ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣಿನ ಅವಮಾನ; ಸಮಾಜಕ್ಕೆ ಅಪಮಾನ

ಚಿಂತಾಮಣಿ: ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಸಾಧಕಿಯರೊಂದಿಗೆ ಸಂವಾದ
Last Updated 8 ಮಾರ್ಚ್ 2021, 5:19 IST
ಅಕ್ಷರ ಗಾತ್ರ

ಚಿಂತಾಮಣಿ: ಮಹಿಳೆ ಸಂಸ್ಕೃತಿಯ ಸಂಕೇತ.ಹೆಣ್ಣಿಗೆ ಅವಮಾನ ಮಾಡಿದರೆ ಅದು ಇಡೀ ಸಮಾಜಕ್ಕೆ ಅಪಮಾನ ಮಾಡಿದಂತೆ ಎಂದು ಸುಗಮ ಸಂಗೀತ ಗಾಯಕಿ ಲೀಲಾ ಲಕ್ಷ್ಮಿನಾರಾಯಣ ಅಭಿಪ್ರಾಯಪಟ್ಟರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದಿಂದ ಆಯೋಜಿಸಿದ್ದ ಮಹಿಳಾ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‌

ಹೆಣ್ಣು ಸಮಾಜದ ಕಣ್ಣು. ಇಂದು ಮಹಿಳೆಯರಲ್ಲಿ ತಾಳ್ಮೆ, ಸಹನೆ ಮತ್ತು ಪ್ರೀತಿ ಕಡಿಮೆ ಆಗುತ್ತಿದೆ. ಹೆಣ್ಣೊಂದು ಶಿಕ್ಷಣ ಪಡೆದರೆ ಸಮಾಜ ಶಿಕ್ಷಣ ಪಡೆದಂತೆ ಎಂದು ಹೇಳಿದರು.

ಕಲಿತ ವಿದ್ಯೆಯನ್ನು ಹೆಣ್ಣು ಸಮಾಜಕ್ಕೆ ಧಾರೆ ಎರೆಯುತ್ತಾಳೆ. ಮಾನವ ಸಂಸ್ಕೃತಿ ಬೆಳವಣಿಗೆಯಲ್ಲಿ ಹೆಣ್ಣಿನ ಪಾತ್ರ ಮುಖ್ಯವಾಗಿದೆ. ಮಹಿಳೆಯರು ಸುಶಿಕ್ಷಿತರಾಗಬೇಕು. ಹಿಂಜರಿಕೆ, ಸೌಮ್ಯ ಸ್ವಭಾವ ಬಿಟ್ಟು ಧೈರ್ಯದಿಂದ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದಕ್ಕೆ ಶಿಕ್ಷಣ ಬುನಾದಿಯಾಗಿದೆ ಎಂದು ತಿಳಿಸಿದರು.

ಪ್ರಶ್ನೆ ಮಾಡುವ, ಸರಿ ತಪ್ಪು ಆಲೋಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಏಕಾಗ್ರತೆ, ಛಲ, ಆತ್ಮವಿಶ್ವಾಸ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ‌‌ಸಲಹೆ
ನೀಡಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎನ್. ರಘು ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರು ಸಮಾಜದಲ್ಲಿ ಇದ್ದಾರೆ. ನಮ್ಮ ಸುತ್ತಮುತ್ತಲಿನ ಸಮಾಜದ ಮುಖ್ಯವಾಹಿನಿಗೆ ಬಂದಿರುವ ಮಹಿಳೆಯರ ಹಾದಿಯನ್ನು ನಾವು ತಿಳಿಯಬೇಕು. ಅವರ ಕಷ್ಟ ಮತ್ತು ಸಾಧನೆಯ ಪಯಣವನ್ನು ತಿಳಿದಾಗ ನಾವು ಸ್ಫೂರ್ತಿ ಪಡೆಯಲು ಸಾಧ್ಯ ಎಂದು ಹೇಳಿದರು.

ಕೇವಲ ಹತ್ತನೇ ತರಗತಿ ಉತ್ತೀರ್ಣವಾಗಿ, ಚಿಕ್ಕವಯಸ್ಸಿನಲ್ಲಿ ಪತಿ ಕಳೆದುಕೊಂಡು ಸಂಗೀತ ಮತ್ತು ಸಮಾಜ ಸೇವೆಯಲ್ಲಿ ಹೆಸರು ಮಾಡಿದವರು ಲೀಲಾ ಲಕ್ಷ್ಮಿನಾರಾಯಣ. ಸಮಾಜ ಸೇವೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಒನಕೆ ಓಬವ್ವ, ಕನ್ನಡ ರಾಜ್ಯೋತ್ಸವ, ಜ್ಞಾನಶ್ರೀ ಹೀಗೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರು ನಮಗೆ ಆದರ್ಶವಾಗಿದ್ದಾರೆ ಎಂದು ಹೇಳಿದರು.

ಪ್ರಾಧ್ಯಾಪಕಿ ಪ್ರೊ.ಕೆ.ವಿ. ರತ್ನಮ್ಮ ಮಾತನಾಡಿ, ಮಹಿಳೆಯರು ಕೀಳರಿಮೆಯಿಂದ ತಮ್ಮಲ್ಲಿನ ಪ್ರತಿಭೆಯನ್ನು ತೋರ್ಪಡಿಸಲು ಸಾಧ್ಯವಾಗುತ್ತಿಲ್ಲ. ಸ್ವಾವಲಂಬಿ ಜೀವನ ಸಾಧಿಸಲು ಪ್ರಯತ್ನಿಸಬೇಕು. ಆರ್ಥಿಕವಾಗಿ ಬಲಿಷ್ಠರಾಗಿ ಇತರರಿಗೆ ಆದರ್ಶವಾಗಬೇಕು ಎಂದು
ಹೇಳಿದರು.

ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಪ್ರೊ.ಕೆ.ಆರ್. ಶಿವಶಂಕರ್ ಪ್ರಸಾದ್, ಕೈಗಾರಿಕೆ, ಮಾಹಿತಿ ಮತ್ತು ತಂತ್ರಜ್ಞಾನ, ಶಿಕ್ಷಣ, ವಾಯುಯಾನ, ಗಗನಯಾನ, ಸಂಗೀತ, ನೃತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಸಾಧಕಿಯರ ಬಗ್ಗೆ ನಾವು ತಿಳಿದುಕೊಳ್ಳಬೇಕು ಎಂದು ಕಿವಿಮಾತು
ಹೇಳಿದರು.

ವಿದ್ಯಾರ್ಥಿನಿಯರು ಲೀಲಾ ಲಕ್ಷ್ಮಿನಾರಾಯಣ ಅವರ ಜತೆ ಸಂವಾದ ನಡೆಸಿದರು. ಪ್ರೊ.ಕೆ. ಮುನಿಕೃಷ್ಣಪ್ಪ, ಪ್ರೊ.ಆರ್. ಕೆಂಪರಾಜು, ವೇದಾವತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT