ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಪಿಯು ಕೋಚಿಂಗ್‌ ಎಂಬ ಮಾಯೆ!

ನೀಟ್‌, ಸಿಇಟಿ, ಜೆಇಇ: ತಾರತಮ್ಯ, ಸ್ಪರ್ಧಾತ್ಮಕ ಜಗತ್ತಿನ ಕರಾಳಮುಖ
Published 9 ಜೂನ್ 2024, 0:02 IST
Last Updated 9 ಜೂನ್ 2024, 0:02 IST
ಅಕ್ಷರ ಗಾತ್ರ

ದಾವಣಗೆರೆ: ‘ಮಗನನ್ನು ಪ್ರಥಮ ಪಿಯುಸಿಗೆ ಸೇರಿಸಿದ್ದೆವು. ಎಷ್ಟೇ ಹೇಳಿದರೂ ಆತ ಎರಡನೇ ವರ್ಷ ಇಲ್ಲಿಯೇ ಮುಂದುವರಿಯಲು ಇಷ್ಟಪಡುತ್ತಿಲ್ಲ.‌ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಓದುತ್ತಾರೆ. ಅವರಲ್ಲಿ ಹತ್ತಾರು ವಿದ್ಯಾರ್ಥಿಗಳು ಎಂಬಿಬಿಎಸ್‌, ಎಂಜಿನಿಯರಿಂಗ್‌ನ ಸರ್ಕಾರಿ ಸೀಟು ಪಡೆಯುತ್ತಾರೆ. ಅವರಂತೆಯೇ ನಮ್ಮ ಮಗನೂ ಆಗಲಿ ಎಂಬ ಕನಸು ಕಂಡಿದ್ದೆವು. ಆದರೆ ಆತ ಇಲ್ಲಿ ತನಗೆ ಓದಲಾಗದು ಎಂದು ತಿಳಿಸಿದ. ಕೊನೆಗೆ ಅವರ ಅಮ್ಮ ಪುಸಲಾಯಿಸಿ ಕೇಳಿದಾಗ ನಿರಾಕರಣೆಯ ಕಾರಣ ತಿಳಿಸಿದ...’

‘ಶೇ 90ರಷ್ಟು ಅಂಕ ಗಳಿಸುತ್ತಿದ್ದರೂ ಸೆಕ್ಷನ್‌ ರೀ ಶಫಲ್‌ (ಪುನರ್ರಚನೆ) ವೇಳೆ ಆತನಿಗೆ ಹಿಂಬಡ್ತಿ ನೀಡಲಾಗಿತ್ತು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಮಗ, ಈಗ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಅದಕ್ಕೇ ವಾಪಸ್‌ ಊರಿಗೆ ಕರೆದೊಯ್ದು, ಹುಬ್ಬಳ್ಳಿಯ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಲು ನಿರ್ಧರಿಸಿದ್ದೇವೆ. ಸಮಯಕ್ಕೆ ಸರಿಯಾಗಿ ವಿಷಯ ತಿಳಿಯಿತು. ಇಲ್ಲವೆಂದರೆ ಇದ್ದೊಬ್ಬ ಮಗ ನಮ್ಮ ಕೈಬಿಟ್ಟು ಹೋಗುತ್ತಿದ್ದ’

ಕೆಲವು ವರ್ಷಗಳ ಹಿಂದೆ ಆರಂಭವಾಗಿ, ಸಾಕಷ್ಟು ಹೆಸರು ಮಾಡಿರುವ ಇಲ್ಲಿನ ಕಾಲೇಜೊಂದರಿಂದ ಮಗನನ್ನು ವಾಪಸ್‌ ಕರೆದೊಯ್ದ ಪಾಲಕರು, ಆ ಕಾಲೇಜಿನವರು ಅನುಸರಿಸುವ ತಾರತಮ್ಯ ನೀತಿಯನ್ನು ಬಹಿರಂಗಪಡಿಸಿದ್ದು ಹೀಗೆ.

ಅದು ಬೆಂಗಳೂರಿನ ‘ಪ್ರತಿಷ್ಠಿತ’ ಪಿಯುಸಿ ಕಾಲೇಜು. ಅಲ್ಲಿ ಓದಿದ ಬಹುಪಾಲು ವಿದ್ಯಾರ್ಥಿಗಳು ‘ಟಾಪರ್ಸ್‌’ಗಳಾಗಿ ಹೊರಹೊಮ್ಮುತ್ತಾರೆ ಎಂಬ ನಂಬಿಕೆ. ಮಗಳನ್ನು ಅಲ್ಲಿ ಓದಿಸಿದರೆ ಆಕೆಯ ಬದುಕು ‘ಬಂಗಾರ’ವಾಗಬಹುದೆಂಬ ಕನಸು ಮನದೊಳಗೆ ಮೊಳೆತಿತ್ತು. ಪತ್ನಿ ಹಾಗೂ ಮಗಳ ಜೊತೆ ಕಾಲೇಜಿಗೆ ಹೋದಾಗ ಅಲ್ಲಿನ ಕ್ಯಾಂಪಸ್‌ ಕಂಡು ಅತೀವ ಸಂತಸವಾಯಿತು. ಸಾಲವಾದರೂ ಪರವಾಗಿಲ್ಲ. ಮಗಳನ್ನು ಇಲ್ಲೇ ಓದಿಸಬೇಕೆಂದು ಆ ಕ್ಷಣವೇ ನಿರ್ಧರಿಸಿಬಿಟ್ಟರು. ದುಬಾರಿ ಶುಲ್ಕ ನೀಡಿ ಪ್ರವೇಶ ಪಡೆದರು. ಕಾಲೇಜು ಶುರುವಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕೆಲ ತಿಂಗಳ ಬಳಿಕ ಆಕೆಯನ್ನು ಪ್ರಧಾನ ಕ್ಯಾಂಪಸ್‌ನಿಂದ ಆ ಸಂಸ್ಥೆಯ ಮತ್ತೊಂದು ಶಾಖೆಗೆ ಸ್ಥಳಾಂತರಿಸಿಬಿಟ್ಟರು.  

ಸ್ಥಳಾಂತರಗೊಂಡ ಕಟ್ಟಡದಲ್ಲಿನ ಕೊಠಡಿಗಳಲ್ಲಿ ಬೆಳಕೇ ಇರಲಿಲ್ಲ. ಅಲ್ಲಿ ನೈಸರ್ಗಿಕ ಗಾಳಿಯೂ ಇರಲಿಲ್ಲ. ಕಾಲೇಜಿಗೆ ಹೋಗಿ ಆಡಳಿತ ಮಂಡಳಿಯ ಧೋರಣೆ ಕುರಿತು ಪ್ರಶ್ನಿಸಿದರೆ, ‘ಮೊದಲೆರಡು ತಿಂಗಳಲ್ಲಿ ನಡೆಸಿದ ಕಿರು ಪರೀಕ್ಷೆಗಳಲ್ಲಿ ನಿಮ್ಮ ಮಗಳು ಕಡಿಮೆ ಅಂಕ ಪಡೆದಿದ್ದಾಳೆ. ಶೇ 95ಕ್ಕೂ ಹೆಚ್ಚು ಅಂಕ ಪಡೆದವರಿಗಷ್ಟೇ ಪ್ರಧಾನ ಕ್ಯಾಂಪಸ್‌ನಲ್ಲಿ ಪಾಠ. ಉಳಿದವರೆಲ್ಲಾ ಸಂಸ್ಥೆಯ ಇತರ ಶಾಖೆಗಳಲ್ಲೇ ಓದಬೇಕು. ಅಲ್ಲಿಯೂ ಇಲ್ಲಿನ ಉಪನ್ಯಾಸಕರೇ ಸರದಿಯಲ್ಲಿ ಪಾಠ ಮಾಡುತ್ತಾರೆ ಎಂದು ಹೇಳಿದರು. ಅವರ ಮಾತು ಕೇಳಿ ತುಂಬಾ ಬೇಸರವಾಯಿತು. ಬೇರೆ ದಾರಿ ಕಾಣದೆ ದ್ವಿತೀಯ ಪಿಯುಗೆ ಮಗಳನ್ನು ಇನ್ನೊಂದು ಕಾಲೇಜಿಗೆ ಸೇರಿಸಿದೆ’.

ಅಂಕಗಳ ಆಧಾರದಲ್ಲಿ ಇಬ್ಬಗೆಯ ನೀತಿ ಅನುಸರಿಸುವ, ‘ಪ‍್ರತಿಷ್ಠಿತ’ ಎಂಬ ಹಣೆಪಟ್ಟಿ ಹೊತ್ತು ಪಾಲಕರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುವ ಖಾಸಗಿ ಪಿಯು ಕಾಲೇಜುಗಳ ‘ಬಂಡವಾಳ’ವನ್ನು ಪಾಲಕ ಬಸವನಗೌಡ ಬಿಚ್ಚಿಟ್ಟ ಬಗೆ ಇದು.

ಮಕ್ಕಳ ಭವಿಷ್ಯ ಉಜ್ವಲವಾಗಲೆಂಬ ಮಹಾದಾಸೆಯಿಂದ ಸಾಲ ಮಾಡಿ ಲಕ್ಷಾಂತರ ರೂಪಾಯಿ ತಂದು ಕಾಲೇಜು ಆಡಳಿತ ಮಂಡಳಿಗಳ ಜೋಳಿಗೆಗೆ ಸುರಿಯುವ, ಅವುಗಳ ನಿಜ ಬಣ್ಣ ಬಯಲಾದ ಬಳಿಕ ಭ್ರಮನಿರಸನಗೊಂಡು ಪರಿತಪಿಸುವ ಅದೆಷ್ಟೋ ಪಾಲಕರು ನಮ್ಮ ನಡುವೆ ಇದ್ದಾರೆ. ಇವರ ಜೊತೆಯಲ್ಲಿ ವೈದ್ಯಕೀಯ ಪ್ರವೇಶದ ನೀಟ್‌ ಹಾಗೂ ಎಂಜಿನಿಯರಿಂಗ್‌ ಪದವಿ ಪ್ರವೇಶದ ಜೆಇಇ, ಸಿಇಟಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತೇವೆ ಎನ್ನುವ ಕೋಚಿಂಗ್‌ ಕೇಂದ್ರಗಳು ಸಹ ಅಣಬೆಯಂತೆ ತಲೆಯೆತ್ತಿ ಪಾಲಕರು ಹಾಗೂ ವಿದ್ಯಾರ್ಥಿಗಳನ್ನು ಮರಳು ಮಾಡುತ್ತಿವೆ. ಟ್ಯೂಷನ್‌ ಹಾಗೂ ಖಾಸಗಿ ಪಿಯು ಕಾಲೇಜುಗಳ ಅಪವಿತ್ರ ಮೈತ್ರಿಯು ಮಾಫಿಯಾದಂತೆ ಪ್ರಬಲವಾಗಿದ್ದರೂ ಸರ್ಕಾರ ತನಗೇನು ಗೊತ್ತಿಲ್ಲದಂತೆ ದಿವ್ಯಮೌನದಲ್ಲಿದೆ.

ಎಸ್‌ಎಸ್‌ಎಲ್‌ಸಿ ಸೇರಿದಂತೆ ವಿವಿಧ ಪಠ್ಯಕ್ರಮದ 10ನೇ ತರಗತಿ ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ ಖಾಸಗಿ ಪದವಿಪೂರ್ವ (ಪಿಯುಸಿ) ಕಾಲೇಜು ಮತ್ತು ಕೋಚಿಂಗ್‌ (ತರಬೇತಿ) ಕೇಂದ್ರಗಳನ್ನು ನಡೆಸುವ ಇಂಥ ಹತ್ತುಹಲವು ಸಂಸ್ಥೆಗಳು ಪಾಲಕರತ್ತ ತಮ್ಮ ಕಬಂಧಬಾಹುಗಳನ್ನು ಚಾಚಲು ಶುರುಮಾಡುತ್ತವೆ. ಇಂತಹ ಸಂಸ್ಥೆಗಳಿಂದ ಪಾಲಕರ ಮೊಬೈಲ್‌ಗಳಿಗೆ ಕರೆಗಳ ಮಹಾಪೂರವೇ ಹರಿದು ಬರತೊಡಗುತ್ತದೆ.

‘ನೀಟ್, ಸಿಇಟಿ, ಜೆಇಇ ಕೋರ್ಸ್‌ಗಳ ಪ್ರವೇಶಕ್ಕೆ ಅಗತ್ಯವಿರುವ ತರಬೇತಿ ಪಡೆದರೆ ನಿಮ್ಮ ಮಕ್ಕಳಿಗೆ ಸರ್ಕಾರದ (ಕಡಿಮೆ ಶುಲ್ಕ) ಸೀಟು ದೊರೆಯುತ್ತದೆ’ ಎಂಬ ಆಮಿಷವನ್ನೂ ಈ ಕರೆಗಳ ಮೂಲಕ ಒಡ್ಡಲಾಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಆವರೆಗೂ ಅಷ್ಟಾಗಿ ಆಲೋಚಿಸಿಯೇ ಇರದ ಬಹುಪಾಲು ಪಾಲಕರು, ಇಂತಹ ತರಹೇವಾರಿ ಆಮಿಷಗಳಿಗೆ ಮಾರುಹೋಗುತ್ತಾರೆ. ಕೆಲವರು ಗೊಂದಲಕ್ಕೆ ಒಳಗಾಗಿಬಿಡುವುದೂ ಉಂಟು. 

ವಾರ್ಷಿಕ ₹ 2 ಲಕ್ಷದಿಂದ ₹ 6 ಲಕ್ಷ ಶುಲ್ಕ ಪಡೆಯುವ ಈ ಕಾಲೇಜುಗಳು ‘ಸ್ಕಾಲರ್‌ಶಿಪ್‌’ (ತಾವೇ ನಿಗದಿಪಡಿಸಿರುವ ಶುಲ್ಕದಲ್ಲಿ ರಿಯಾಯಿತಿ ನೀಡುವುದಕ್ಕೆಂದು ಆಡಳಿತ ಮಂಡಳಿ ಇಟ್ಟಿರುವ ಹೆಸರು ಇದು) ಹೆಸರಿನಲ್ಲಿ ನೀಡುವ ಕೊಡುಗೆ ಹಾಗೂ ಈ ಹಿಂದೆ ಓದಿದ ವಿದ್ಯಾರ್ಥಿಗಳ ಯಶೋಗಾಥೆಯ ವಿವರಣೆಗಳಿಗೆ ಮನಸೋಲುವ ಪಾಲಕರು, ಸಾಲ–ಸೋಲ ಮಾಡಿ ಇಂತಹ ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸಿದ ಅನೇಕ ಉದಾಹರಣೆಗಳಿವೆ.

ಮೊದಲ ವರ್ಷದ ಪಿಯುಸಿ ಪ್ರವೇಶಕ್ಕೆ ಮಾತ್ರ ‘ಸ್ಕಾಲರ್‌ಶಿಪ್‌’ ನೀಡುತ್ತ, ದ್ವಿತೀಯ ವರ್ಷಕ್ಕೆ ಪೂರ್ಣ ಶುಲ್ಕ ಪಡೆಯುವ ಇಂಥ ಕಾಲೇಜುಗಳು ರಾಜ್ಯದ ಪ್ರಮುಖ ನಗರಗಳಲ್ಲಿ ಈಗಾಗಲೇ ನಾಯಿಕೊಡೆಗಳಂತೆ ತಲೆ ಎತ್ತಿವೆ.

ಮೊದಲೆಲ್ಲಾ ‘ಉಳ್ಳವರು’ ಮಾತ್ರ ಅಂದರೆ, ಸರ್ಕಾರಿ ನೌಕರರು (ಅದರಲ್ಲೂ ವಿಶೇಷವಾಗಿ ಶಿಕ್ಷಕರು, ಉಪನ್ಯಾಸಕರು), ವ್ಯಾಪಾರಸ್ಥರು, ಮಧ್ಯಮ, ಮೇಲ್ಮಧ್ಯಮ ವರ್ಗದವರು ಇಂತಹ ಕಾಲೇಜುಗಳ ಆಕರ್ಷಣೆಗೆ ಒಳಗಾಗಿ ಮಕ್ಕಳನ್ನು ದಾಖಲಿಸುತ್ತಿದ್ದರು. ಈಚಿನ ವರ್ಷಗಳಲ್ಲಿ ಸಣ್ಣ ಕೃಷಿಕರು, ಕೃಷಿ ಕೂಲಿ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರೂ ಸಾಲ ಮಾಡಿ ಮಕ್ಕಳನ್ನು ಇಲ್ಲಿ ಸೇರಿಸುತ್ತಿದ್ದಾರೆ.

ಉದ್ಯಮದ ಪರಿಭಾಷೆಯಲ್ಲೇ ಹೇಳುವುದಾದರೆ, ಕಾಲೇಜು ಆಡಳಿತ ಮಂಡಳಿಗಳು ವಿದ್ಯಾರ್ಥಿಗಳನ್ನು ‘ಕಚ್ಚಾ ವಸ್ತು’ ಹಾಗೂ ಕಾಲೇಜುಗಳನ್ನು ‘ಕಾರ್ಖಾನೆ’ ಎಂಬಂತೆಯೇ ಭಾವಿಸಿಬಿಟ್ಟಿವೆ. ಶೇ 90 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸುವವರಿಗೆ ಆದ್ಯತೆ ಅನುಸಾರ ಪ್ರವೇಶ ನೀಡುವ ಇವು ಪಠ್ಯೇತರ ಚಟುವಟಿಕೆಗಳನ್ನು ಸಂಪೂರ್ಣ ಮರೆತಂತಿವೆ. ವಿಜ್ಞಾನ ವಿಭಾಗಕ್ಕೇ ಒತ್ತು ನೀಡುವ ಕಾಲೇಜುಗಳು, ಸಿಇಟಿ, ಜೆಇಇ, ನೀಟ್ ಕೋಚಿಂಗ್‌ ಕೊಡುವ ಆಮಿಷದೊಂದಿಗೆ 10ನೇ ತರಗತಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗಾಳ ಹಾಕುತ್ತವೆ. ಸ್ಥಳೀಯವಾಗಿ ಅಸ್ತಿತ್ವದಲ್ಲಿ ಇದ್ದೂ ಇಲ್ಲದಂತಿರುವ ಹತ್ತು ಹಲವು ಕಾಲೇಜುಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು, ಒಂದೊಂದು ತರಬೇತಿ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಾ ಶಿಕ್ಷಣವನ್ನು ‘ಬಹುದೊಡ್ಡ ದಂಧೆ’ ಮಾಡಿಕೊಂಡಿವೆ ಎಂಬುದು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಆರೋಪ.

ಇಂಥ ಕೋಚಿಂಗ್‌ ಸೆಂಟರ್‌ ಸೇರುವ ವಿದ್ಯಾರ್ಥಿಗಳಿಗೆ ಪಿಯುಸಿಗೆ ಪ್ರತ್ಯೇಕ ಕಾಲೇಜಿನಲ್ಲಿ (ಸ್ಥಳೀಯವಾಗಿ ಅಸ್ತಿತ್ವದಲ್ಲಿ ಇದ್ದೂ ಇಲ್ಲದಂತಿರುವ) ಪ್ರವೇಶಾತಿಯನ್ನು ಆ ಸೆಂಟರ್‌ನವರೇ ನಿಗದಿ ಮಾಡುತ್ತಾರೆ. ಪ್ರಾಕ್ಟಿಕಲ್‌ (ಪ್ರಯೋಗಾಲಯ) ತರಗತಿಗಳಿಗೆ ಹಾಗೂ ಆಂತರಿಕ ಅಂಕ (ಕೆಲವು ವಿಷಯಗಳಿಗೆ 30, ಕೆಲವು ವಿಷಯಗಳಿಗೆ 20 ಅಂಕ) ಪಡೆಯಲು ಕಾಲೇಜಿನಲ್ಲಿ ಶೇ 75ರಷ್ಟು ಹಾಜರಾತಿ ಕಡ್ಡಾಯ ಆಗಿರುವುದರಿಂದ ಹಾಗೂ ಪಿಯು ಮಂಡಳಿಯ ನಿಯಮ ಪಾಲನೆಗಾಗಿ ಈ ಪ್ರವೇಶಾತಿಯ ‘ಔಪಚಾರಿಕತೆ’ ಪೂರ್ಣಗೊಳಿಸಲಾಗುತ್ತದೆ. ಹೀಗೆ ಪ್ರವೇಶ ನೀಡುವ ಕಾಲೇಜುಗಳಲ್ಲಿ ಯಾವುದೇ ಸೌಲಭ್ಯ, ವಿದ್ಯಾರ್ಥಿಗಳ ಹಾಜರಾತಿ ಕಂಡುಬರದಿದ್ದರೂ ಸರ್ಕಾರ ಕ್ರಮ ಕೈಗೊಳ್ಳದಿರುವುದು ಸೋಜಿಗವೇ ಸರಿ ಎಂಬುದು ಅನೇಕ ಪಾಲಕರು ದೂರು.

ಈ ಜಾಲ ಬೆಂಗಳೂರು, ಧಾರವಾಡ, ಮಂಗಳೂರು, ಮೈಸೂರು, ಮಣಿಪಾಲದಂತಹ ‘ಶೈಕ್ಷಣಿಕ ಹಬ್‌’ಗಳಿಗಷ್ಟೇ ಸೀಮಿತವಾಗಿಲ್ಲ. ಕಲಬುರಗಿ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆಯಂತಹ ನಗರಗಳಿಗೂ ಈ ದಂಧೆ ತನ್ನ ಕೆನ್ನಾಲಿಗೆಯನ್ನು ಚಾಚಿದೆ. ಉಳಿದ ಜಿಲ್ಲಾ ಕೇಂದ್ರಗಳಿಗೂ ಇದು ಹರಡುತ್ತಿದ್ದು, ಶಿಕ್ಷಣ ಸಂಸ್ಥೆಗಳು ಏಜೆಂಟರ ಮೂಲಕ ಮನೆಗಳ ಬಾಗಿಲು ಬಡಿದು ಪಾಲಕರಿಗೆ ಗಾಳ ಹಾಕುತ್ತಿವೆ. ಸರ್ಕಾರ ಮಾತ್ರ ಕೈಕಟ್ಟಿ ಕುಳಿತಿದೆ ಎಂದು ದಾವಣಗೆರೆಯ ಕಾಲೇಜೊಂದರಲ್ಲಿ ಮಗನನ್ನು ಓದಿಸಿದ್ದ ಹಗರಿಬೊಮ್ಮನಹಳ್ಳಿಯ ಪಾಲಕ ದೂರಿದರು.

‘ಎಸ್‌ಎಸ್‌ಎಲ್‌ಸಿ ಬಳಿಕ ನೀಟ್ ತರಬೇತಿಗೆಂದು ಖಾಸಗಿ ಕೋಚಿಂಗ್ ಸಂಸ್ಥೆಯ ಪ್ರವೇಶ ಪರೀಕ್ಷೆ ಬರೆದೆ. ಅವರ ಸ್ಕಾಲರ್‌ಶಿಪ್‌ ಯೋಜನೆಗೂ ಆಯ್ಕೆಯಾದೆ. ಬಳಿಕ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದ ಖಾಸಗಿ ಕಾಲೇಜಿಗೆ ದಾಖಲಾಗಬೇಕಾಯಿತು. ಅಲ್ಲೂ ಪ್ರವೇಶ ಪರೀಕ್ಷೆ ಇತ್ತು. ಅಲ್ಲಿಯೂ ಉತ್ತಮ ಅಂಕ ಗಳಿಸಿದ್ದರಿಂದ ಪ್ರಥಮ ಪಿಯುಸಿಗೆ  ಉಚಿತ ಪ್ರವೇಶ ನೀಡಿದ್ದರು. ಆದರೆ, ದ್ವಿತೀಯ ಪಿಯುಗೆ ಪೂರ್ಣ ಶುಲ್ಕ ಪಡೆದಿದ್ದರು. ಕೋಚಿಂಗ್ ಉಚಿತವಾಗಿದ್ದರೂ ತರಬೇತಿ ಸಾಧನ, ಪುಸ್ತಕಗಳಿಗೆಂದು ಎರಡು ವರ್ಷವೂ ದುಬಾರಿ ಹಣ ವಸೂಲಿ ಮಾಡಿದ್ದರು’ ಎಂದು ಮೈಸೂರಿನಲ್ಲಿ ಪಿಯು ಮುಗಿಸಿ, ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಹೆಸರು ಬಹಿರಂಗಪಡಿಸಲು ಬಯಸದ ವಿದ್ಯಾರ್ಥಿಯೊಬ್ಬ ಹೇಳಿರುವುದು ಇಂತಹ ಕಾಲೇಜುಗಳ ಕರಾಳ ಮುಖಕ್ಕೆ ಕನ್ನಡಿ ಹಿಡಿಯುವಂತಿದೆ.

ನಿಯಮ ಉಲ್ಲಂಘಿಸಿದ ದೂರುಗಳು ಬಂದಾಗ ಇಲಾಖೆ ಕ್ರಮಕೈಗೊಂಡಿದೆ. ಕಾಲೇಜಿಗೆ ಅನುಮತಿ ಪಡೆದವರು ಇಲಾಖೆ ನಿಗದಿಪಡಿಸಿದ ಬೋಧನಾ ಅವಧಿ ಮುಗಿದ ನಂತರ ಸಿಇಟಿ, ನೀಟ್‌ ತರಬೇತಿ ನೀಡಲು ಅಭ್ಯಂತರವಿಲ್ಲ. ಖಾಸಗಿ ಕಾಲೇಜುಗಳು ತರಬೇತಿ ನೀಡಲು ಪ್ರತ್ಯೇಕ ನೋಂದಣಿ ಮಾಡಿಕೊಂಡಿವೆ. ಅಧಿಕ ಶುಲ್ಕ ಪಡೆದ ದೂರು ಬಂದರೆ ಕ್ರಮ ಜರುಗಿಸಲಾಗುವುದು
ಸಿಂಧು ರೂಪೇಶ್, ನಿರ್ದೇಶಕಿ, ಪಿಯು ನಿರ್ದೇಶನಾಲಯ.
1,231 ರಾಜ್ಯದಲ್ಲಿರುವ ಸರ್ಕಾರಿ ಪಿಯು ಕಾಲೇಜುಗಳು 825 ಅನುದಾನಿತ ಕಾಲೇಜುಗಳು 3,567 ಖಾಸಗಿ ‍ಪಿಯು ಕಾಲೇಜುಗಳು
ದೂರಿದರೂ ಕ್ರಮವಿಲ್ಲ
ಸರ್ಕಾರ ಕಾಲಕಾಲಕ್ಕೆ ನಿಗದಿ ಮಾಡುವ ಶುಲ್ಕ ಖಾಸಗಿ ಪಿಯು ಕಾಲೇಜುಗಳಿಗೂ ಅನ್ವಯವಾಗುತ್ತದೆ. ಪ್ರಯೋಗಾಲಯ ಶುಲ್ಕ ₹336, ಪ್ರಾಯೋಗಿಕ ಪರೀಕ್ಷೆ ಶುಲ್ಕ ₹330 ಸೇರಿ ಖಾಸಗಿ ಕಾಲೇಜುಗಳು ಪ್ರತಿ ವಿದ್ಯಾರ್ಥಿಯಿಂದ ಪ್ರಥಮ ಹಾಗೂ ದ್ವಿತೀಯ ಪಿಯುಗೆ ಕ್ರಮವಾಗಿ ₹2,126 ಹಾಗೂ ₹3,132 ಪಡೆಯಬೇಕು. ಅದರಲ್ಲೂ ವಿದ್ಯಾರ್ಥಿ ಗಳಿಂದ ಸಂಗ್ರಹಿಸುವ ₹1,330 ಬೋಧನಾ ಶುಲ್ಕದಲ್ಲಿ ಅರ್ಧದಷ್ಟು ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಬೇಕು.

ಪಠ್ಯೇತರ ಚಟುವಟಿಕೆಗಳಿಂದ ದೂರ:

ರಾಷ್ಟ್ರೀಯ ಹಬ್ಬ ಸೇರಿದಂತೆ ಸಾರ್ವತ್ರಿಕ ರಜಾ ದಿನಗಳಲ್ಲೂ ಬಿಡುವು ಕೊಡದೇ ತರಬೇತಿ ನೀಡುವುದರಲ್ಲಿ ನಿರತವಾಗುವ ‘ಪ್ರತಿಷ್ಠಿತ’ ಕಾಲೇಜುಗಳ ಧೋರಣೆಯಿಂದಾಗಿ ವಿದ್ಯಾರ್ಥಿಗಳಿಗೆ ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಸೇರಿದಂತೆ ಇತರೆ ಪಠ್ಯೇತರ ಚಟುವಟಿಕೆಗಳ ಪರಿಚಯವೇ ಇಲ್ಲದಂತಾಗುತ್ತಿದ್ದಾರೆ.

ಈ ಕಾಲೇಜುಗಳಲ್ಲಿ ಮಕ್ಕಳನ್ನು ಓದಿಸದೇ ಇದ್ದರೆ ಅವರು ಪ್ರತಿಭಾನ್ವಿತರಿಗೆ ಪೈಪೋಟಿ ಒಡ್ಡಲು ಸಾಧ್ಯವೇ ಇಲ್ಲ ಎಂಬ ಮನೋಭಾವ ಪಾಲಕರಲ್ಲಿ ಗಾಢವಾಗಿ ಬೇರೂರಿದೆ. ಆದ್ದರಿಂದ ಅವರು ಗೊತ್ತಿದ್ದೂ ಈ ಕಾಲೇಜುಗಳು ಹೆಣೆಯುವ ಮಾಯಜಾಲದೊಳಗೆ ಬಂಧಿಯಾಗುತ್ತಿದ್ದಾರೆ. ಬಹುಪಾಲು ಪಾಲಕರು ಇಂತಹ ಕಾಲೇಜುಗಳ ಬಗ್ಗೆ ಪರೋಕ್ಷವಾಗಿ ಪ್ರಚಾರಕ್ಕೂ ಮುಂದಾಗುತ್ತಿದ್ದಾರೆ. 

ಹಣದ ಆಸೆಗೆ ಹುಟ್ಟಿಕೊಂಡಿರುವ ಕೋಚಿಂಗ್‌ ಕೇಂದ್ರಗಳು, ಇಂತಹ ವಿದ್ಯಾರ್ಥಿ ಇಂತಹ ಕಾಲೇಜಿನಲ್ಲಿ ಓದಬೇಕೆಂಬುದನ್ನು ನಿರ್ಧರಿಸುವ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದ್ದು, ಇದು ಶೈಕ್ಷಣಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ ಎಂದು ಶಿಕ್ಷಣ ತಜ್ಞ, ದಾವಣಗೆರೆಯ ಎಸ್‌.ಮುರುಗೇಂದ್ರಪ್ಪ ಹೇಳುತ್ತಾರೆ.////

ವಿದ್ಯಾರ್ಥಿಗಳ ನಡುವೆಯೇ ತಾರತಮ್ಯ:

ಉತ್ತಮ ಫಲಿತಾಂಶ ದೊರೆಯಬಹುದೆಂಬ ‘ಗ್ಯಾರಂಟಿ’ಯೊಂದಿಗೆ 10ನೇ‌ ತರಗತಿಯಲ್ಲಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳನ್ನೇ ಆಯ್ದುಕೊಳ್ಳುವ, ಶುಲ್ಕದಲ್ಲಿ ರಿಯಾಯಿತಿ ಕೊಡುವ ಸೋಗಿನೊಂದಿಗೆ ಪ್ರವೇಶ ಕಲ್ಪಿಸುವ ಖಾಸಗಿ ಕಾಲೇಜುಗಳಲ್ಲಿ ವರ್ಷವಿಡೀ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೂ ಪ್ರತಿನಿತ್ಯ ಪಾಠ–ಪ್ರವಚನ ನಡೆಯುತ್ತವೆ.

ಭಾನುವಾರವೂ ವಿದ್ಯಾರ್ಥಿಗಳನ್ನು ಬಿಡದೆ ಕಾಲೇಜುಗಳಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ವಾರಾಂತ್ಯದ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ. ಈ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯುವ ‘ಬುದ್ದಿವಂತ’ರನ್ನಷ್ಟೇ ಹೆಕ್ಕಿ, ಅವರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಮೂಲಕ ಮಿಕ್ಕವರನ್ನು ನಿರ್ಲಕ್ಷಿಸಲಾಗುತ್ತದೆ ಎನ್ನುವ ಆರೋಪವಿದೆ.

10ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಗಳಿಸಿರುವ ಅಂಕಗಳನ್ನು ಆಧರಿಸಿ ವಿಭಾಗಗಳನ್ನು ರಚಿಸಲಾಗುತ್ತದೆ. ಅಧಿಕ ಅಂಕ ಪಡೆದಿರುವವರ ಮೇಲೆ ‘ವಿಶೇಷ ನಿಗಾ’ ಇಡಲಾಗುತ್ತದೆ. ಅವರಿಗೆ ‘ನುರಿತ’ ಉಪನ್ಯಾಸಕರಿಂದ ಬೋಧನೆ ಮಾಡಿಸಲಾಗುತ್ತದೆ. ಅವರಿಗಿಂತಲೂ ಕೊಂಚ ಕಡಿಮೆ ಅಂಕ ಗಳಿಸಿದವರನ್ನು ಕಡೆಗಣಿಸಲಾಗುತ್ತದೆ. ಕೆಲವು ವಾರ, ತಿಂಗಳುಗಳ ನಂತರ ಮೇಲಿನ ವಿಭಾಗದಲ್ಲಿರುವ ಯಾರಾದರೂ ಕಡಿಮೆ ಅಂಕ ಪಡೆದಿದ್ದು ಕಂಡುಬಂದರೆ ಅವರನ್ನು ತಿದ್ದದೇ ಹಿಂಬಡ್ತಿ ನೀಡುವ ಪದ್ಧತಿಯೂ ಜಾರಿಯಲ್ಲಿದೆ. ಇಂಥ ಅನಿರೀಕ್ಷಿತ ಬೆಳವಣಿಗೆಗಳಿಂದ ಅನೇಕ ವಿದ್ಯಾರ್ಥಿಗಳು ಮಾನಸಿಕ ಕ್ಷೋಭೆಗೆ ಒಳಗಾದ ನಿದರ್ಶನಗಳೂ ಸಾಕಷ್ಟಿವೆ.

ಪ್ರೌಢಶಿಕ್ಷಣ ಹಂತದಿಂದಲೇ ಒತ್ತಡ:

ಪಿಯುಸಿ ನಂತರ ಮೆಡಿಕಲ್‌ ಅಥವಾ ಎಂಜಿನಿಯರಿಂಗ್‌ಗಳಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬ ಗೊಂದಲ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿದೆ. ಆದರೆ, ಈಗ ಕೆಲವು ಶಿಕ್ಷಣ ಸಂಸ್ಥೆಗಳು ಪ್ರೌಢಶಾಲೆಯ ಹಂತದಿಂದಲೇ ಜೆಇಇ, ನೀಟ್‌ ತರಬೇತಿಗೆ ಅನುಕೂಲವಾಗುವಂತೆ ಶಿಕ್ಷಣ ನೀಡಲು ಮುಂದಾಗಿವೆ. ದ್ವಿತೀಯ ಪಿಯುಸಿ ಸಂದರ್ಭ ನೀಡುವ ತರಬೇತಿ ಸಾಕಾಗದು ಎಂದೇ ಪ್ರೌಢ ಶಿಕ್ಷಣ ಹಂತದಿಂದಲೇ ತರಬೇತಿ ನೀಡಲು ಆರಂಭಿಸಿವೆ. ‘ಫೌಂಡೇಷನ್‌ ಕೋರ್ಸ್‌’ ಹೆಸರಿನಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಆಳವಾದ ತರಬೇತಿ ನೀಡುತ್ತಿವೆ. ಪಿಯುಸಿ ನಂತರದ ಪರೀಕ್ಷೆಗೆ 5 ವರ್ಷಗಳಿಂದಲೇ ತಯಾರಿ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದಾಗಿ ಪಾಲಕರಿಗೆ ಆರ್ಥಿಕವಾಗಿ ಹಾಗೂ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ನಿರಂತರ ಒತ್ತಡ ಉಂಟಾಗುವ ಅಪಾಯವಿದೆ.

‘ಫೌಂಡೇಷನ್‌ ಕೋರ್ಸ್‌ಗೆ ಹೋಗುವ ವಿದ್ಯಾರ್ಥಿಗಳು ಸಹಜವಾಗಿ ಗಣಿತ ಹಾಗೂ ವಿಜ್ಞಾನಕ್ಕೆ ಆದ್ಯತೆ ನೀಡುತ್ತಾರೆ. ಸಮಾಜ ವಿಜ್ಞಾನ, ಇತಿಹಾಸ, ಭೂಗೋಳ, ಭಾಷಾ ವಿಷಯಗಳ ಬಗ್ಗೆ ಅರಿವಿಲ್ಲದಂತಾಗುತ್ತಾರೆ. ಇದು ವೈವಿಧ್ಯಮಯ ಅಧ್ಯಯನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಶಿಕ್ಷಣ ತಜ್ಞ ರಾಜಕುಮಾರ ಪಾಟೀಲ ಆತಂಕ ವ್ಯಕ್ತಪಡಿಸುತ್ತಾರೆ.

‘8ನೇ ತರಗತಿ ಓದುವ ವಿದ್ಯಾರ್ಥಿಗಳದ್ದು ಕಿಶೋರಾವಸ್ಥೆ. ಈ ಹಂತದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳಾಗುತ್ತಿರುತ್ತವೆ. ಅವರು ತಮ್ಮನ್ನು ತಾವು ಇನ್ನೂ ಅರ್ಥೈಸಿಕೊಂಡಿರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳ ಅಬ್ಬರದ ಪ್ರಚಾರಕ್ಕೆ ಸಿಲುಕಿ ಮಕ್ಕಳನ್ನು ಎಂಜಿನಿಯರಿಂಗ್‌ ಅಥವಾ ಮೆಡಿಕಲ್‌ಗೆ ಸನ್ನದ್ಧಗೊಳಿಸುವುದು ಒತ್ತಡ ಹೇರಿದಂತೆಯೇ ಸರಿ. ಇದರ ಬಗ್ಗೆ ಪಾಲಕರು, ಶಿಕ್ಷಣ ರಂಗದವರು ಗಂಭೀರವಾಗಿ ಯೋಚಿಸಬೇಕಾಗಿದೆ’ ಎಂಬುದು ಅವರ ಸಲಹೆ.

‌ವ್ಯವಸ್ಥೆ ಬದಲಾಗಲಿ: 

‘ಸಿಇಟಿಯಿಂದ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಬಹುದಾದರೂ ಅದರಲ್ಲಿನ ಕೆಲವು ಲೋಪದಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗುತ್ತಿದ್ದಾರೆ. ಈ ವ್ಯವಸ್ಥೆಯೇ ಕೋಚಿಂಗ್ ಕೇಂದ್ರಗಳ ಆರಂಭಕ್ಕೆ ಕಾರಣವಾಯಿತು. ಹಪಾಹಪಿಗೆ ಬಿದ್ದು ಜಾಹೀರಾತು ಮೂಲಕ ಮಕ್ಕಳನ್ನು ಸೆಳೆಯುವ ಮನೋಭಾವ ಹೆಚ್ಚಿದೆಯೇ ವಿನಾ ಗುಣಮಟ್ಟದ ಶಿಕ್ಷಣ ನೀಡುವತ್ತ ಬಹುತೇಕ ಕಾಲೇಜುಗಳು ಗಮನಹರಿಸುತ್ತಿಲ್ಲ’ ಎಂದು ದಾವಣಗೆರೆಯ ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಬೇಸರಿಸಿದರು.

ಅವೈಜ್ಞಾನಿಕ ಸ್ಪರ್ಧೆ:

ಇಂಥ ಖಾಸಗಿ ಕಾಲೇಜು, ಕೋಚಿಂಗ್‌ ಸೆಂಟರ್‌ಗಳಲ್ಲಿನ ವಿದ್ಯಾರ್ಥಿಗಳು ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್‌ ಮೊದಲ ವಾರ ಪಿಯುಸಿ ಪ್ರಥಮ ವರ್ಷದ ಪರೀಕ್ಷೆ ಬರೆಯುತ್ತಿದ್ದಂತೆಯೇ ಬೇಸಿಗೆ ರಜೆಯನ್ನೇ ನೀಡುವುದಿಲ್ಲ. ಬದಲಿಗೆ, ಒಂದು ವಾರದ ಮಟ್ಟಿಗೆ ರಜೆ ನೀಡಿ ಮತ್ತೆ ದ್ವಿತೀಯ ವರ್ಷದ ತರಗತಿ ಆರಂಭಿಸಲಾಗಿದೆ. ಬೋರ್ಡ್‌ ಪರೀಕ್ಷೆಗೆ ಸಂಬಂಧಿಸಿದ ಬಹುತೇಕ ಪಠ್ಯದ ಬೋಧನೆ ಜೂನ್‌ ವೇಳೆಗೆ ಪೂರ್ಣಗೊಳ್ಳುತ್ತದೆ. ನಂತರದ್ದು ಏನಿದ್ದರೂ ನೀಟ್‌, ಸಿಇಟಿ ಮತ್ತು ಜೆಇಇಯದ್ದೇ ಓದು.

ಇನ್ನೊಂದೆಡೆ ಗ್ರಾಮೀಣ, ಪಟ್ಟಣ ಪ್ರದೇಶದಲ್ಲಿನ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಎರಡು ತಿಂಗಳು ಬೇಸಿಗೆ ರಜೆ ಪೂರೈಸಿ, ಇಡೀ ವರ್ಷ ಪಠ್ಯ ಬೋಧನೆಯಲ್ಲಿ ತೊಡಗಿ ಪರೀಕ್ಷೆಗೆ ಸಿದ್ಧವಾಗುತ್ತಾರೆ. ನೀಟ್‌, ಸಿಇಟಿ ಮತ್ತು ಜೆಇಇ ಪೂರ್ವ ತಯಾರಿ ಇವರಿಗೆ ಇಲ್ಲವೇ ಇಲ್ಲ. ಸ್ಪರ್ಧೆಯ ವಿಷಯದಲ್ಲಿ ಇವರು ಕೋಚಿಂಗ್‌ ಸೆಂಟರ್‌ಗಳ ವಿದ್ಯಾರ್ಥಿಗಳ ಸಮಾನವಾಗಿ ನಿಲ್ಲುವುದು ದೂರದ ಮಾತು.

‘ಶೈಕ್ಷಣಿಕ ಕ್ಷೇತ್ರದಲ್ಲಿ ಸ್ಪರ್ಧೆ ಇರುವುದು ನಿಜ. ಹಾಗಂತ ನೀಟ್‌, ಜೆಇಇ, ಸಿಇಟಿಗಳೇ ಜೀವನವಲ್ಲ. ಭವಿಷ್ಯ ರೂಪಿಸಿಕೊಳ್ಳಲು ಇವುಗಳನ್ನು ಹೊರತುಪಡಿಸಿ ಇನ್ನೂ ಅನೇಕ ಕ್ಷೇತ್ರಗಳಿವೆ. ಅತಿಯಾದ ಶುಲ್ಕ ಪಡೆಯುವ ಆಸೆಯಿಂದ ಇತರ ವೃತ್ತಿಪರ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿಲ್ಲ. ತಿಳಿಸಿದಲ್ಲಿ ವಿದ್ಯಾರ್ಥಿಗಳೂ ಆ ಕ್ಷೇತ್ರಗಳತ್ತ ಗಮನಹರಿಸಬಹುದು’ ಎಂದು ದಾವಣಗೆರೆಯ ಸೈನ್ಸ್‌ ಅಕಾಡೆಮಿ ಪಿಯು ಕಾಲೇಜಿನ ಕಾರ್ಯದರ್ಶಿ ವಿನಯ್‌ ವೈ.ವಿ ಹೇಳುತ್ತಾರೆ.

‘ಅಂಕ ಗಳಿಕೆಯೇ ಜೀವನ ಎಂದು ಬಿಂಬಿಸಿದ ಕಾರಣ ಮಕ್ಕಳಿಗೆ ಸೋಲು ಒಪ್ಪಿಕೊಳ್ಳುವುದು ಕಷ್ಟವಾಗುತ್ತಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು. ಇಲ್ಲಿ ಪಾಲಕರ ತಪ್ಪೂ ಇದೆ’ ಎಂದು ಸ್ಪರ್ಧಾತ್ಮಕ ಶಿಕ್ಷಣದ ಲೋಪವನ್ನು ಟೀಕಿಸುವ ಅವರು, ಅವರು ಎಂಜಿನಿಯರಿಂಗ್‌, ಮೆಡಿಕಲ್ ಹೊರತುಪಡಿಸಿ ಉತ್ತಮ ಭವಿಷ್ಯ ರೂಪಿಸುವ ಇತರ ಕೋರ್ಸ್‌ನತ್ತಲೂ ಗಮನ ಹರಿಸಬೇಕು. ಕಾನೂನು ಪದವಿ, ಕೃಷಿ, ತೋಟಗಾರಿಕೆ, ಮೂಲ ವಿಜ್ಞಾನ ಕಲಿಕೆ, ಬೋಧನಾ ಕ್ಷೇತ್ರ, ರಕ್ಷಣಾ, ಸಂಶೋಧನಾ ಕ್ಷೇತ್ರಗಳಲ್ಲಿನ ವಿಪುಲ ಅವಕಾಶಗಳತ್ತಲೂ ಆಲೋಚಿಸಬೇಕು’ ಎಂಬ ಸಲಹೆ ನೀಡುತ್ತಾರೆ.

ಅವೈಜ್ಞಾನಿಕ ಸ್ಪರ್ಧೆ, ಸುಲಿಗೆ, ಓದನ್ನು ಹೊರತುಪಡಿಸಿದ ಜಗತ್ತಿಗೆ ವಿದ್ಯಾರ್ಥಿಗಳ ಪ್ರವೇಶ ನಿರಾಕರಣೆಯಂಥ ಬೆಳವಣಿಗೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ನೀತಿ ರೂಪಿಸುವುದು ಈಗಿನ ತುರ್ತು ಅಗತ್ಯವಾಗಿದೆ.

ಪೂರಕ ಮಾಹಿತಿ: ಚಂದ್ರಹಾಸ ಹಿರೇಮಳಲಿ, ವಿಕ್ರಂ ಕಾಂತಿಕೆರೆ, ಮಲ್ಲಿಕಾರ್ಜುನ ನಾಲವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT