾ ಪ್ರಾಂಶುಪಾಲರ ಅಥವಾ ಸ್ಪರ್ಧಿಗಳ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರಬೇಕು.

ಬೆರಳಚ್ಚು (ಟೈಫ್) ಮಾಡಿದ ಪ್ರಬಂಧಗಳನ್ನು (ನುಡಿ ತಂತ್ರಾಂಶದಲ್ಲಿ ಮಾತ್ರ) usirigaagihasiru@gmail.com ಮೇಲ್‌ ವಿಳಾಸಕ್ಕೆ ನಿಗದಿತ ದಿನಾಂಕದ ಒಳಗೆ ಕಳುಹಿಸಬೇಕು. ಪ್ರಶಸ್ತಿಗೆ ಭಾಜನರಾದ ಸ್ಪರ್ಧಿಗಳಿಗೆ ಫೆಬ್ರವರಿ ಮೊದಲನೇ ವಾರದಲ್ಲಿ ಮಾಹಿತಿ ನೀಡಲಾಗುವುದು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಬಂಧಗಳನ್ನು ಕಳುಹಿಸಬೇಕಾದ ವಿಳಾಸ: ಕಾರ್ಯಕಾರಿ ಟ್ರಸ್ಟಿ, ಉಸಿರಿಗಾಗಿ ಹಸಿರು, ಸ್ವಸ್ತಿ, ಮೊದಲನೇ ಮಹಡಿ, ಚಲಕಾಯಲಪರ್ತಿ, ಗಂಗರೇಕಾಲುವೆ ಅಂಚೆ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ, 562101.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT