ಬುಧವಾರ, ಆಗಸ್ಟ್ 17, 2022
30 °C

ಕೈವಾರ: ಹುಣ್ಣಿಮೆ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳವಾದ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಸೋಮವಾರ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜೆ, ರಥೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.

ಗರ್ಭಗುಡಿಯಲ್ಲಿರುವ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮೂಲ ಬೃಂದಾವನವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಹುಣ್ಣಿಮೆ ಪೂಜೆಗಾಗಿ ಪೀಠವನ್ನು ಅಲಂಕರಿಸಿ ಶ್ರೀದೇವಿ ಭೂದೇವಿ ಸಮೇತ ಶ್ರೀಅಮರನಾರೇಯಣಸ್ವಾಮಿ ಹಾಗೂ ತಾತಯ್ಯನವರ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಲಾಗಿತ್ತು. ಉತ್ಸವಮೂರ್ತಿಗಳಿಗೆ ಪಂಚಾಮೃತ ಮತ್ತು ಮಂಗಳ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ನಂತರ ಶಾಸ್ತ್ರೋಕ್ತವಾಗಿ ಅಷ್ಟಾವಧಾನ ಸೇವೆ ಸಮರ್ಪಿಸಿ ಮಹಾಮಂಗಳಾರತಿಯನ್ನು ಬೆಳಗಲಾಯಿತು.

ತಾತಯ್ಯವರವರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಕರೆತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಾಲಯದ ಸುತ್ತಲೂ ರಥೋತ್ಸವ ನಡೆಸಲಾಯಿತು. ನೂರಾರು ಭಕ್ತರು ರಥದೊಂದಿಗೆ ಸುತ್ತು ಹಾಕಿ ಭಕ್ತಿ ಮೆರೆದರು.

ಪ್ರವಚನ: ಅಂತಃಕರಣ ಶುದ್ಧಿಯಿಂದ ಮಾಡುವ ಸಾಧನೆಯು ಫಲವನ್ನು ನೀಡುತ್ತದೆ. ಮಾನವನ ದೇಹ ಅಶಾಶ್ವತವಾದುದು. ಮುಕ್ತಿಗೆ ಮೀಸಲಾಗಿರುವುದರಿಂದ ಶ್ರೇಷ್ಠತೆ ಲಭಿಸಿದೆ ಎಂಬ ಸಂತರ ನುಡಿಗಳಲ್ಲಿ ಸತ್ಯವಿದೆ ಎಂದು ಪ್ರವಚನಕಾರ ತಳಗವಾರ ಆನಂದ್ ಅಭಿಪ್ರಾಯಪಟ್ಟರು.

ಶ್ರೀಯೋಗಿನಾರೇಯಣ ಮಠದಲ್ಲಿ ಹುಣ್ಣಿಮೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಪ್ರವಚನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವನ ಜನ್ಮದಲ್ಲಿ ಕಷ್ಟ-ಸುಖಗಳು ಬಂದೇ ಬರುತ್ತವೆ. ಜೀವನದಲ್ಲಿ ತಾಳ್ಮೆ, ಶಾಂತಿ ಅಗತ್ಯ. ಸತ್ಯವನ್ನು ಅರ್ಥ ಮಾಡಿಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಬಡತನಕ್ಕೆ ಕುಗ್ಗದೆ, ಸಿರಿತನಕ್ಕೆ ಬೀಗದೆ ಸಮಭಾವದ ಸದ್ಗುಣಿಯಾಗಬೇಕು. ಪಾರಮಾರ್ಥವನ್ನು ಆಶ್ರಯಿಸಿ ಚಿತ್ತದ ನೆಮ್ಮದಿಯನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಲಂಬಗಿರಿಯಲ್ಲಿ ಗಿರಿಪ್ರದಕ್ಷಿಣೆ: ಆಲಂಬಗಿರಿ ದೇವಾಲಯದಿಂದ 1 ಕಿ.ಮೀ ದೂರವಿರುವ ಆಲಂಬಗಿರಿ ಬೆಟ್ಟದ ಪ್ರಕೃತಿಯ ತಪ್ಪಲಿನಲ್ಲಿ ಹುಣ್ಣಿಮೆ ಪ್ರಯುಕ್ತ ಸಂಕೀರ್ತನಾ ಗಿರಿಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು. ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಂ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.