ಶುಕ್ರವಾರ, ಮಾರ್ಚ್ 5, 2021
27 °C
ಉತ್ತಮ ಮಾರುಕಟ್ಟೆ ವ್ಯವಸ್ಥೆ; ಮೇರಾಬುಲ್ ಗುಲಾಬಿಗೆ ಹೆಚ್ಚಿನ ಬೇಡಿಕೆ

ಗುಲಾಬಿ ಕೃಷಿಯತ್ತ ರೈತರ ಒಲವು

ದೀಪಕ್‌ ಎನ್‌. Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ರೇಷ್ಮೆ, ಹಾಲು, ದ್ರಾಕ್ಷಿ ಉತ್ಪಾದನೆಯಿಂದ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರು ಇದೀಗ ಗುಲಾಬಿ ಕೃಷಿಯತ್ತ ಹೆಚ್ಚು ಒಲವು ತೋರಿದ್ದಾರೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಗುಲಾಬಿ ಕೃಷಿ ಕೈ ಹಿಡಿಯಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಶಾಶ್ವತ ನದಿ ಮೂಲಗಳಿಲ್ಲ. ಈ ಭಾಗದ ರೈತರು ಸಾವಿರಾರು ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಸಿ, ಸಿಕ್ಕ ನೀರನ್ನು ಬಳಸಿಕೊಂಡು, ಗುಲಾಬಿ ಬೆಳೆಯಿಂದ ಉತ್ತಮ ಆದಾಯ ಗಳಿಸಲು ಮುಂದಾಗಿದ್ದಾರೆ.

ವಿವಿಧ ಬಗೆಯ ಗುಲಾಬಿ: ಪ್ರಸ್ತುತ ಮಾರುಕಟ್ಟೆಯಲ್ಲಿ ಗುಲಾಬಿ ಹೂವಿಗೆ ಬೇಡಿಕೆ ಸೃಷ್ಟಿಯಾಗಿರುವುದರಿಂದ ಜಿಲ್ಲೆಯ ರೈತರು ಬಗೆ ಬಗೆಯ ಗುಲಾಬಿ ಹೂ ಬೆಳೆಯಲು ಮುಂದಾಗಿದ್ದಾರೆ. ತಾಜ್‍ಮಹಲ್, ಮೇರಾಬುಲ್, ಟೈಗರ್, ಸೆಂಟ್ ಯಲ್ಲೋ, ಸೆಂಟ್ ವೈಟ್,
ವ್ಯಾನಿಷ್ ಸೇರಿದಂತೆ ಹಲವು ಬಗೆಯ ಗುಲಾಬಿ ಹೂಗಳನ್ನು ಬೆಳೆಯಲಾಗುತ್ತಿದೆ.

400 ಎಕರೆ ವಿಸ್ತರಣೆ

ಈ ಹಿಂದೆ ಜಿಲ್ಲೆಯ ಕೆಲವೆಡೆ ಮಾತ್ರ ಬೆಳೆಯುತ್ತಿದ್ದ ಗುಲಾಬಿ ಹೂ ಬೆಳೆ ಕಳೆದೆರಡು ವರ್ಷಗಳಲ್ಲಿ 400 ಎಕರೆ ಪ್ರದೇಶದಷ್ಟು ವಿಸ್ತರಣೆಯಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ವ್ಯಾಪ್ತಿಗೆ ಗುಲಾಬಿ ಬೆಳೆಯನ್ನು ಸೇರ್ಪಡೆಗೊಳಿಸಿರುವುದು ಇದಕ್ಕೆ ಪ್ರಮುಖ ಕಾರಣ.

ಉತ್ತಮ ಮಾರುಕಟ್ಟೆ ವ್ಯವಸ್ಥೆ: ಜಿಲ್ಲೆಯ ವಿವಿಧ ಭಾಗಗಳಲ್ಲಿ ರೈತರು ಬೆಳೆಯುವ ಗುಲಾಬಿ ಹೂಗಳಿಗೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಕೆ.ವಿ.ಕ್ಯಾಂಪಸ್‌ ಬಳಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ, ಬೆಂಗಳೂರು, ದೇಶ-ವಿದೇಶಗಳಿಗೆ ರಫ್ತು ಮಾಡಲು ಜಿಲ್ಲೆಗೆ ಕೂಗಳತೆ ದೂರದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಒದಗಿಸಲಾಗಿದೆ.

ಲಾಭದಾಯಕ ಗುಲಾಬಿ ಕೃಷಿ: ಜಿಲ್ಲೆಯಲ್ಲಿ ಗುಲಾಬಿ ಬೆಳೆಯಲು ಅನುಕೂಲಕರವಾದ ಫಲವತ್ತಾದ ಮಣ್ಣು ಇರುವುದರಿಂದ ಕಡಿಮೆ ಖರ್ಚಿನಲ್ಲಿ ರೈತರು ಗುಲಾಬಿ ಹೂ ಬೆಳೆಯಲು ಆರಂಭಿಸಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಗುಲಾಬಿಗೆ ವರ್ಷಕ್ಕೆ ₹8 ರಿಂದ ₹10 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದು, ಪಾಲಿಹೌಸ್‍ಗಳಲ್ಲಿ (ಹಸಿರು ಮನೆ) ಬೆಳೆಯುತ್ತಿರುವ ಗುಲಾಬಿ ಹೂವಿನಿಂದ ವರ್ಷಕ್ಕೆ ₹15 ರಿಂದ ₹20 ಲಕ್ಷದವರೆಗೆ ರೈತರು ಆದಾಯ ಗಳಿಸುತ್ತಿದ್ದಾರೆ.

ಪಾಲಿಹೌಸ್‌ಗೆ ಬೇಡಿಕೆ: ಪಾಲಿಹೌಸ್‌ಗಳಲ್ಲಿ ಬೆಳೆಯುವ ಡಚ್‌, ತಾಜ್‌ ಮಹಲ್‌ ಮಾದರಿ ಗುಲಾಬಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ.

ಜಿಲ್ಲೆಯಲ್ಲಿ ಗುಲಾಬಿ ಹೂ ಬೆಳೆಯಲು ರೈತರಿಗೆ ಜಿಲ್ಲಾ ಪಂಚಾಯಿತಿ ಸಾಥ್ ನೀಡುತ್ತಿದ್ದು, ಗುಲಾಬಿ ಬೆಳೆಯಲು ರೈತರಿಗೆ ನರೇಗಾ ಯೋಜನೆಯಡಿ ಕೂಲಿ ವೆಚ್ಚ, ಸಾಮಾಗ್ರಿ ವೆಚ್ಚ ಭರಿಸುತ್ತಿದೆ. 1 ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಬೆಳೆಯಲು ರೈತರಿಗೆ ನರೇಗಾದಿಂದ ₹2 ಲಕ್ಷ ಆರ್ಥಿಕ ನೆರವು ನೀಡುತ್ತಿರುವುದು ಗುಲಾಬಿ ಕೃಷಿಗೆ ಚೈತನ್ಯ ತುಂಬಿದೆ.

ಶೇ 75ರಷ್ಟು ಮೇರಾಬುಲ್

ಮೇರಾಬುಲ್ ಗುಲಾಬಿ ಹೂವಿಗೆ ಹಬ್ಬದ ದಿನಗಳಲ್ಲಿ 1 ಕೆ.ಜಿ ₹200 ರಿಂದ ₹300 ವರೆಗೆ ಮಾರಾಟವಾದರೆ, ಸಾಮಾನ್ಯ ದಿನಗಳಲ್ಲಿ ₹100 ರಿಂದ ₹150 ರ ಆಸುಪಾಸಿನಲ್ಲಿ ಬೆಲೆ ಇರುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮೇರಾಬುಲ್ ಗುಲಾಬಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಜಿಲ್ಲೆಯಲ್ಲಿ ಶೇ 75 ರಷ್ಟು ರೈತರು ಮೇರಾಬುಲ್ ಗುಲಾಬಿ ಹೂ ಬೆಳೆಯಲು ಆಸಕ್ತಿ ತೋರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.