ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಖಾಸಗಿ ಕಾಲೇಜಿಗಳಿಗೆ ಸರ್ಕಾರಿ ಕಾಲೇಜು ಸೆಡ್ಡು

ಸಾವಿರಾರು ವಿದ್ಯಾರ್ಥಿನಿಯರಿಗೆ ಜ್ಞಾನದ ದಾಹ ನೀಗಿಸಿದ ಕಾಲೇಜು
Published 14 ಜೂನ್ 2023, 0:50 IST
Last Updated 14 ಜೂನ್ 2023, 0:50 IST
ಅಕ್ಷರ ಗಾತ್ರ

ಚಿಂತಾಮಣಿ: ಸರ್ಕಾರಿ ಕಾಲೇಜುಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಬಹುತೇಕ ಸರ್ಕಾರಿ ಶಾಲಾ, ಕಾಲೇಜುಗಳು ಸಹ ಕವಿಷ್ಠ ಸೌಲಭ್ಯಗಳಿಲ್ಲದೆ ಅದ್ವಾನವಾಗಿರುತ್ತವೆ ಎಂಬ ಆರೋಪ ಸರ್ವೇ ಸಾಮಾನ್ಯ. ಆದರೆ, ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜು ಇದಕ್ಕೆ ಅಪವಾದವಾಗಿದೆ.

ಸಕಲ ಭೌತಿಕ ಸೌಲಭ್ಯಗಳು, ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆಯುತ್ತಿದೆ.

ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ಅತ್ಯಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿರುವ ಮೊದಲನೇ ಕಾಲೇಜು, ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಪ್ರಥಮ ಕಾಲೇಜು. ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಲು ರಾಷ್ಟ್ರೀಯ ವಿಚಾರ ಸಂಕಿರಣಗಳು ಹಾಗೂ ಇತಿಹಾಸ ಸಮ್ಮೇಳನಗಳನ್ನು ಆಯೋಜಿಸಿಲಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲೂ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲೇ ಅತ್ಯಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿರುವ ಕಾಲೇಜಾಗಿದೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲೇ ಅತ್ಯಂತ ಸುಂದರವಾದ ಕ್ಯಾಂಪಸ್ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಕಾಲೇಜು. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವಿದ್ಯಾರ್ಥಿಗಳ ಗಮನಸೆಳೆದು ಹೆಚ್ಚಿನ ಪ್ರಮಾಣದಲ್ಲಿ ದಾಖಲಾತಿ ಪಡೆಯುತ್ತಿದೆ. ಎಲ್ಲ ಹಂತಗಳಲ್ಲೂ ಆಧುನಿಕತೆಯನ್ನು ಅಳವಡಿಸಿಕೊಂಡ ಕಾಲೇಜು ಇದಾಗಿದೆ.

1965 ರಲ್ಲಿ ರಾಜ್ಯದ ಮೊದಲ ಪುರಸಭೆ ಸಭೆ ಪ್ರಥಮ ದರ್ಜೆ ಕಾಲೇಜಾಗಿ ಆರಂಭಗೊಂಡ ಕಾಲೇಜು ಇಂದು ಹೆಮ್ಮರವಾಗಿ ಬೆಳೆದಿದೆ. 2000-2001 ರಲ್ಲಿ ಪರಸಭೆ ಕಾಲೇಜನ್ನು ಸರ್ಕಾರ ವಹಿಸಿಕೊಂಡಿತು. ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದರಿಂದ ಆಡಳಿತದ ಹಿತದೃಷ್ಠಿಯಿಂದ ಬಾಲಕರ ಕಾಲೇಜು ಮತ್ತು ಮಹಿಳಾ ಕಾಲೇಜನ್ನಾಗಿ ವಿಭಜನೆಗೊಂಡಿತು. ಅಂದು ಸುಮಾರು 100 ವಿದ್ಯಾರ್ಥಿನಿಯರಿದ್ದ ಕಾಲೇಜು ಇಂದು 2050 ಮಂದಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಕನ್ನಡ, ರಸಾಯನಶಾಸ್ತ್ರ, ಇತಿಹಾಸ, ಎಂ.ಕಾಂ ಸ್ನಾತಕೋತ್ತರ ಕೇಂದ್ರವನ್ನು ತೆರೆಯಲಾಗಿದೆ.

ವಿಶ್ವದಲ್ಲಿ ಬದಲಾವಣೆಗೆ ತಕ್ಕಂತೆ ಹೊಸ ಹೊಸ ಕೋರ್ಸ್ಗಳನ್ನು ಆರಂಭಿಸಲಾಗಿದೆ. ಪ್ರಸ್ತುತ ಕಾಲೇಜಿನಲ್ಲಿ ಬಿ.ಎ, ಬಿಎಸ್ಸಿ, ಬಿ.ಕಾಂ,ಬಿ.ಸಿ.ಎ, ಬಿ.ಬಿ.ಎ ಪದವಿ ಕೋರ್ಸ್ಗಳಿವೆ. ಕಲಾ ವಿಭಾಗದಲ್ಲಿ ಐಚ್ಚಿಕ ಇಂಗ್ಲೀಷ್, ಪ್ರವಾಸೋದ್ಯಮ, ಭೂಗೋಳಶಾಸ್ತ್ರವನ್ನು ಹೊಸದಾಗಿ ಪ್ರಾರಂಭಿಸಲಾಗಿದೆ. ಶೇ.90 ರಷ್ಟು ವಿದ್ಯಾರ್ಥಿಗಳು ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಗ್ರಾಮೀಣ ಭಾಗದವರಾಗಿದ್ದಾರೆ. ಆಂಧ್ರಪ್ರದೇಶದ ಗಡಿಭಾಗದ ಅನಕ್ಷರಸ್ಥರ ಮಕ್ಕಳು ಅದರಲ್ಲೂ ವಿದ್ಯಾರ್ಥಿನಿಯರು ದೂರದ ನಗರಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುವುದು ಕನಸಿನ ಮಾತು. ಅಂತಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಕಾಲೇಜು ಆಶಾಕಿರಣವಾಗಿದೆ.

ಕಾಲೇಜಿನ ಸಂಪೂರ್ಣ ಮಾಹಿತಿಯನ್ನು ಕಿಯೋಸ್ಕ್ ನಲ್ಲಿ ಅಳವಡಿಸಲಾಗಿದೆ. ಕಾಲೇಜಿನ ವೆಬ್ ಸೈಟಿನಲ್ಲೂ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ(ರೂಸಾ) ಯೋಜನೆಯಡಿಯಲ್ಲಿ ಸ್ಮಾರ್ಟ್ ಕ್ಲಾಸ್ ಕೊಠಡಿಗಳು ಸೇರಿದಂತೆ ವಿವಿಧ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಪ್ರತಿ ತರಗತಿ ಕೊಠಡಿಗೂ ಪ್ರೊಜೆಕ್ಟರ್, ಸ್ಮಾರ್ಟ್ ಬೋರ್ಡ್, ಆಡಿಯೋ ವೀಡಿಯೋ ಸಿಸ್ಟಮ್, ಇಂಟರ್ನೆಟ್ ಒದಗಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗೆ ಅನಿಯಮಿತ ಉಚಿತ ವೈಫೈ ಸೌಲಭ್ಯವನ್ನು ನೀಡಲಾಗಿದೆ ಎಂದು ಪ್ರಾಂಶುಪಾಲ ಡಾ.ಜಿ.ಎಲ್.ವಿಜಯೇಂದ್ರ ಕುಮಾರ್ ಮಾಹಿತಿ ನೀಡಿದರು.

ಕಾಲೇಜಿನಲ್ಲಿ ಅತ್ಯಂತ ನುರಿತ ಮತ್ತು ಅನುಭವೀ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 28 ಜನ ಖಾಯಂ ಪ್ರಾಧ್ಯಾಪಕರಲ್ಲಿ 18 ಮಂದಿ ಪಿಎಚ್ಡಿ ಹಾಗೂ ಉಳಿದವರು ಎಂ,ಫಿಲ್ ಪದವೀಧರರಾಗಿದ್ದಾರೆ. 72 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಅದರಲ್ಲಿ 56 ಮಂದಿ ನೆಟ್/ ಕೆಸೆಟ್.ಎಂ.ಫಿಲ್ ಅರ್ಹತೆ ಪಡೆದವರಿದ್ದಾರೆ. ಕಳೆದ 4 ವರ್ಷಗಳಲ್ಲಿ ಪಿಜಿಯಲ್ಲಿ 26 ರ್ಯಾಂಕ್, 9 ಬಂಗಾರದ ಪದಕಗಳು ಕಾಲೇಜಿಗೆ ಲಭಿಸಿವೆ. ಸಂಶೋಧನಾ ಕೇಂದ್ರವನ್ನು ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಗ್ರಾಮೀಣ ಭಾಗಗಳಿಂದಲೇ ಹೆಚ್ಚಾಗಿ ಬರುವ ವಿದ್ಯಾರ್ಥಿಗಳಿಗಾಗಿ ಉದ್ಯೋಗ, ಕೌಶಲ್ಯ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ, ನೀಡಲಾಗುತ್ತದೆ. ವಿವಿಧ ಕಂಪನಿಗಳಿಂದ ಉದ್ಯೋಗ ಮೇಳ(ಕ್ಯಾಂಪಸ್ ಆಯ್ಕೆ) ಗಳನ್ನು ಆಯೋಜಿಸಲಾಗುತ್ತದೆ.ಪಠ್ಯಪುಸ್ತಕಗಳ ಜತೆಗೆ ಸ್ಪರ್ಧಾತ್ಮಕಪರೀಕ್ಷೆಗಳಿಗೆ ಅಗತ್ಯವಿರುವ ಪರಾಮರ್ಶನ ಕೃತಿಗಳನ್ನು ಅಧ್ಯಯನ ಮಾಡುವ ವ್ಯವಸ್ಥೆ ಗ್ರಂಥಾಲಯದಲ್ಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಕಾಲೇಜಿ ಆಗಿದೆ.
-ಡಾ.ಎಂ.ಎಲ್.ವಿಜಯೇಂದ್ರ ಕುಮಾರ್, ಪ್ರಾಂಶುಪಾಲ

ನ್ಯಾಕ್ ಸಮಿತಿಯಿಂದ ಬಿ ಪ್ಲಸ್ ಪ್ಲಸ್ ಗ್ರೇಡ್ ಮಾನ್ಯತೆ ಪಡೆದಿದ್ದು, ಯುಜಿಸಿಯಿಂದ ಮತ್ತಷ್ಟು ಅನುದಾನ ಪಡೆಯಲು ನೆರವಾಗಿದೆ. ಎಲ್.ಎಂ.ಎಸ್ ವ್ಯವಸ್ಥೆ ಇದ್ದು, ಆನ್ ಲೈನ್ ತರಗತಿಗಳು, ಆನ್ ಲೈನ್ ಸ್ಟಡಿ ಮೆಟೀರಿಯಲ್, ಆನ್ ಲೈನ್ ಪ್ರಶ್ನೋತ್ತರಗಳು ಸಿಗುತ್ತವೆ. ಪ್ರಾದ್ಯಾಪಕರ ಜತೆ ಸಂವಾದ, ಚರ್ಚೆ, ಕಿರುಪರೀಕ್ಷೆಗಳನ್ನು ನಡೆಸಬಹುದು. ಟೆಲಿ ಶಿಕ್ಷಣ ಉಪಗ್ರಹ ಆಧಾರಿತ ಶಿಕ್ಷಣದಿಂದ ವಿದ್ಯಾರ್ಥಿಗಳು ತರಗತಿಗಳಲ್ಲಿ ಕುಳಿತು ಉನ್ನತ ಸಂಪನ್ಮೂಲ ಪ್ರಾಧ್ಯಾಪಕರ ಉಪನ್ಯಾಸ ಕೇಳಬಹುದು. ಪ್ರಶ್ನೆ, ಚರ್ಚೆ, ಸಂವಾದ ನಡೆಸುವ ಅವಕಾಶವೂ ಇದೆ.

ಮಹಿಳಾ ಕಾಲೇಜು ಆಗಿರುವುದರಿಂದ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಒಟ್ಟು 74 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿನಿಯರ ಸುರಕ್ಷತೆಯ ಭಾಗವಾಗಿ ಮಹಿಳಾ ಆಂತರಿಕ ವಿಚಾರಣ ಸಮಿತಿ ಮತ್ತು ಪೋಷ್, ಘಟಕಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಆರೋಗ್ಯದ ದೃಷ್ಟಿಯಿಂದ ಕಾಲೇಜಿನ ಎಲ್ಲ ಅಂತಸ್ತುಗಳಲ್ಲೂ ನೀರಿನ ಶುದ್ಧೀಕರಣ ಘಟಕಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ. ತರಗತಿ ಕೊಠಡಿಗಳು, ಶೌಚಾಲಯಗಳು, ಕಾರಿಡಾರ್ ಗಳು, ಕ್ಯಾಂಟೀನ್, ಸೆಮಿನಾರ್ ಹಾಲ್, ಕಚೇರಿಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಪಠ್ಯಪುಸ್ತಕಗಳ ಜತೆಗೆ ವ್ಯಾಸಂಗದ ನೈಪುಣ್ಯತೆಯನ್ನು ಹೆಚ್ಚಿಸುವ ಸಲುವಾಗಿ ಇಂಗ್ಲೀಷ್ ಸಂವಹನ, ಸಾಮಾನ್ಯ ಕಲಿಕೆ, ಎನ್.ಎಸ್.ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್ ಕ್ರಾಸ್, ಇಕೋ ಕ್ಲಬ್, ಪರಂಪರೆ ಕೂಟ, ಸಾಹಸಕೂಟಗಳು ಕಾರ್ಯನಿರ್ವಹಿಸುತ್ತಿವೆ. ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. ಸಾಂಸ್ಕೃತಿಕ ಸಮಿತಿಯಿಂದ ವಿದ್ಯಾರ್ಥಿನಿಯರಿಗೆ ಯಕ್ಷಗಾನ, ವೀರಗಾಸೆ, ಡೊಳ್ಳುಕುಣಿತ, ಪೂಜಾಕುಣಿತ ತರಬೇತಿ ನೀಡಲಾಗಿದೆ. ರಸಪ್ರಶ್ನೆ, ಮಾಡಲ್ ಮೇಕಿಂಗ್, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಲಾಗುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT