ಮನೆಯ ಅಂಗಳದಲ್ಲಿ ರೈತರ ವಿಶಿಷ್ಟ ಬೆಳೆಗಳು

7
ಸಾವಯವ ಕೃಷಿಯಲ್ಲಿ ನೆಮ್ಮದಿ; ಜೀವನ ಸಂಗಾತಿಗಳಾದ ಕುರಿ, ಕೋಳಿ, ಹಸು, ಗಿಡ–ಮರ–ಬಳ್ಳಿ

ಮನೆಯ ಅಂಗಳದಲ್ಲಿ ರೈತರ ವಿಶಿಷ್ಟ ಬೆಳೆಗಳು

Published:
Updated:
ರೈತ ಹುಜಗೂರು ಎಚ್‌.ಸಿ.ಸಿದ್ದಪ್ಪ ಅವರು ಮನೆಯ ಅಂಗಳದಲ್ಲಿ ಬೆಳೆದಿರುವ ಹಲಸಿನ ಮರದಲ್ಲಿ ಬಿಟ್ಟಿರುವ ದೊಡ್ಡ ಗಾತ್ರದ ಕಾಯಿಗಳು

ಶಿಡ್ಲಘಟ್ಟ: ‘ರೈತ ಮನೆಯ ಅಂಗಳದಲ್ಲೂ ಕೃಷಿ ಮಾಡಬೇಕು. ತನಗೆ ಬೇಕಾದ್ದನ್ನು ಬೆಳೆದು ಇತರರಿಗೂ ಹಂಚಬೇಕು’ ಎಂಬ ಆದರ್ಶದೊಂದಿಗೆ ಕೃಷಿ ಮಾಡುತ್ತಾ ಉತ್ಕೃಷ್ಟವಾಗಿ ವೈವಿಧ್ಯಮಯ ಬೆಳೆ ಬೆಳೆದವರು ರೈತ ಹುಜಗೂರು ಎಚ್‌.ಸಿ.ಸಿದ್ದಪ್ಪ.

ಸೊಂಟದ ಎತ್ತರಕ್ಕೆ ಬೆಳೆದ ಹಲಸಿನಹಣ್ಣುಗಳನ್ನು ಬಿಟ್ಟಿರುವ ಮೂರು ಹಲಸಿನಮರಗಳು, ಫುಟ್‌ಬಾಲ್‌ ಚೆಂಡಿಗಿಂತಲೂ ದಪ್ಪನಾಗಿ ಬೆಳೆದ ತೆಂಗಿನಕಾಯಿಗಳು ಇರುವ ಎರಡು ತೆಂಗಿನ ಮರಗಳು, ಎರಡು ನಿಂಬೆ ಗಿಡಗಳು, ಒಂದು ಹುಣಸೆ ಮರ, ಗೋರಂಟಿ ಗಿಡ, ಹತ್ತು ಕರಿಬೇವಿನ ಗಿಡಗಳು, ನಾಲ್ಕು ಸೀಬೆ ಗಿಡಗಳು, 20 ಬದನೆಗಿಡಗಳು, 15 ನುಗ್ಗೆಗಿಡಗಳು, ನಾಲ್ಕು ಹೊಂಗೆ ಮರಗಳು, ಒಂದು ಅತ್ತಿ ಮರ, ಪುದೀನಾ, ಮೆಣಸು, ಗೆಣಸು, ಐವತ್ತು ವಿಧದ ಹೂಗಿಡಗಳನ್ನು ಮನೆಯ ಸುತ್ತ ಬೆಳೆದಿದ್ದಾರೆ.

ಹತ್ತು ಮೇಕೆ, ಎರಡು ಸೀಮೆ ಹಸುಗಳು, 20 ಕೋಳಿಗಳು ಹಾಗೂ ಒಂದು ಹುಲ್ಲಿನ ಮೆದೆಯೂ ಇದೆ. ಎರಡು ಹುಳುಮನೆಗಳು ಸಹ ಮನೆಗೆ ಜೊತೆಯಾಗಿವೆ. ಸುಮಾರು ಒಂದು ಎಕರೆ ಜಾಗದಲ್ಲಿ ಸುತ್ತ ಕಲ್ಲುಚಪ್ಪಡಿಯ ಕಾಂಪೌಂಡ್‌ ನಿರ್ಮಿಸಿಕೊಂಡು ಈ ಎಲ್ಲ ಗಿಡಮರ, ಪ್ರಾಣಿಗಳು ಮತ್ತು ತಮ್ಮ ಕುಟುಂಬದ ಜೊತೆ ವಾಸಿಸುತ್ತಿದ್ದಾರೆ.

‘ಕೆರೆಯ ನೀರನು ಕೆರೆಗೆ ಚೆಲ್ಲು..’ ಎಂಬಂತೆ ಇಲ್ಲಿ ಎಲ್ಲವನ್ನೂ ಇವರು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸೆಗಣಿ ಗಂಜಲವು ಗೋಬರ್‌ ಗ್ಯಾಸ್‌ ತಯಾರಿಕೆಗೆ ಬಳಕೆಯಾದರೆ, ಅದರ ಸ್ಲರಿ ಗಿಡಮರಗಳಿಗೆ ಗೊಬ್ಬರವಾಗುತ್ತದೆ. ಮನೆ ಬಳಕೆಯ ನೀರು ಗಿಡಗಳ ಪಾತಿಯೆಡೆಗೆ ಹರಿಯುತ್ತದೆ.

ಕೈಎಟಕುವಷ್ಟು ಎತ್ತರದಲ್ಲಿ ದಪ್ಪ ಗಾತ್ರದ ತೆಂಗಿನ ಕಾಯಿಗಳು ಮತ್ತು ಮೂರಡಿಗೂ ಎತ್ತರದ ಹಲಸಿನ ಕಾಯಿಗಳು ನೋಡುಗರ ಅಚ್ಚರಿಗೆ ಕಾರಣವಾಗಿವೆ.

‘ಹಿಂದಿನಿಂದಲೂ ಎಷ್ಟೇ ಕಷ್ಟವಿದ್ದರೂ ಗಿಡಗಳನ್ನು ತಂದು ನೆಡುತ್ತಿದ್ದೆ. ಹಾಗೆ ಬೆಳೆದ ಇಪ್ಪತ್ತೈದು ತೆಂಗಿನ ಮರಗಳು ನಮ್ಮ ಹೊಲದಲ್ಲಿವೆ. ಅದರಿಂದ ಸಸಿ ತಯಾರಿಸಿ ಮನೆಯ ಬಳಿ ಎರಡು ಮರಗಳನ್ನು ನೆಟ್ಟಿದ್ದೇನೆ. ಹಲಸಿನ ಗಿಡಗಳು ಹಿಂದೆ ತೋಟಗಾರಿಕೆಯ ಇಲಾಖೆಯಿಂದ ಪಡೆದು ತಂದು ನೆಟ್ಟಿದ್ದು. ಸಾವಯವ ಗೊಬ್ಬರವನ್ನಷ್ಟೇ ನೀಡುತ್ತೇವೆ. ಅದರ ಗಾತ್ರ ಮಾತ್ರ ದೊಡ್ಡದಾಗಿವೆ. ಹಣ್ಣನ್ನು ನಾನು ಎಂದೂ ಮಾರಿಲ್ಲ ಮತ್ತು ಮುಂದೆಯೂ ಮಾರುವುದಿಲ್ಲ. ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ, ಸ್ನೇಹಿತರಿಗೆ, ಬಂಧುಗಳಿಗೆ ಕೊಡುತ್ತೇನೆ’ ಎನ್ನುತ್ತಾರೆ ರೈತ ಸಿದ್ದಪ್ಪ.

‘ಮನೆಗೆ ಬೇಕಾಗುವ ತರಕಾರಿ, ಹೂವನ್ನು ಮನೆಯ ಹತ್ತಿರವೇ ಬೆಳೆದುಕೊಳ್ಳಬೇಕು ಎಂಬ ಸಿದ್ಧಾಂತ ನನ್ನದು. ಒಂಭತ್ತು ಎಕರೆ ಜಮೀನಿನಲ್ಲಿ ಗುಣಿ ಪದ್ಧತಿಯಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆದಿದ್ದೇನೆ. ಈಗ ಅದರ ನಡುವೆ ಕಡಲೆಕಾಯಿ ಮತ್ತು ಅವರೆ ಬೆಳೆಯುವೆ. ಸುತ್ತ ತೊಗರಿ ಹಾಕಿರುವೆ. ಕೃಷಿ ಹೊಂಡ ಮಾಡಿಕೊಂಡಿದ್ದು ಮಳೆಯ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ. ಅದರಲ್ಲಿಯೇ ಕೃಷಿ ಕಾರ್ಯ ನಡೆಯುತ್ತದೆ’ ಎಂದು ಅವರು ತಮ್ಮ ಕೃಷಿಯ ವಿಧಾನ ವಿವರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !