ಗುರುವಾರ , ಆಗಸ್ಟ್ 11, 2022
26 °C
ಚುನಾವಣಾ ನೀತಿ ಸಂಹಿತೆ ಮತ್ತು ಕೋವಿಡ್-19 ಕಾರಣಕ್ಕೆ ಸರಳವಾಗಿ ಜಯಂತಿ ಕಾರ್ಯಕ್ರಮ

ಸಮ ಸಮಾಜಕ್ಕೆ ಶ್ರಮಿಸಿದ ಕನಕದಾಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಜಾತೀಯತೆಯನ್ನು ಬಲವಾಗಿ ವಿರೋಧಿಸುತ್ತಿದ್ದ ಕನಕದಾಸರು ಸಮ ಸಮಾಜ ನಿರ್ಮಾಣಕ್ಕಾಗಿ ದುಡಿದವರು. ಹೀಗಾಗಿಯೇ ಅವರು ಇಂದಿಗೂ ನಮ್ಮ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ’ ಎಂದು ಚಿಂತಾಮಣಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎನ್.ರಘು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುರುಬರ ಸಹಕಾರ ಸಂಘದ ಸಹಯೋಗದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕರ್ನಾಟಕದ ಸಾಮಾಜಿಕ ಬದಲಾವಣೆಯಲ್ಲಿ ವಚನ ಸಾಹಿತ್ಯ ಮತ್ತು ಕೀರ್ತನಾ ಸಾಹಿತ್ಯದ ಕೊಡುಗೆ ಗಮನಾರ್ಹವಾಗಿದೆ. ನಿಜ ಭಕ್ತಿಯ ಮೂಲಕ ಕೀರ್ತನೆಗಳೊಂದಿಗೆ ಸಾಮಾಜಿಕ ಸುಧಾರಣೆ ಮಾಡಲು ಹೊರಟ ಕನಕದಾಸರು ಮೊದಲು ತಿಮ್ಮಪ್ಪನಾಯಕ ಎಂಬ ಹೆಸರಿನಲ್ಲಿ ವಿಜಯನಗರದ ಅರಸರ ಕಾಲದಲ್ಲಿ ಒಬ್ಬ ಸೇನಾಧಿಪತಿಯಾಗಿದ್ದವರು. ವೈರಾಗ್ಯದಿಂದ ಕಾಗಿನೆಲೆಯ ಆದಿಕೇಶವನನ್ನು ಆರಾಧ್ಯದೈವವಾಗಿಸಿಕೊಂಡು ಕೊನೆಗೆ ಸಮಾಜ ಸುಧಾರಣೆಗಾಗಿ ಶ್ರಮಿಸಿದರು’ ಎಂದು ತಿಳಿಸಿದರು.

‘ಕನಕದಾಸರ ತತ್ವಾದರ್ಶಗಳನ್ನು ಇಂದಿನ ಯುವಜನತೆಗೆ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕು. ಸಮಾಜದ ಒಳಿತಿಗಾಗಿ ದೃಢ ಸಂಕಲ್ಪದಿಂದ ಮುನ್ನುಗ್ಗಿದ್ದರೆ ಯಶಸ್ಸು ಖಂಡಿತ. ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕನಕದಾಸರ ಸಾಹಿತ್ಯ ಇಂದಿಗೂ ಪ್ರಸ್ತುತ ಹಾಗೂ ಸಮಾನತೆಯ ಅರಿವನ್ನು ಮೂಡಿಸುತ್ತದೆ’ ಎಂದರು. 

‘ಮೂಢ ಭಕ್ತಿಯನ್ನು ಕಟುವಾಗಿ ಟೀಕಿಸಿ, ನಿಜಭಕ್ತಿಯ ಸಾಕ್ಷಾತ್ಕಾರ ಕಂಡ ಕನಕದಾಸರ ತತ್ವ, ಚಿಂತನೆ, ಪ್ರಾಮಾಣಿಕ ಭಕ್ತಿಯ ವಿಚಾರಗಳು ಇಂದಿನ ಯುವಪೀಳಿಗೆ ಮತ್ತು ಸಮಾಜಕ್ಕೆ ಮಾದರಿಯಾಗಬೇಕು. ಜಾತಿ, ಧರ್ಮಗಳನ್ನು ಮೀರಿ ಆಧ್ಯಾತ್ಮದ ತುದಿ ಮುಟ್ಟಿ, ಮನುಷ್ಯತ್ವಕ್ಕೆ ಬೆಲೆ ನೀಡಿದ ಕನಕದಾಸರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ತರವಲ್ಲ’ ಎಂದು ಹೇಳಿದರು.

‘ಕನಕದಾಸರ ಭಕ್ತಿ, ಆಚಾರ, ವಿಚಾರ, ಕೀರ್ತನೆಗಳನ್ನು ಕೇವಲ ಓದಿಗೆ ಸೀಮಿತಗೊಳಿಸಬಾರದು. ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅವುಗಳಿಗೆ ಅರ್ಥ ಬರುತ್ತದೆ. ಕನಕದಾಸರು ತಮ್ಮ ಕೀರ್ತನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಜತೆಗೆ ಅನೇಕ ಆದರ್ಶಗಳನ್ನು ಸಮಾಜಕ್ಕೆ ತೋರಿಸಿಕೊಟ್ಟರು’ ಎಂದು ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಮತ್ತು ಕೋವಿಡ್-19 ಕಾರಣಕ್ಕೆ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಮರೇಶ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ನೋಮೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ತಹಶೀಲ್ದಾರ್ ನಾಗಪ್ರಶಾಂತ್, ಕುರುಬ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.