ಕೊಳಚೆ ನೀರು ಶುದ್ಧೀಕರಿಸುವ ಮೆಕ್ಸಿಕೊ ಯೋಜನೆಯ ನಂತರ ರಾಜ್ಯದ ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ವಿಶ್ವದ ಎರಡನೇ ಅತಿದೊಡ್ಡ ಕೊಳಚೆ ನೀರು ಶುದ್ಧೀಕರಿಸುವ ಯೋಜನೆಯಾಗಿದೆ. ಬಯಲುಸೀಮೆ ಜಿಲ್ಲೆಗಳ ಕೆರೆ ತುಂಬಿಸುವ ಜೊತೆಗೆ ಅಂತರ್ಜಲದ ಮಟ್ಟ ಹೆಚ್ಚಿಸುವ ಉದ್ದೇಶದೊಂದಿಗೆ ಜಾರಿಯಾದ ಈ ಯೋಜನೆ ಕುರಿತು ವಾದ–ಪ್ರತಿವಾದ ತೀವ್ರಗೊಂಡಿವೆ. ಅವಳಿ ವ್ಯಾಲಿ ಯೋಜನೆಯಿಂದ ಕೃಷಿ, ಬೆಳೆ, ಅಂತರ್ಜಲ ಮತ್ತು ಪರಿಸರದ ಮೇಲೆ ದುಷ್ಪರಿಣಾಮವಾಗಲಿದೆ ಎಂಬುವುದು ಈ ಯೋಜನೆ ವಿರೋಧಿಸುವವರ ಪ್ರಬಲ ವಾದವಾಗಿದೆ.
ಅವಳಿ ವ್ಯಾಲಿ ಯೋಜನೆ ಜಾರಿಗೆ ತಂದ ಸರ್ಕಾರ ಮತ್ತು ಈ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಬೇಕು ಎನ್ನುತ್ತಿರುವ ಹೋರಾಟಗಾರರ ಉದ್ದೇಶ ಮೂರು ಜಿಲ್ಲೆಗಳ ಜನರಿಗೆ ಶುದ್ಧ ನೀರು ಒದಗಿಸಬೇಕು ಎಂಬುವುದೇ ಆಗಿದೆ. ವಾಸ್ತವ ನೆಲೆಗಟ್ಟಿನಲ್ಲಿ ಸಾಧಕ–ಬಾಧಕ ಚರ್ಚಿಸುವ ಬದಲು ಕೆಲವರು ಈ ವಿಷಯವನ್ನು ವೈಯಕ್ತಿಕವಾಗಿ ತೆಗೆದುಕೊಂಡಿರುವುದೇ ಸಮಸ್ಯೆಗೆ ಕಾರಣ ಎಂದು ನನಗನಿಸುತ್ತಿದೆ.
ಈ ಕುರಿತು ಹೋರಾಟ ನಡೆಸುತ್ತಿರುವ ಆಂಜನೇಯ ರೆಡ್ಡಿ ಅವರು ಸಮಸ್ಯೆಗೆ ಪರಿಹಾರ ಏನೆಂದು ತಿಳಿಸುತ್ತಿಲ್ಲ. ಆಂಜನೇಯ ರೆಡ್ಡಿ ಮತ್ತು ಈ ಬಗ್ಗೆ ಅಧ್ಯಯನ ನಡೆಸಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಟಿ.ವಿ. ರಾಮಚಂದ್ರನ್ ಜತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಆದರೆ, ಈ ವಿಷಯದಲ್ಲಿ ನಾವು ಕಾವೇರಿ ನೀರಿನ ಕುರಿತು ತಮಿಳುನಾಡಿನ ಜತೆ ಕಿತ್ತಾಡುವ ರೀತಿ ನಾವು, ನಾವೇ ಕಿತ್ತಾಡಿಕೊಳ್ಳುತ್ತಿದ್ದೇವೆ.
ಕೋಲಾರದ ಕೋಲಾರಮ್ಮ ಕೆರೆಗೆ ಸುತ್ತಮುತ್ತಲಿನ ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆ ನೀರಿನಲ್ಲಿ ನೊರೆ ಉಂಟಾಗುತ್ತಿದೆ. ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ಮಾರ್ಗಸೂಚಿ ಅನ್ವಯ ಅವಳಿ ವ್ಯಾಲಿಯ ನೀರಿನಲ್ಲಿ ಫಾಸ್ಪೇಟ್ ಅಂಶದ ಪ್ರಮಾಣವನ್ನು ಒಂದಕ್ಕಿಂತ ಕಡಿಮೆ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿದೆ. ಇನ್ನೂ ಇದಕ್ಕಿಂತ ಕಡಿಮೆ ಮಾಡಲು ಸಾಧ್ಯವಾಗದು. ವ್ಯಾಲಿ ನೀರು ಮೊದಲಿಗೆ ಕೋಲಾರದ ಲಕ್ಷ್ಮಿಸಾಗರ ಹರಿಯುತ್ತದೆ. ಆ ಬಳಿಕ ಉಡುಪನಹಳ್ಳಿ, ನರಸಾಪುರ ಕೆರೆಗೆ ಹರಿಯುತ್ತದೆ. ಅಲ್ಲಿ ಯಾವುದೇ ಸಮಸ್ಯೆ ಇಲ್ಲ.
ಆ ಭಾಗದ ಸ್ಥಳೀಯವಾಗಿ ಉತ್ಪತ್ತಿಯಾಗುವ ಕೊಳಚೆ ನೀರು, ವ್ಯಾಲಿ ನೀರಿನೊಂದಿಗೆ ಸೇರಿ ಸಮಸ್ಯೆಯಾಗುತ್ತಿದೆಯೇ ಹೊರತು, ವ್ಯಾಲಿ ನೀರಿನಿಂದಾಗಿ ಅಲ್ಲ. ಹಾಗಾಗಿ ಸ್ಥಳೀಯವಾಗಿ ಉತ್ಪತ್ತಿಯಾಗುವ ಕೊಳಚೆ ನೀರು, ವ್ಯಾಲಿ ನೀರಿನೊಂದಿಗೆ ಬೆರೆಯದಂತೆ ತಡೆಯಲು ಸಣ್ಣ ನೀರಾವರಿ ಇಲಾಖೆ, ಜಿಲ್ಲಾಡಳಿತ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು.
ಅಮೆರಿಕ ಮತ್ತು ಜೋರ್ಡಾನ್‌ನಂತಹ ದೇಶಗಳಲ್ಲಿ ನೀರನ್ನು ಯಾವ ಕಾರಣಕ್ಕಾಗಿ ಬಳಸಲಾಗುತ್ತದೆ ಎಂಬ ಉದ್ದೇಶದ ಮೇಲೆ ಆ ನೀರಿನ ಗುಣಮಟ್ಟ ನಿರ್ಧರಿಸಲಾಗುತ್ತದೆ. ಕೃಷಿ ಉದ್ದೇಶಕ್ಕೆ ಬಳಸಲಾಗುವ ನೀರಿನಲ್ಲಿ ಫಾಸ್ಪೇಟ್ ಮತ್ತು ನೈಟ್ರೇಟ್ ಇರಬೇಕು. ಅದರಿಂದ ಬೆಳೆಗೆ ಅಗತ್ಯ ಪೌಷ್ಟಿಕಾಂಶ ಸಿಗುತ್ತದೆ. ಆಗ ರೈತರು ಹೆಚ್ಚು ಕೀಟನಾಶಕ ಬಳಸುವ ಅಗತ್ಯ ಉದ್ಭವಿಸುವುದಿಲ್ಲ. ಆದರೆ, ಈ ನೀರು ಕುಡಿಯಲು ಯೋಗ್ಯವಲ್ಲ. ಕುಡಿಯುವ ನೀರಿನ ಮೂಲವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು.
ಬೆಂಗಳೂರಿನಲ್ಲಿ ಕಾವೇರಿ ಐದನೇ ಹಂತ ಜಾರಿಯಾದ ಬಳಿಕ 2,250 ದಶಲಕ್ಷ ಲೀಟರ್ ಕೊಳಚೆ ನೀರು ಉತ್ಪತ್ತಿಯಾಗಲಿದೆ. ಆ ನೀರನ್ನು ಸದುಪಯೋಗಪಡಿಸಿಕೊಂಡರೆ 1.20 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಕೃಷಿ ಮಾಡಬಹುದು. ಈ ಕುರಿತು ನಾವು, ವಾದ–ಪ್ರತಿವಾದ ಮಾಡುವ ಬದಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾರ್ಯ ಪ್ರವೃತ್ತರಾಗಬೇಕಿದೆ.
ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಯೋಜನೆಯ ಪ್ರಯೋಜನ ಕುರಿತು ಸರ್ಕಾರವೇ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿತ್ತು.
ನಿರೂಪಣೆ: ಅಯ್ಯಣ್ಣ
* ವಿರೋಧಿಸುವವರ ವಾದದಲ್ಲಿ ಹುರುಳಿಲ್ಲ * ಯೋಜನೆ ವಿರೋಧಿಸುವವರು ಪರಿಹಾರ ಸೂಚಿಸುತ್ತಿಲ್ಲ * ಅವಳಿ ವ್ಯಾಲಿ ಯೋಜನೆ ಬಗ್ಗೆ ಸರ್ಕಾರ ಜಾಗೃತಿ ಮೂಡಿಸಬೇಕಿತ್ತು * ವ್ಯಾಲಿ ನೀರಿದ್ದರೆ ಹೊಲಗಳಿಗೆ ಗೊಬ್ಬರ ಬೇಕಿಲ್ಲ
ಕೃಷಿ ಮೇಲೆ ದುಷ್ಪರಿಣಾಮ ಸುಳ್ಳು ವಾದ ಈ ಎರಡೂ ವ್ಯಾಲಿಗಳ ನೀರು ಕೃಷಿ ಮತ್ತು ಬೆಳೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ವಾದದಲ್ಲಿ ವೈಜ್ಞಾನಿಕ ಅಂಶವೇ ಇಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಐದು ಸಾವಿರ ಕೆರೆಗಳಿವೆ. ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ಯೋಜನೆಯ ನೀರು ಸೇರುತ್ತಿರುವುದು ಕೇವಲ 200 ಕೆರೆಗಳಿಗೆ ಮಾತ್ರ. ಹಾಗಾದರೆ ಇನ್ನುಳಿದ 4800 ಕೆರೆಗಳ ನೀರಿನಿಂದ ಬೆಳೆಯಲಾಗುತ್ತಿರುವ ಟೊಮೆಟೊ ಹಾಗೂ ಇತರ ಬೆಳೆಗೆ ಯಾವುದೇ ಹಾನಿಯಾಗಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಮೂರನೇ ಹಂತದ ಶುದ್ಧೀಕರಣದ ಅಂದ್ರೆ ಏನು?
ಎರಡು ಹಂತದಲ್ಲಿ ಶುದ್ಧೀಕರಿಸಲಾಗುತ್ತಿರುವ ವ್ಯಾಲಿ ನೀರನ್ನು ಮೂರನೇ ಸಲ ಶುದ್ಧೀಕರಿಸಬೇಕು ಎಂಬ ಕೂಗು ವ್ಯಕ್ತವಾಗುತ್ತಿದೆ. ಹಾಗಿದ್ದರೆ ಮೂರನೇ ಹಂತದ ಶುದ್ಧೀಕರಣ ಎಂದರೆ ಏನು? ಉದಾಹರಣೆಗೆ ಶುದ್ಧೀಕರಿಸಿದ ನೀರಿನಲ್ಲಿರುವ ನೈಟ್ರೇಟ್ ಕಡಿಮೆ ಮಾಡಬೇಕೆ ಅಥವಾ ಫಾಸ್ಪೇಟ್ ಕಡಿಮೆ ಮಾಡಬೇಕೇ ಇಲ್ಲವೇ ನೀರಿನಲ್ಲಿ ಕರಗಿರುವ ಘನ ಪದಾರ್ಥಗಳನ್ನು ಕಡಿಮೆ ಮಾಡುವ ಮೂಲಕ ನೀರಿನ ಸಾಂದ್ರತೆ (ಟಿಡಿಎಸ್- ಟೋಟಲ್ ಡಿಸಾಲವ್ಡ್ ಸಾಲಿಡ್ಸ್) ಕಡಿಮೆ ಮಾಡಬೇಕೇ ಎಂಬುದನ್ನು ತಿಳಿಸಬೇಕು. ಎಚ್.ಎನ್. ವ್ಯಾಲಿಯ ಮೊದಲ ಹಂತದ ನೀರು ಸೇರುವ ಬಾಗಲೂರು ಕೆರೆಯಲ್ಲಿ ಮೀನುಗಾರಿಕೆ ಪಕ್ಷಿ ಸಂಕುಲ ಸೇರಿದಂತೆ ಇನ್ನಿತರ ಪರಿಸರ ಪರವಾದ ಕೆಲಸ ಯಶಸ್ವಿಯಾಗಿ ನಡೆಯುತ್ತಿವೆ. ಆ ಬಳಿಕ ಈ ನೀರು ದೇವನಹಳ್ಳಿಯ ಸಿಹಿ ನೀರಿನ ಕೆರೆಗೆ ಹರಿಯುತ್ತದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಗೃಹಬಳಕೆಗೂ ಉಪಯೋಗಿಸಲಾಗುತ್ತಿದೆ. ಇಲ್ಲಿ ಯಾವುದೇ ಸಮಸ್ಯೆ ಆಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.