ಶನಿವಾರ, ಸೆಪ್ಟೆಂಬರ್ 25, 2021
28 °C
ಚಿಂತಾಮಣಿಯ ತಗ್ಗುಪ್ರದೇಶದ ಮನೆಗೆ ನುಗ್ಗುವ ನೀರು ತಡೆಗೆ ಶಾಶ್ವತ ಕ್ರಮ ರೂಪಿಸದ ನಗರಸಭೆ

ಚಿಂತಾಮಣಿ: ಮಳೆ ಬಂದರೆ ನಿದ್ದೆಯಿಲ್ಲ!

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಮಳೆ ಸುರಿದರೆ ನಗರದ ಹಲವು ಬಡಾವಣೆಗಳ ತಗ್ಗು ಪ್ರದೇಶಗಳ ಜನರಲ್ಲಿ ಭೀತಿ ಶುರು. ವೆಂಕಟಗಿರಿಕೋಟೆ, ಶಾಂತಿನಗರ, ಆಶ್ರಯ ಬಡಾವಣೆ, ಟಿಪ್ಪುನಗರ, ಗಾಂಧಿನಗರ, ಕಿಶೋರ ವಿದ್ಯಾಭವನದ ಮುಂಭಾಗ ಮತ್ತಿತರ ಪ್ರದೇಶಗಳಲ್ಲಿ ಜನರು ರಾತ್ರಿ ಪೂರ್ಣ ನಿದ್ದೆಗೆಡುತ್ತಾರೆ.

ಮನೆಗಳಿಗೆ ನೀರು ನುಗ್ಗುತ್ತದೆ. ಚರಂಡಿ, ರಸ್ತೆಗಳು ಮಳೆ ನೀರಿನಿಂದ ತುಂಬಿ ಸಂಚರಿಸಲು ತೊಂದರೆ ಆಗುತ್ತದೆ. ಸಮಸ್ಯೆ ಪರಿಹಾರದ ವಿಚಾರವಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆಯ ಮೇಲೆ ಭರವಸೆಗಳನ್ನು ನೀಡುತ್ತಿದ್ದರೂ ಸಮಸ್ಯೆಗಳ ಪರಿಹಾರ ಮಾತ್ರ ಆಗುತ್ತಿಲ್ಲ. ಈ ಪ್ರದೇಶಗಳ ನಿವಾಸಿಗರು ಭಯದಿಂದಲೇ ದಿನ ದೂಡುವರು. ಮಳೆಗಾಲದಲ್ಲಿ ಆತಂಕದಿಂದಲೇ ರಾತ್ರಿಗಳನ್ನು ಕಳೆಯುವರು.

ವೆಂಕಟಗಿರಿಕೋಟೆಯ ಪ್ರೀತಿ ಪಬ್ಲಿಕ್ ಶಾಲೆಯ ಬೆಟ್ಟದ ತಪ್ಪಲಿನಿಂದ ನೀರು ಹರಿದುಬರುತ್ತದೆ. ಅಲ್ಲಿನ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗುತ್ತದೆ. ನಿವಾಸಿಗಳಿಗೆ ಸಮರ್ಪಕ ರಸ್ತೆಗಳು ಇಲ್ಲ. 2019ರ ಏ.27 ರಂದು ಅಂದಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದ್ದರು. ಶೀಘ್ರವಾಗಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅವರು ಭೇಟಿ ನೀಡಿ ಮೂರು ವರ್ಷಗಳಾದರೂ ಇಂದಿಗೂ ಭರವಸೆ ಈಡೇರಲಿಲ್ಲ ಎಂದು 50 ವರ್ಷಗಳಿಂದ ಅಲ್ಲಿ ವಾಸವಾಗಿರುವ ಸೈಯದ್ ರಜಾಕ್ ನುಡಿಯುವರು.

ಈ ಭಾಗ ಮೊದಲು ವಾರ್ಡ್ ನಂ 2ರ ವ್ಯಾಪ್ತಿಯಲ್ಲಿ ಇತ್ತು. ಈಗ 31ನೇ ವಾರ್ಡ್ ವ್ಯಾಪ್ತಿಗೆ ಬರುತ್ತದೆ. ಮಳೆ ನೀರಿನ ಜತೆಗೆ ಒಳಚರಂಡಿ ನೀರು ಸಹ ಸೇರಿ ಮನೆಗಳಿಗೆ ನುಗ್ಗುತ್ತದೆ. ಮನೆಗಳಲ್ಲಿ ದುರ್ವಾಸನೆ ಬಡಿಯುತ್ತದೆ. ಸೂಕ್ತವಾದ ಚರಂಡಿಗಳು ಇಲ್ಲದ ಕಾರಣ ನೀರು ಮುಂದಕ್ಕೆ ಹರಿಯುವುದಿಲ್ಲ. ಇಲ್ಲಿ ಕೆಲ ಕಾಮಗಾರಿಗೆ ಮಂಜೂರು ಆಗಿದ್ದರೂ ಕೆಲವರ ಚಿತಾವಣೆಯಿಂದ ಬೇರೆ ಕಡೆ ವರ್ಗಾಯಿಸಿಕೊಂಡರು ಎಂದು ಇಲ್ಲಿನ ಜನರು ದೂರುವರು.

ವೆಂಕಟಗಿರಿಕೋಟೆಯ ಬಾಬು ಮನೆ ಸಮೀಪದಲ್ಲಿ ಶಿಥಿಲವಾಗಿದ್ದ ಒಳಚರಂಡಿ ಮ್ಯಾನ್‌ಹೋಲ್ ಮುಚ್ಚಳ ತೆರೆದು 2 ತಿಂಗಳಾಗಿದೆ. ಅಧಿಕಾರಿಗಳು ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಅದರಲ್ಲಿ ಮತ್ತಷ್ಟು ಕಸಕಡ್ಡಿ ತುಂಬಿ ಮತ್ತಷ್ಟು ಮ್ಯಾನ್‌ಹೋಲ್ ಗಳಿಗೆ ತೊಂದರೆ ಆಗುತ್ತದೆ. ಪೌರಾಯುಕ್ತರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಶಾಸಕರು, ಪೌರಾಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಜನರು ಅಸಮಧಾನ ವ್ಯಕ್ತಪಡಿಸುತ್ತಾರೆ.

27ನೇ ವಾರ್ಡ್ ಶಾಂತಿನಗರದ ಅಕ್ಕಲಪ್ಪ-ನಾರಾಯಣಸ್ವಾಮಿ ಮನೆಗಳ ಸಮೀಪದ ತಗ್ಗು ಪ್ರದೇಶವೂ ಮಳೆ ಬಂದರೆ ಜಾಲಾವೃತವಾಗುತ್ತದೆ. ಮೇಲ್ಭಾಗದಿಂದ ಹರಿದು ಬರುವ ನೀರು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳಿಗೆ ನುಗ್ಗುತ್ತದೆ. ಮಳೆಗಾಲ ಬಂದರೆ ಜನರು ಮನೆಗಳಿಂದ ನೀರು ಹೊರದಬ್ಬುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಒಳಚರಂಡಿ ನೀರು ಸಹ ಸೇರಿಕೊಳ್ಳುತ್ತದೆ. ಕುಡಿಯುವ ನೀರಿನ ಸಂಪರ್ಕದ ಪೈಪ್‌ಗಳಲ್ಲು ಗಲೀಜು ನೀರು ಮಿಶ್ರಣವಾಗುತ್ತದೆ ಎನ್ನುತ್ತಾರೆ ಶಾಂತಿನಗರದ ನಿವಾಸಿ ಕೆ.ಎಸ್.ನೂರುಲ್ಲಾ.

ಸ್ಥಳೀಯರು ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಧಿಕಾರಿಗಳು ಬಂದು ತಾತ್ಕಾಲಿಕ ವ್ಯವಸ್ಥೆ ಮಾಡುತ್ತಾರೆ. ಕೆಲವು ದಿನಗಳ ನಂತರ ಮತ್ತೆ ಮಾಮೂಲಿ ಆಗುತ್ತದೆ. ಪ್ರತಿವರ್ಷ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವುದು, ಜನರು ದೂರು ನೀಡುವುದು, ನಗರಸಭೆ ಸಿಬ್ಬಂದಿ ತಕ್ಷಣಕ್ಕೆ ನೀರು ಹರಿಯುವಂತೆ ಮಾಡುವುದು ಮಾಮೂಲಿ ಆಗಿದೆ. ನೀರು ಹರಿಸುವ ಪ್ರದೇಶವನ್ನು ಸಮೀಕ್ಷೆ ನಡೆಸಿ ತಗ್ಗಿನ ಕಡೆಗೆ ಚರಂಡಿಗಳನ್ನು ಮಾಡುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸ್ಥಳಿಯರು ಮನವಿ ಮಾಡುತ್ತಾರೆ.

ನಗರದ ಚೇಳೂರು ರಸ್ತೆ ಹಾಗೂ ಮುಂತಕದಿರೇನಹಳ್ಳಿ ರಸ್ತೆಯಲ್ಲಿರುವ ರೈಲ್ವೆ ಕೆಳಸೇತುವೆಗಳ ನಿರ್ಮಾಣ ಸಂಪೂರ್ಣ ಅವೈಜ್ಞಾನಿಕವಾಗಿದೆ. ನೀರು ಹರಿಯುವ ಪ್ರದೇಶಗಳ ಸಮೀಕ್ಷೆ ನಡೆಸಿ ತಗ್ಗಿನ ಕಡೆಗೆ ಚರಂಡಿಗಳನ್ನು ಮಾಡುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕು. ಈ ಕೆಳಸೇತುವೆ ಕಾಮಗಾರಿ ಕಳಪೆ ಆಗಿದೆ. ಮಳೆ ಬಂದರೆ ಕೆಳಸೇತುವೆಗಳು ಕೆರೆಗಳಾಗುತ್ತವೆ. ಜನರು ಮತ್ತು ವಾಹನಗಳ ಸಂಚಾರ ಸ್ಥಗಿತಗೊಳ್ಳುತ್ತದೆ. ಕೆಳಸೇತುವೆಗಳು ತೀರಾ ತಗ್ಗಾಗಿದ್ದು ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲ. ಕೆಳಸೇತುವೆಗಳಿಂದ ಜನರು ಪರದಾಡುವಂತಾಗುತ್ತದೆ.

ಆಶ್ರಯ ಬಡಾವಣೆಯಲ್ಲೂ ಮಳೆಗಾಲದಲ್ಲಿ ನಿವಾಸಿಗಳು ಸಂಕಷ್ಟಗಳಿಗೆ ಗುರಿ ಆಗುತ್ತಿದ್ದಾರೆ. ಬಡಾವಣೆಯ ಬಂಡೆಯ ಕೆಳಭಾಗದಲ್ಲಿರುವ ಮನೆಗಳು ನೀರಿನಿಂದ ಜಲಾವೃತ ಆಗುತ್ತವೆ. ರಸ್ತೆಗಳು ಹದಗೆಟ್ಟಿವೆ. ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ನೀಡಿ ಪ್ರತಿಭಟನೆ ಮಾಡಿದ್ದರೂ ಭರವಸೆಗಳಲ್ಲಿಯೇ ಕಾಲ ತಳ್ಳುತ್ತಿದ್ದೇವೆ. ಬಡವರೇ ವಾಸಮಾಡುವ ಆಶ್ರಯ ಬಡಾವಣೆಯ ನಾಗರಿಕರ ಕುಂದುಕೊರತೆಗಳನ್ನು ಕೇಳುವವರೇ ಇಲ್ಲ ಎನ್ನುತ್ತಾರೆ ಯುವ ಮುಖಂಡ ಶ್ರೀನಿವಾಸ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.