ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ: ಸಿದ್ದರಾಮಯ್ಯ ವಿರುದ್ಧ ಗುಟುರು ಹಾಕಿದ ಯತ್ನಾಳ

Published 15 ಜೂನ್ 2024, 13:44 IST
Last Updated 15 ಜೂನ್ 2024, 13:44 IST
ಅಕ್ಷರ ಗಾತ್ರ

ಬೆಂಗಳೂರು: ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ತನ್ನ ಗ್ಯಾರಂಟಿ, ವಾರಂಟಿಗಳೆಲ್ಲ ಕೆಲಸ ಮಾಡದೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಸರ್ಕಾರ ಈಗ ಜನಸಾಮಾನ್ಯರ ಮೇಲೆ ಬರೆ ಹಾಕುವ ಕೆಲಸ ಮಾಡಿದೆ. ಪೆಟ್ರೋಲ್ ಹೆಚ್ಚಳದಿಂದ ಕೇವಲ ಜನಸಾಮಾನ್ಯನಿಗೆ ತೊಂದರೆಯಾಗುವುದಿಲ್ಲ. ಇದರಿಂದ ಹಣದುಬ್ಬರ, ಗ್ರಾಹಕ ಬೆಲೆ ಸೂಚ್ಯಂಕ ಕೂಡ ಹೆಚ್ಚಾಗುತ್ತದೆ ಎಂಬ ಸಾಮಾನ್ಯ ಆರ್ಥಿಕ ಜ್ಞಾನವಿಲ್ಲದಿರುವುದು ನಿಜಕ್ಕೂ ಆಶ್ಚರ್ಯಕರ’ ಎಂದು ಕಿಡಿಕಾರಿದ್ದಾರೆ.

‘ಇಷ್ಟೇ ಅಲ್ಲದೆ ಸಾರಿಗೆ ಇಲಾಖೆಯ ವೆಚ್ಚ ಸೇರಿದಂತೆ, ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗುತ್ತದೆ ಮತ್ತು ಗ್ರಾಹಕರ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದ ಜನರಿಗೆ ಮತ್ತು ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂಬ ಅಂಶ ಅತಿ ಹೆಚ್ಚು ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಯದೆ ಇರುವ ವಿಷಯವೇನಲ್ಲ’ ಎಂದು ದೂರಿದ್ದಾರೆ.

‘ಜನಕಲ್ಯಾಣ ಯೋಜನೆಗಳಿಂದ, ಅಭಿವೃದ್ಧಿ ಕಾರ್ಯಗಳಿಂದ ಜನರ ಮನ್ನಣೆ ಗಳಿಸಬೇಕಾಗಿದ್ದ ಸರ್ಕಾರ ವೋಟು ಗಳಿಸಲು ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಈಗ ಆ ಯೋಜನೆಗಳನ್ನು ಕೈಬಿಡಲು ಆಗದೆ, ಕೈಗೆತ್ತಿಕೊಂಡರೆ ಹಣದ ಅಭಾವದ ಕೊರತೆಯಿಂದ ದಿನಬಳಕೆ ವಸ್ತುಗಳನ್ನು ಹೆಚ್ಚಿಸುತ್ತಿರುವುದು ಜನವಿರೋಧಿ ನೀತಿಯಷ್ಟೇ’ ಎಂದು ಕುಟುಕಿದ್ದಾರೆ.

ರಾಜ್ಯದಲ್ಲಿ ಪೆಟ್ರೋಲ್‌ ₹3.02 ಹಾಗೂ ಡೀಸೆಲ್‌ ಬೆಲೆಯಲ್ಲಿ ₹3 ಹೆಚ್ಚಳವಾಗಿದೆ. ಈ ದರ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿ ಇಂದು (ಶನಿವಾರ) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT