ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬಲಿಜಿಗರಲ್ಲಿ ತಾರಕಕ್ಕೇರಿದ ಬಣ ರಾಜಕಾರಣ

ನಾಳೆ ಕೈವಾರ ತಾತಯ್ಯ ಜಯಂತಿ; ಬಲಿಜ ಸಮುದಾಯದಲ್ಲಿ ಕಾವೇರಿದ ವಾತಾವರಣ
Last Updated 6 ಮಾರ್ಚ್ 2023, 11:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಲಿಜ ಸಮುದಾಯ ಪ್ರಮುಖವಾದುದು. ಈ ಕ್ಷೇತ್ರದ ಯಾವುದೇ ಅಭ್ಯರ್ಥಿಯ ಸೋಲು ಗೆಲುವಿನಲ್ಲಿ ನಿರ್ಣಾಯಕ ಎನಿಸುವಷ್ಟು ಮತದಾರರು ಸಮುದಾಯದಲ್ಲಿ ಇದ್ದಾರೆ.

ಇಂತಿಪ್ಪ ಸಮುದಾಯದಲ್ಲಿ ಈಗ ‘ಬಣ’ ರಾಜಕಾರಣ ತಾರಕಕ್ಕೇರಿದೆ. ಸಮುದಾಯದ ಆರಾಧ್ಯ ಗುರುವಾದ ಕೈವಾರ ತಾತಯ್ಯ ಅವರ ಜಯಂತಿಯ ಸಂದರ್ಭದಲ್ಲಿ ಬಣಗಳ ನಡುವೆ ಸಂಘರ್ಷ ಜೋರಾಗಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇದ್ದರೂ ಇಲ್ಲಿಯವರೆಗೂ ಒಗ್ಗಟ್ಟನ್ನು ಕಾಯ್ದುಕೊಂಡಿದ್ದ ಬಲಿಜಿಗರ ನಡುವೆ ಈಗ ಒಡಕು ಮೂಡಿದೆ.

ಕೈವಾರ ತಾತಯ್ಯ ಅವರ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕು ಎನ್ನುವುದು ಸಮುದಾಯದ ಬಹುದಿನಗಳ ಬೇಡಿಕೆ ಆಗಿತ್ತು. ಕಳೆದ ವರ್ಷ ಸರ್ಕಾರ ಹಸಿರು ನಿಶಾನೆ ಸಹ ತೋರಿತು. ರಾಜ್ಯ ಮಟ್ಟದ ಜಯಂತಿ ಚಿಕ್ಕಬಳ್ಳಾಪುರದಲ್ಲಿ ನಡೆಯಿತು. ಅಪಾರ ಸಂಖ್ಯೆಯಲ್ಲಿ ಸಮುದಾಯದವರು ಸೇರಿದ್ದರು. ಬಲಿಜ ಸಮುದಾಯದ ಒಗ್ಗಟ್ಟು ಪ್ರದರ್ಶನಕ್ಕೂ ವೇದಿಕೆ ಆಗಿತ್ತು.

ಆದರೆ ಈ ವರ್ಷ ಒಗ್ಗಟ್ಟಿನ ಮಾತು ದೂರವಾಗಿ ಬಣ ರಾಜಕಾರಣದ ಮಾತುಗಳು ಹೆಚ್ಚಿವೆ. ರಾಜ್ಯ ಬಿಜೆಪಿ ಸರ್ಕಾರ ಪೂರ್ಣ ಪ್ರಮಾಣದಲ್ಲಿ ‘2ಎ’ ಮೀಸಲಾತಿ ನೀಡಲು ಮೀನಮೇಷ ಎಣಿಸುತ್ತಿದೆ. ಅಭಿವೃದ್ಧಿ ನಿಗಮ ರಚನೆಗೂ ಆಸಕ್ತಿ ತೋರುತ್ತಿಲ್ಲ ಎಂದು ಬಲಿಜ ಜಾಗೃತ ಸಮಿತಿ ಹಾಗೂ ಕೆಲವು ಮುಖಂಡರು ಮಾ.7ರಂದು ನಡೆಯುವ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ನಗರದ ಕೈವಾರ ತಾತಯ್ಯ ಅವರ ದೇಗುಲದ ಬಳಿ ಕಾರ್ಯಕ್ರಮ ಸಂಘಟಿಸಲು ಮುಂದಾಗಿದ್ದಾರೆ.

ಮತ್ತೊಂದು ಕಡೆ ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಹಾಗೂ ಮುಖಂಡರು ಸರ್ಕಾರಿ ಕಾರ್ಯಕ್ರಮವನ್ನು ಸಮುದಾಯದವರು ಬಹಿಷ್ಕರಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಎರಡೂ ಬಣಗಳ ನಡುವಿನ ತಿಕ್ಕಾಟ ಬಹಿರಂಗವಾಗಿ ಇದೆ.

‘1994ರವರೆಗೆ ಬಲಿಜಿಗ ಸಮುದಾಯ ‘2ಎ’ ಮೀಸಲಾತಿ ಪಡೆಯುತ್ತಿತ್ತು. ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಈ ಸೌಲಭ್ಯ ಹಿಂದಕ್ಕೆ ಪಡೆದರು. ಸರ್ಕಾರಿ ಕಾರ್ಯಕ್ರಮ ಬಹಿಷ್ಕರಿಸಬೇಕು ಎನ್ನುವವರು ಆಗ ಏಕೆ ಹೋರಾಟ ಮಾಡಲಿಲ್ಲ. ಈಗ ಚುನಾವಣೆ ಸಮಯವಾದ ಕಾರಣ ಬಹಿಷ್ಕಾರದ ಮಾತುಗಳು ಕೇಳಿ ಬರುತ್ತಿವೆ’ ಎಂದು ನವೀನ್ ಕಿರಣ್ ಮತ್ತು ಅವರ ಬಣದ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.

‘2ಎ’ಗೆ ಹಲವು ವರ್ಷಗಳಿಂದ ಹೋರಾಟ ನಡೆಸಿದರೂ ಬೇಡಿಕೆ ಈಡೇರಿಲ್ಲ. ಪ್ರಬಲ ಸಮುದಾಯಗಳಿಗೆ ರಾಜ್ಯ ಸರ್ಕಾರ ಮನ್ನಣೆ ನೀಡುತ್ತಿದೆ. ನಿಗಮ ರಚನೆಯನ್ನು ಮಾಡಿಲ್ಲ. ಮುಂದೆ ರಾಜಕೀಯ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಬಲಿಜ ಜಾಗೃತ ಸಮಿತಿ ಮುಖಂಡರು ನುಡಿಯುತ್ತಿದ್ದಾರೆ.

ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ ಸಮುದಾಯದ ವಿಚಾರದಲ್ಲಿ ಬಲಿಜಿಗರು ಒಗ್ಗಟ್ಟು ಪ್ರದರ್ಶಿಸುತ್ತಿದ್ದರು. ಆದರೆ ಈ ಬಾರಿಯ ತಾತಯ್ಯ ಅವರ ಜಯಂತಿ ಸಮಯದಲ್ಲಿ ಒಡಕು, ಬಹಿಷ್ಕಾರ, ಪ್ರತ್ಯೇಕ ಕಾರ್ಯಕ್ರಮದ ಮಾತುಗಳು ಪ್ರಬಲವಾಗಿ ಕೇಳಿ ಬರುತ್ತಿವೆ.

ಮಾ.7ರ ಕಾರ್ಯಕ್ರಮ ಎರಡು ಬಣಗಳ ನಡುವೆ ಬಲಾಬಲ ಪ್ರದರ್ಶನಕ್ಕೆ ಕಾರಣವಾಗಲಿದೆಯೇ? ಸಮುದಾಯದ ಮುಖಂಡರ ನಡುವೆ ಮತ್ತಷ್ಟು ಬಿರುಕು ಮೂಡಲಿದೆಯೇ?–ಹೀಗೆ ನಾನಾ ರೀತಿಯ ಚರ್ಚೆಗಳು ಸಮುದಾಯದಲ್ಲಿ ನಡೆದಿವೆ. 7ರ ಕಾರ್ಯಕ್ರಮದತ್ತ ಕುತೂಹಲವಿದೆ.

ಪ್ರದೀಪ್ ಈಶ್ವರ್‌ಗೆ ಎರಡೂ ಬಣ ಬೆಂಬಲ!

ಈ ನಡುವೆ ಬಲಿಜಿಗ ಸಮುದಾಯದವರೇ ಆದ ಪರಿಶ್ರಮ ನೀಟ್ ಅಕಾಡೆಮಿ ಅಧ್ಯಕ್ಷ ಪ್ರದೀಪ್ ಈಶ್ವರ್ ಸಹ ಸಮುದಾಯದ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಪಕ್ಷಾತೀತವಾಗಿ ಅವರನ್ನು ಬೆಂಬಲಿಸುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಲಿಜ ಸಮುದಾಯದಿಂದ ನಡೆಯುವ ಕಾರ್ಯಕ್ರಮಗಳಿಗೆ ಪ್ರದೀಪ್ ಈಶ್ವರ್ ಆರ್ಥಿಕವಾಗಿ ನೆರವಾಗುತ್ತಿದ್ದಾರೆ. ಈಗ ಪರಸ್ಪರ ತಿಕ್ಕಾಟದಲ್ಲಿ ತೊಡಗಿರುವ ಎರಡೂ ಬಣಗಳಲ್ಲಿ ಅವರ ಸ್ನೇಹಿತರು ಇದ್ದಾರೆ.

ಮಾ.7ರ ಕೈವಾರ ತಾತಯ್ಯ ಅವರ ಜಯಂತಿಯ ದಿನವೇ ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಸಮುದಾಯದ ಎಸ್ಸೆಸ್ಸೆಲ್ಸಿ, ಪಿಯುಸಿ, ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಪ್ರದೀಪ್ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ 3 ಸಾವಿರ ವಿದ್ಯಾರ್ಥಿಗಳು ನೋಂದಣೆ ಆಗಿದ್ದು ₹ 1.5 ಕೋಟಿ ವಿದ್ಯಾರ್ಥಿ ವೇತನ ವಿತರಿಸುತ್ತಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಚಿವ ಡಾ.ಕೆ.ಸುಧಾಕರ್, ಜೆಡಿಎಸ್ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ ಸೇರಿದಂತೆ ಮೂರು ಪಕ್ಷಗಳ ಮುಖಂಡರನ್ನು ಆಹ್ವಾನಿಸಿದ್ದಾರೆ. ಕೆಲವು ಬಲಿಜ ಮುಖಂಡರು ಸಹ ಪ್ರದೀಪ್ ನಾಯಕತ್ವದತ್ತ ಒಲವು ತೋರುತ್ತಿದ್ದಾರೆ. ಈ ಎಲ್ಲ ವಿಚಾರಗಳು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಲಿಜ ಸಮುದಾಯದಲ್ಲಿ ನಾನಾ ರೀತಿಯ ರಾಜಕೀಯ ಲೆಕ್ಕಾಚಾರ ಮತ್ತು ಚರ್ಚೆಗೆ ಕಾರಣವಾಗಿದೆ.

ಸಮುದಾಯದಲ್ಲಿ ಸಿವಿವಿ ಹೆಜ್ಜೆ ಗುರುತು

ಸಿ.ವಿ.ವೆಂಕಟರಾಯಪ್ಪ ಅವರ ತರುವಾಯ ಜಿಲ್ಲೆಯಲ್ಲಿ ಬಲಿಜ ಸಮುದಾಯಕ್ಕೆ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರದಲ್ಲಿ ‘ದೊಡ್ಡ ಸಮುದಾಯ’ ಎನ್ನುವ ಹಣೆಪಟ್ಟಿ ಇದ್ದರೂ ರಾಜಕೀಯವಾಗಿ ಪರಾವಲಂಬಿ ಎನ್ನುವ ಸ್ಥಿತಿ ಸಮುದಾಯಕ್ಕೆ ಇದೆ.

‘ಸಿವಿವಿ’ ಎಂದೇ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಸಿ.ವಿ.ವೆಂಕಟರಾಯಪ್ಪ ಅವರು 1962ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ, 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಚಿಕ್ಕಬಳ್ಳಾಪುರ ಮೀಸಲು ಕ್ಷೇತ್ರವಾಗುತ್ತಿದ್ದಂತೆ 1989ರಲ್ಲಿ ಚುನಾವಣೆಯಲ್ಲಿ ಅವರು ಬಾಗೇಪಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಶಾಸಕರಾಗುವ ಪೂರ್ವದಲ್ಲಿ ಸಿವಿವಿ ಅವರು 23 ವರ್ಷ 8 ತಿಂಗಳು ಕಾಲ ಪುರಸಭೆಯ ಸದಸ್ಯರಾಗಿ ಕೆಲಸ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ವೆಂಕಟರಾಯಪ್ಪ ಅವರ ಹೆಸರು ಸಮುದಾಯದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT