ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಾಗಿದ್ದರೆ ಲೋಕಸಭೆ ಚುನಾವಣೆಗೆ ಟಿಕೆಟ್ ಏಕೆ ಕೇಳುತ್ತಿದ್ದೆವು: ಕೆ.ಸುಧಾಕರ್

Published 5 ಫೆಬ್ರುವರಿ 2024, 14:11 IST
Last Updated 5 ಫೆಬ್ರುವರಿ 2024, 14:11 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಮ್ಮ ಶ್ರಮ, ತ್ಯಾಗವಿದೆ. ಶಾಸಕರಾಗಿದ್ದರೆ ನಾವು ಏಕೆ ಲೋಕಸಭೆ ಚುನಾವಣೆಯ ಟಿಕೆಟ್ ಕೇಳುತ್ತಿದ್ದೆವು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. 

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಗೆ ಗಟ್ಟಿಯಾದ ನೆಲೆ ಇಲ್ಲದ ಕ್ಷೇತ್ರದಿಂದ ನಾವು ಬಂದವರು. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪಕ್ಷವನ್ನು ಸಂಘಟಿಸಿದ್ದೇನೆ. ಅಭ್ಯರ್ಥಿಗಳೇ ಇಲ್ಲದ ಕಡೆ ಮಾಜಿ ಶಾಸಕರನ್ನು ಪಕ್ಷಕ್ಕೆ ಕರೆ ತಂದಿದ್ದೇನೆ. ನಮ್ಮಂತಹವರಿಗೆ ಅನ್ಯಾಯವಾದರೆ ಯಾರು ಸಹ ಪಕ್ಷಕ್ಕೆ ಬರಲು ಹಿಂದು ಮುಂದೆ ನೋಡುವರು ಎಂದು ಹೇಳಿದರು.

ಯಡಿಯೂರಪ್ಪ ಅವರು ಹೇಳಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆವು. ಅವರನ್ನು ಕೇಳದೆ ಮತ್ತೆ ಯಾರನ್ನು ನಾವು ಕೇಳಬೇಕು. ನನಗೆ ‍ಪೂರಕ ಅವಕಾಶವಿದೆ. ನಾನು ಟಿಕೆಟ್ ಆಕಾಂಕ್ಷಿ ಎಂದಿದ್ದೇನೆ. ಯಲಹಂಕ ಶಾಸಕ ವಿಶ್ವನಾಥ್ ಅವರ ಪುತ್ರನಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುವೆ. ಪಕ್ಷವು ನೀಡುವ ಜವಾಬ್ದಾರಿಯನ್ನು ನಿರ್ವಹಿಸುವೆ ಎಂದರು.‌

ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಡವರ ಕೆಲಸಗಳನ್ನು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಕೆಲಸಗಳನ್ನು ಮಾಡಿದ್ದೇನೆ. ಸಚಿವನಾಗಿದ್ದ ನಾಲ್ಕು ವರ್ಷಗಳ ಕಾಲ ಪಕ್ಷವನ್ನು ಬಲಗೊಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ವೀರಪ್ಪ ಮೊಯಿಲಿ ಅವರಿಗೆ ಮೂರ್ನಾಲ್ಕು ಬಾರಿ ಸೋತ ಅನುಭವವಿದೆ. ಅವರು ಮಂಗಳೂರಿನಲ್ಲಿ ಮೂರ್ನಾಲ್ಕು ಬಾರಿ ಸೋತರು. ಊರು ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಬಂದು ಗೆಲುವು ಸಾಧಿಸಿದರು. ನಾನು ಸೋತರೂ, ಸತ್ತರೂ, ಜಯಿಸಿದರೂ ಚಿಕ್ಕಬಳ್ಳಾಪುರದಲ್ಲಿಯೇ ಇರುತ್ತೇನೆ. ಪಲಾಯನವಾದಿಯಲ್ಲ ಎಂದರು.

ಸಚಿವ ಡಾ.ಎಂ.ಸಿ.ಸುಧಾಕರ್ ತಮ್ಮ ಕುಟುಂಬದ್ದು ಮೂರು ತಲೆಮಾರಿನ ರಾಜಕಾರಣ ಎನ್ನುತ್ತಾರೆ. ಅವರ ಸಂಬಂಧಿಕರು ಸಚಿವರಾಗಿದ್ದರು. ಆದರೂ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಏಕೆ ವೈದ್ಯಕೀಯ ಶಿಕ್ಷಣ ಕಾಲೇಜು ತರಲಿಲ್ಲ ಎಂದರು.

ವೈದ್ಯಕೀಯ ಶಿಕ್ಷಣ ಕಾಲೇಜಿನ ಕಾಮಗಾರಿಗಳು ಕಣ್ಣ ಮುಂದಿದೆ ಇದೆ. ನೂರು ವರ್ಷವಾದರೂ ಇರುತ್ತದೆ. ಚುನಾವಣೆ ಎದುರಾದ ಕಾರಣ ವೆಚ್ಚ ಹೆಚ್ಚಳವು ಸಚಿವ ಸಂಪುಟದಲ್ಲಿ ಅನುಮೋದನೆ ಆಗಲಿಲ್ಲ. ಕಟ್ಟಡದಲ್ಲಿ ಹೆಚ್ಚುವರಿ ಕೆಲಸಗಳು ಆಗಿವೆ. ಈ ಬಗ್ಗೆ ಸಿಬಿಐ ತನಿಖೆಗೇ ಕೊಡಲಿ ಎಂದರು.

ರಾಜ್ಯ ಸರ್ಕಾರ ಬಡವರನ್ನು ಗೋಳು ಹೊಯ್ದುಕೊಳ್ಳುತ್ತಿದೆ. ಮತಕ್ಕಾಗಿ ದಲಿತರು, ಅಲ್ಪಸಂಖ್ಯಾತರನ್ನು ಓಲೈಸುವರು. ನಾನು ಬಡವರು ಸ್ವಾಭಿಮಾನದಿಂದ ಬದುಕಬೇಕು ಎನ್ನುವ ಹಿನ್ನೆಲೆಯಲ್ಲಿ ರಾಜಕಾರಣಕ್ಕೆ ಬಂದವನು. ಆ ಕಾರಣಕ್ಕೆ 22 ಸಾವಿರ ನಿವೇಶನಗಳನ್ನು ರೂಪಿಸಲು ಮುಂದಾದೆ ಎಂದರು. 

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 10 ವರ್ಷಗಳಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದೆ, ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ 10 ವರ್ಷಗಳಲ್ಲಿ ಎಷ್ಟು ಅನುದಾನ ನೀಡಿದೆ ಎನ್ನುವ ಶ್ವೇತ ಪತ್ರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು. ಅನುದಾನದ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಯೋಜನೆಗಳು ಸಹ ರಾಜ್ಯದಲ್ಲಿ ಕಾರ್ಯಗತವಾಗಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT