ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸೌಲಭ್ಯ; ಆ್ಯಪ್ ಅಭಿವೃದ್ಧಿಪಡಿಸಿ -ಸೂರಜ್ ಗೋವಿಂದರಾಜ್ ಸಲಹೆ

Last Updated 29 ಮೇ 2022, 4:31 IST
ಅಕ್ಷರ ಗಾತ್ರ

ಚಿಂತಾಮಣಿ: ಸರ್ಕಾರದ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳು ಹಾಗೂ ಅವುಗಳನ್ನು ಪಡೆಯಲು ಬೇಕಾದ ಸಂಪೂರ್ಣ ಮಾಹಿತಿಯುಳ್ಳ ಆ್ಯಪ್ ಸಿದ್ಧಪಡಿಸಿ ಜನಸಾಮಾನ್ಯರಿಗೆ ಒದಗಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಸಲಹೆ ನೀಡಿದರು.

ತಾಲ್ಲೂಕಿನ ಮುನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಟಹಳ್ಳಿಯಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರಿನ ಸಿ.ಎಂ.ಆರ್.ಯು ಸ್ಕೂಲ್ ಆಫ್ ಸ್ಟಡೀಸ್ ಮತ್ತು ಮುನುಗನಹಳ್ಳಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಆಯೋಜಿಸಿದ್ದ ‘ಗ್ರಾಮ ಮಟ್ಟದ ಕಾನೂನು ಅರಿವು-ನೆರವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವೃದ್ಧಾಪ್ಯ ವೇತನ, ಸಾಮಾಜಿಕ ಭದ್ರತಾ ಯೋಜನೆಗಳು ಸೇರಿದಂತೆ ಇತರೆ ಸವಲತ್ತುಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಅರಿವು ಮೂಡಿಸಬೇಕು
ಎಂದರು.

ರೈತರನ್ನು ಕಾಡುತ್ತಿರುವ ಪಹಣಿ, ಖಾತೆ, ಪೋಡಿ, ದುರಸ್ತಿ, ತಿದ್ದುಪಡಿ, ಸರ್ವೆ, ನಕ್ಷೆ ಪಡೆಯುವುದು ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಈ ಸಮಸ್ಯೆಗಳಿಗೆ ಕಚೇರಿಗಳಿಗೆ ಅಲೆದಾಡಿ ಜನರು ಸೋತಿದ್ದಾರೆ. ಪ್ರತಿಯೊಬ್ಬರಿಗೂ ಇವುಗಳ ಅರಿವು ಮೂಡಿಸುವ ಆ್ಯಪ್ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಲಕ್ಷ್ಮೀಕಾಂತ್ ಜೆ. ಮಿಸ್ಕಿನ್ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಮನೆ ಮನೆಗೂ ಭೇಟಿ ನೀಡಿ ಸಮೀಕ್ಷೆ ನಡೆಸಿ ಜನೆ ಸಮಸ್ಯೆಗಳನ್ನು ಆಲಿಸಿದ್ದಾರೆ. ವಿವಿಧ ಇಲಾಖೆಗಳ ಸರ್ಕಾರದ ಯೋಜನೆಗಳ ಸೌಲಭ್ಯಗಳ ಅರಿವು ಮೂಡಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಮತ್ತು ಅಧಿಕಾರಿಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಿರುವುದು ಶ್ಲಾಘನೀಯ ಎಂದರು.

ಉಪ ವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಮುನುಗನಹಳ್ಳಿ ಮತ್ತು ಕುರುಬೂರು ಗ್ರಾಮ ಪಂಚಾಯಿತಿಗಳಲ್ಲಿ ಮನೆ ಮನೆಗೂ ಭೇಟಿ ನೀಡಿ ಸಾರ್ವಜನಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಕಾಲೇಜುಗಳ ವಿದ್ಯಾರ್ಥಿಗಳು ಹೀಗೆ ಒಂದೊಂದು ಗ್ರಾಮ ಪಂಚಾಯಿತಿಯನ್ನು ದತ್ತು ತೆಗೆದುಕೊಂಡು ಸಂಪೂರ್ಣ ಅರಿವು ಮೂಡಿಸುವ ಯೋಜನೆಯನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನ್ಯಾಯಾಧೀಶರಾದ ಮಂಜುನಾಥ್, ಶಿವಪ್ರಸಾದ್, ರೂಪಾ ಮೆನನ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾ.ಶಂಕರ್, ಸಿ.ಎಂ.ಆರ್. ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ ಮುಖ್ಯಸ್ಥ ಸುಬ್ರಮಣ್ಯಂ, ನಿರ್ದೇಶಕ ವಿ.ಜೆ. ಮಹೇಶ್, ತಹಶೀಲ್ದಾರ್ ಮುನಿಸ್ವಾಮಿರೆಡ್ಡಿ, ತಾ.ಪಂ.ಕಾರ್ಯ ನಿರ್ವಾಹಕ ಹರ್ಷವರ್ಧನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್, ಅಭಿವೃದ್ಧಿ ಅಧಿಕಾರಿ ಕವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT