ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸಾಮೂಹಿಕ ವಿವಾಹಕ್ಕೆ ಒಂದೇ ದೇಗುಲ ಸಾಕೆ?

ವಿಧುರಾಶ್ವತ್ಥ ಅಶ್ವತ್ಥನಾರಾಯಣ ಸ್ವಾಮಿ ದೇಗುಲದಲ್ಲಿ ಸಪ್ತಪದಿ ಕಾರ್ಯಕ್ರಮಕ್ಕೆ ಅವಕಾಶ
Last Updated 13 ಆಗಸ್ಟ್ 2021, 3:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಒಂದೇ ದೇಗುಲ ಸಾಕೆ?

ಹೀಗೊಂದು ಚರ್ಚೆ ಜಿಲ್ಲೆಯ ಗಡಿ ಭಾಗದ ಜನರಲ್ಲಿ ಮತ್ತು ಬಡ ಕುಟುಂಬಗಳಲ್ಲಿ ನಡೆದಿದೆ. ಕನಿಷ್ಠ ತಾಲ್ಲೂಕಿಗೆ ಒಂದು ದೇಗುಲವಾದರೂ ಈ ಯೋಜನೆಗೆ ಒಳಪಟ್ಟಿದ್ದರೆ ಬಡವರ ಕಲ್ಯಾಣಕ್ಕೆ ಅನುಕೂಲವಾಗುತ್ತಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

2019ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ನೇತೃತ್ವದ ಸರ್ಕಾರ ಸಪ್ತಪದಿ ಸಾಮೂಹಿಕ ವಿವಾಹ ಜಾರಿಗೊಳಿಸಿತು. ಮುಜರಾಯಿ ಇಲಾಖೆಗೆ ಒಳಪಟ್ಟ ರಾಜ್ಯದ 100 ‘ಎ’ ದರ್ಜೆಯ ದೇವಸ್ಥಾನಗಳಲ್ಲಿ ಸರ್ಕಾರದಿಂದಲೇ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವುದು ಈ ಯೋಜನೆಯ ಉದ್ದೇಶ.

ವಿವಾಹಕ್ಕೆ ದುಂದುವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ‘ಸಪ್ತಪದಿ’ ಹೆಸರಿನಲ್ಲಿ ಸಾಮೂಹಿಕ ವಿವಾಹ ಯೋಜನೆ ರೂಪಿಸಿತ್ತು.ಭಕ್ತರು ಭಕ್ತಿಯಿಂದ ದೇಗುಲಕ್ಕೆ ನೀಡಿದ ಹಣವನ್ನು ಭಕ್ತರ ಕಲ್ಯಾಣಕ್ಕಾಗಿಯೇ ಸದ್ಬಳಕೆ ಮಾಡಬೇಕು ಎಂಬುದು ಸರ್ಕಾರದ ವಿಚಾರವಾಗಿತ್ತು.

ಈ ಯೋಜನೆಯಡಿ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿಧುರಾಶ್ವತ್ಥದ ಅಶ್ವತ್ಥನಾರಾಯಣ ಸ್ವಾಮಿ ದೇಗುಲವನ್ನು ಸರ್ಕಾರ ಆಯ್ಕೆ ಮಾಡಿದೆ. ಜಿಲ್ಲೆಯ ಆರು ತಾಲ್ಲೂಕುಗಳಿಗೆ ಆಯ್ಕೆ ಆಗಿದ್ದು ಮಾತ್ರ ಇದೊಂದೇ ದೇಗುಲ! ಜಿಲ್ಲೆಯ ಯಾವುದೇ ಭಾಗದ ವಧು, ವರ ಸಪ್ತಪದಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡರೆ ಆ ಜೋಡಿ ನಿಗದಿತ ದಿನ ಈ ದೇಗುಲಕ್ಕೆ ಬಂದು ವಿವಾಹ ಆಗಬೇಕು.

ಬಾಗೇಪಲ್ಲಿ, ಚೇಳೂರು, ಚಿಂತಾಮಣಿ ತಾಲ್ಲೂಕಿನ ಗಡಿ ಭಾಗದಿಂದ ವಿಧುರಾಶ್ವತ್ಥಕ್ಕೆ ಬರಲು ಕನಿಷ್ಠ 80 ಕಿ.ಮೀ ಆದರೂ ಆಗುತ್ತದೆ. ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳುವುದೇ ಬಡವರು. ಇಂತಹವರು ಬಂಧು, ಬಳಗವನ್ನು ಅಷ್ಟು ದೂರದಿಂದ ಕರೆ ತಂದು ವಿವಾಹ ನಡೆಸುವುದು ಸಹ ಕಷ್ಟವಾಗುತ್ತದೆ ಎಂದು ಸಾಮೂಹಿಕ ಮತ್ತು ಸರಳ ವಿವಾಹಗಳನ್ನು ಬೆಂಬಲಿಸುವವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ‘ದೂರ’ ಎನ್ನುವ ಕಾರಣಕ್ಕೆ ಪೋಷಕರು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಸಹ ಕಡಿಮೆ ಇರುತ್ತದೆ.

ತೀರಾ ಕಡುಬಡವರು, ಬಡವರಿಗೆ ಅನುಕೂಲವಾಗಲಿ, ‘ಮದುವೆ ಕಾರ್ಯ’ ಹೊರೆ ಆಗಬಾರದು ಎಂಬ ಕಾರಣಕ್ಕೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಆದರೆ, ಜಿಲ್ಲೆಯಲ್ಲಿ ನಿಗದಿಗೊಳಿಸಿರುವ ದೇಗುಲಗಳ ಸಂಖ್ಯೆ ತೀರಾ ಕಡಿಮೆ ಆಯಿತು. ನಂದಿ, ಗಡದಿಂ, ಕೈವಾರ ಹೀಗೆ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಸರ್ಕಾರದ ನಿರ್ಣಯಿಸಿದ ಸೌಲಭ್ಯ ಹೊಂದಿರುವ ದೇಗುಲಗಳು ಇವೆ. ಇಂತಹ ಕಡೆಗಳಲ್ಲಿ ಸಪ್ತಪದಿ ಯೋಜನೆ ಜಾರಿಗೊಳಿಸಬಹುದಿತ್ತು ಎನ್ನುವ ಅಭಿಪ್ರಾಯ ಮುಜರಾಯಿ ಇಲಾಖೆ ಸಿಬ್ಬಂದಿಯಿಂದಲೂ ವ್ಯಕ್ತವಾಗುತ್ತಿದೆ.

ಉತ್ತಮ ಆದಾಯವಿರುವ, ಕಲ್ಯಾಣ ಮಂಟಪ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಅನ್ನ ದಾಸೋಹ ವ್ಯವಸ್ಥೆ ಇರುವ ದೇವಾಲಯಗಳಲ್ಲಿ ವಿವಾಹಗಳನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ನಡೆಸಲು ಸರ್ಕಾರ ನಿರ್ಣಯಿಸಿದೆ.

ಯೋಜನೆಯ ಸೌಲಭ್ಯ: ‘ಸಪ್ತಪದಿ ಸಾಮೂಹಿಕ ವಿವಾಹ’ದಡಿ ವಧುವಿಗೆ ₹ 10 ಸಾವಿರ, ವರನಿಗೆ ₹ 5 ಸಾವಿರ ನಗದು, ವಧುವಿಗೆ ₹ 40 ಸಾವಿರ ಮೌಲ್ಯದ ಚಿನ್ನದ ತಾಳಿ ನೀಡಲಾಗುತ್ತದೆ. ಕಂದಾಯ ಇಲಾಖೆಯಿಂದ ₹ 10 ಸಾವಿರ ನಿಶ್ಚಿತ ಠೇವಣಿ ಸೌಲಭ್ಯ ಇದೆ. ಪರಿಶಿಷ್ಟ ಜಾತಿ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ₹ 50 ಸಾವಿರ ನೀಡಲಾಗುತ್ತದೆ. ವಧು ಮತ್ತು ವರನಿಗೆ ಪ್ರೋತ್ಸಾಹ ಧನ, ತಾಳಿ, ಚಿನ್ನದ ಗುಂಡು ಹೀಗೆ ಒಂದು ಜೋಡಿಗೆ ₹ 55,000ವನ್ನು ದೇವಾಲಯದ ನಿಧಿಯಿಂದ ಭರಿಸಲಾಗುತ್ತದೆ.

ವಧು–ವರರ ಎರಡೂ ಕಡೆಯ ತಂದೆ, ತಾಯಿ ವಿವಾಹಕ್ಕೆ ಒಪ್ಪಿ ವಿವಾಹದ ದಿನ ಉಪಸ್ಥಿತರಿರಬೇಕು. ಎರಡೂ ಕಡೆಯಿಂದ ಸಾಕ್ಷಿಗಳು ಇದ್ದಲ್ಲಿ ಮಾತ್ರ ವಿವಾಹ ನಡೆಸಲಾಗುತ್ತದೆ. ತಂದೆ, ತಾಯಿ ನಿಧನರಾಗಿದ್ದರೆ ಅವರ ವಾರಸುದಾರರು ಹಾಜರಿರಬೇಕು. ವಧು, ವರರ ಮೊದಲನೇ ವಿವಾಹಕ್ಕೆ ಮಾತ್ರ ಅವಕಾಶ ಇದೆ, ಹೀಗೆ ಸರ್ಕಾರವು ವಿವಿಧ ಷರತ್ತುಗಳನ್ನು ಈ ಯೋಜನೆಯಡಿವಿಧಿಸಿದೆ.

ನೋಂದಾಯಿತರ ವಿವರವನ್ನು ದೇವಾಲಯದ ಕಚೇರಿಯಲ್ಲಿ ವಿವಾಹಕ್ಕೂ 25 ದಿನಗಳ ಮುಂಚಿತವಾಗಿ ಪ್ರಕಟಿಸಲಾಗುತ್ತದೆ. ಈ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸುವವರು ವಿವಾಹ ನಡೆಯುವ ದಿನಾಂಕಕ್ಕಿಂತ 20 ದಿನ ಮುಂಚಿತವಾಗಿ ದೇವಾಲಯದ ಕಚೇರಿಗೆ ಸಲ್ಲಿಸಬೇಕು. ಆ ನಂತರದ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT