ಸೋಮವಾರ, ಜುಲೈ 26, 2021
26 °C
ಪರಿಸರ ದಿನಾಚರಣೆ

ನೂರು ಎಕರೆಯಲ್ಲಿ ಅರಣ್ಯೀಕರಣ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ನೂರು ಎಕರೆ ಜಮೀನಿನಲ್ಲಿ ಅರಣ್ಯ ಸೃಷ್ಟಿಸುವ ಮಹತ್ವಾಕಾಂಕ್ಷಿ ಯೋಜನೆಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆಯು ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿಯ ತಾತಹಳ್ಳಿ ಫಾರಂನಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನರೇಗಾ ಯೋಜನೆ ಸದುಪಯೋಗಪಡಿಸಿಕೊಳ್ಳಿ. ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಯಿರಿ. ಪ್ರತಿ ಹಳ್ಳಿಯಲ್ಲೂ ಉದ್ಯಾನವನವಿರಲಿ ಎಂದು ಸಲಹೆ ನೀಡಿದರು.

ಸ್ವಚ್ಛತೆ ಮತ್ತು ಪರಿಸರ ಕಾಳಜಿಯ ಕುರಿತು ಜಿಲ್ಲಾಧಿಕಾರಿ ಆರ್. ಲತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲೆಯ ಜೀವವೈವಿಧ್ಯ ಬಿಂಬಿಸುವ, ಅರಣ್ಯ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ‘ನಮ್ಮ ಚಿಕ್ಕಬಳ್ಳಾಪುರ– ಹಸಿರು ಚಿಕ್ಕಬಳ್ಳಾಪುರ ಮಾಡೋಣ’ ವೀಡಿಯೊವನ್ನು ಸಚಿವರು ಬಿಡುಗಡೆ ಮಾಡಿದರು. ‘ಚಿಗುರು ಚಿಂತನೆ’ ಸ್ಪರ್ಧೆಯ ಭಿತ್ತಿಪತ್ರ ಬಿಡುಗಡೆ ಗೊಳಿಸಲಾಯಿತು.

ಪ್ರಶಸ್ತಿ ಪ್ರಮಾಣ ಪತ್ರ: ಉತ್ತಮ ಕಾರ್ಯನಿರ್ವಹಣೆಗಾಗಿ ಅರಣ್ಯ ಇಲಾಖೆಯಿಂದ ಅರಣ್ಯ ವೀಕ್ಷಕರಾದ ನಂಜರೆಡ್ಡಿ, ಸುಬ್ಬಾರೆಡ್ಡಿ, ಶ್ರೀನಿವಾಸ್, ಕೃಷ್ಣಪ್ಪ, ಕೆ.ಶ್ರೀನಿವಾಸ್, ಶಿವಪ್ಪ, ನರಸಿಂಹರೆಡ್ಡಿ, ದೇವರಾಜ್, ಶ್ರೀರಾಮಪ್ಪ, ಖಾದರ್ ಪಾಷ, ತಿಮ್ಮರಾಯಪ್ಪ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು. ಅತ್ಯುತ್ತಮ ಅರಣ್ಯೀಕರಣಕ್ಕಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆರ್‌ಎಫ್‌ಒ ಬಿ.ಜೆ. ಪೂರ್ಣಿಕರಾಣಿ, ಪಿಡಿಒ ಶ್ರೀನಿವಾಸ್, ನೈನಾ ನಿಖತ್‌, ನಾರಾಯಣಸ್ವಾಮಿ, ಅಬೂಬಕರ್ ಸಿಸ್ಸಿಕಿ, ಇಒ ಶಿವಕುಮಾರ್ ಅವರಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಯಿತು.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ₹ 25 ಸಾವಿರ ಪರಿಹಾರ ಧನದ ಚೆಕ್‌ ನೀಡಲಾಯಿತು. ಜಿಲ್ಲೆಯಾದ್ಯಂತ ಒಟ್ಟು ಆರು ಸಾವಿರ ಅರ್ಜಿ ಬಂದಿವೆ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ರಮೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಆರ್.ಲತಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್, ಅಧ್ಯಕ್ಷ ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾ ರಘು, ರಾಜಾಕಾಂತ್, ಕೃಷ್ಣಮೂರ್ತಿ, ಮುನೇಗೌಡ, ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷೆ ಮುನಿನರಸಮ್ಮ, ಸದಸ್ಯ ಕೆ.ಎಂ.ಶ್ರೀನಿವಾಸ್, ಇಒ ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಎಸಿಎಫ್ ಶ್ರೀಧರ್, ಆರ್.ಎಫ್.ಒ ಎಚ್.ಎಸ್.ಶ್ರೀಲಕ್ಷ್ಮಿ ಇದ್ದರು.

ದಾರಿ ತಪ್ಪಿದ ಶಾಸಕ

ಜಿಲ್ಲಾಡಳಿತದ ಆಯೋಜಿಸಿದ್ದ ಪರಿಸರ ದಿನ ಕಾರ್ಯಕ್ರಮಕ್ಕೆ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಗೈರಾಗಿದ್ದರು. ಕಾರ್ಯಕ್ರಮಕ್ಕೆಂದು ಹೊರಟವರು, ದಾರಿ ತಪ್ಪಿ ತಾತಹಳ್ಳಿ ಗ್ರಾಮದ ಬಳಿ ಹೋಗಿದ್ದರು. ನಂತರ ಸರಿ ದಾರಿ ಕೇಳಿ ಕಾರ್ಯಕ್ರಮದ ಕಡೆಗೆ ಹೊರಟವರು, ಮನಸ್ಸು ಬದಲಿಸಿ ಹಿಂದಿರುಗಿದ್ದರು.

ಈ ಬಗ್ಗೆ ಪ್ರತಿಕ್ರಿಯಸಿದ ಡಾ. ಸುಧಾಕರ್‌, ಶಿಷ್ಟಾಚಾರದಂತೆ ಶಾಸಕರನ್ನು ಆಹ್ವಾನಿಸಲಾಗಿದೆ. ನಾನು ಶಾಸಕನಾಗಿದ್ದಾಗ ಪರಿಸರ ಕಾರ್ಯಕ್ರಮಕ್ಕೆ ಯಾವ ಮಂತ್ರಿ ಆಮಂತ್ರಿಸಿದ್ದರೂ ಪರಿಸರ ಪ್ರೇಮಿಯಾಗಿ ತೆರಳುತ್ತಿದ್ದೆ. ಕಾರ್ಯಕ್ರಮಕ್ಕೆ ಬರುವುದು ಅವರ ವಿವೇಚನೆಗೆ ಬಿಟ್ಟಿದ್ದು. ಅವರ ತಾಲ್ಲೂಕಿನಲ್ಲಿ ನೂರು ಎಕರೆ ಪ್ರದೇಶದಲ್ಲಿ ನೀಲಗಿರಿ ತೆಗೆದು ವನ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಇಂತಹ ಕಾರ್ಯಕ್ರಮಗಳನ್ನು ಅವರೇ ಮುಂದೆ ನಿಂತು ನಡೆಸಬೇಕಿತ್ತು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು