ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಮಳೆ ಬಾರದಂತೆ ಪ್ರಾರ್ಥಿಸುವ ಜನರು

ಪೂರ್ವಸಿದ್ಧತೆಗಳನ್ನು ಮರೆತ ನಗರಸಭೆ; ಚರಂಡಿಗಳಲ್ಲಿ ತುಂಬಿದೆ ನೀರು, ತಗ್ಗು ಪ್ರದೇಶದ ಜನರು ಹೈರಾಣು
Last Updated 23 ಜುಲೈ 2021, 14:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮಳೆ ಏಕೆ ಬರುತ್ತದೆಯೋ. ಮಳೆ ಬರಬಾರದು ಎಂದು ನನ್ನಂತೆಯೇ ಇಲ್ಲಿನ ಬಹಳ ಜನರು ಪ್ರಾರ್ಥಿಸುತ್ತೇವೆ’–ಇದು ಇಲ್ಲಿನ ಜೈಭೀಮ್ ನಗರದ ಲಕ್ಷ್ಮಿ ಅವರ ಬೇಸರದ ನುಡಿ.

ಲಕ್ಷ್ಮಿ ಅವರ ಮಾತುಗಳನ್ನೇ ನಗರದ ಹಲವು ಕಡೆಗಳಲ್ಲಿ ಜನರು ಅನುಮೋದಿಸುವರು. ಮಳೆಗಾಲ ಗ್ರಾಮೀಣ ಜನರಲ್ಲಿ ಖುಷಿ ತಂದರೆ ಚಿಕ್ಕಬಳ್ಳಾಪುರ ನಗರದ ತಗ್ಗು ಪ್ರದೇಶದ ಜನರು ಹಾಗೂ ಕೆಲ ಬಡಾವಣೆಗಳ ಜನರ ಬದುಕನ್ನು ಹೈರಾಣು ಮಾಡುತ್ತದೆ. ಜೈಭೀಮ್ ನಗರ, ಸಾಧುಮಠದಿಂದ ಗಂಗನಮಿದ್ದೆ ಕಡೆ ಸಾಗುವ ರಸ್ತೆ, ದರ್ಗಾ ಮೊಹಲ್ಲಾ ಹಿಂಬದಿ, ಮುಷ್ಟೂರು ರಸ್ತೆ ಹೀಗೆ ವಿವಿಧ ಕಡೆಗಳಲ್ಲಿ ಒಮ್ಮೆ ಸಾಗಿದರೆ ಮಳೆಗಾಲಕ್ಕೆ ನಗರಸಭೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಕೊಳಚೆ ನೀರಿನಿಂದ ತುಂಬಿ ತುಳುಕುವ ಚರಂಡಿಗಳು, ದುರ್ನಾತ ಬೀರುವ ಕೊಳಚೆ, ಕೊಳೆತ ತ್ಯಾಜ್ಯ, ನಿಂತ ನೀರಿನಲ್ಲಿ ಉತ್ಪತ್ತಿಯಾಗಿರುವ ಹುಳುಗಳು....ಅಧ್ವಾನಗಳ ರಾಶಿಯನ್ನೇ ಕಾಣಬಹುದು. ಮಳೆಗಾಲಕ್ಕೂ ಮುನ್ನ ಆಯಾ ನಗರ ಸ್ಥಳೀಯ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗದಂತೆ ಕ್ರಮವಹಿಸುವುದು, ಕೊಳಚೆಯಿಂದ ತುಂಬಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಈಗಾಗಲೇ ಕೊಳೆತು ಬಿದ್ದಿರುವ ತ್ಯಾಜ್ಯಗಳನ್ನು ತೆರವುಗೊಳಿಸುವುದು, ತ್ಯಾಜ್ಯವನ್ನು ಸುರಿಯುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡುವುದು, ಡಿಡಿಟಿ ಸಿಂಪಡಣೆ, ಮಳೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು.

ಪ್ರತಿ ವರ್ಷವೂ ಮಳೆಗಾಲದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಅವುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿದರೆ ನಾಗರಿಕರಿಗೆ ಮಳೆ ಸೃಷ್ಟಿಸುವ ಸಮಸ್ಯೆಗಳು ತೀವ್ರವಾಗಿಯೇನೂ ಕಾಡುವುದಿಲ್ಲ. ಆದರೆ ನಗರವನ್ನು ಒಮ್ಮೆ ಸುತ್ತಿದರೆ ಈ ಮುನ್ನೆಚ್ಚರಿಕೆ ವ್ಯವಸ್ಥೆಗಳು ಆಗದಿರುವುದು ಎದ್ದು ಕಾಣುತ್ತದೆ.

ಇತ್ತೀಚೆಗೆ ಸುರಿದ ಮಳೆಯಿಂದ ಜೈಭೀಮ್ ನಗರ, ಕಲ್ಲಪ್ಪ ಬಡವಾಣೆ, ಮಾರ್ಕೆಟ್ ರಸ್ತೆಯ ತಗ್ಗು ಪ್ರದೇಶ ಮನೆಗಳಿಗೆ ನೀರು ನುಗ್ಗಿತ್ತು. 5, 6, 8, 9ನೇ ವಾರ್ಡ್ ವ್ಯಾಪ್ತಿಯಲ್ಲಿ ಮಳೆ ಹಲವು ರೀತಿಯಲ್ಲಿ ಅಧ್ವಾನಗಳನ್ನು ಸೃಷ್ಟಿಸಿತ್ತು.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿಯೇ ದುರ್ನಾತ: ಜಿಲ್ಲಾ ಆಸ್ಪತ್ರೆಯ ಒಂದು ಬದಿಯಲ್ಲಿ ಹಾದು ಹೋಗಿರುವ ದೊಡ್ಡ ಚರಂಡಿಯನ್ನು ನೋಡಿದರೆ, ‘ರೋಗಗಳ ಆಗರವೇ ಆಸ್ಪತ್ರೆ ಆವರಣ’ ಎನಿಸುವುದು ಸುಳ್ಳಲ್ಲ. ಮಳೆಗಾಲದಲ್ಲಿ ಸೊಳ್ಳೆಗಳ ಸಂತಾನ ಹೆಚ್ಚುತ್ತದೆ. ಈ ಕಾರಣದಿಂದ ಆರೋಗ್ಯ ಇಲಾಖೆ ನೀರು ನಿಲ್ಲದಂತೆ ಜನರು ಎಚ್ಚರಿಕೆವಹಿಸಬೇಕು. ಡೆಂಗಿ, ಮಲೇರಿಯಾ, ಚಿಕೂನ್‌ಗೂನ್ಯಾ ನಿಯಂತ್ರಿಸಬಹುದು ಎಂದು ಪದೇ ಪದೇ ಮಾಸಾಚರಣೆ, ಪ್ರಕಟಣೆಗಳನ್ನು ಹೊರಡಿಸುತ್ತದೆ.

ಆದರೆ ಆಸ್ಪತ್ರೆಯ ಬದಿಯ ದೊಡ್ಡ ಚರಂಡಿಯಲ್ಲಿ ಕೊಳಚೆ ಮಡುಗಟ್ಟಿದೆ. ದುರ್ನಾತ ಬೀರುತ್ತಿದೆ. ಕ್ಷಣ ಹೊತ್ತು ಸಹ ಇಲ್ಲಿ ನಿಲ್ಲಲು ಸಾಧ್ಯವಿಲ್ಲ. ಈ ಕೊಳಚೆ ನೀರು ನೊಣಗಳ ಅಡ್ಡವಾಗಿದೆ. ಆಸ್ಪತ್ರೆ ಪ್ರವೇಶಿಸುವ ಗೇಟ್‌ ಎದುರಿನ ಸಿಮೆಂಟ್ ರಸ್ತೆಯ ಆಸುಪಾಸು ಸಹ ಇದೇ ಅಧ್ವಾನ. ಖಾಲಿ ಜಾಗದಲ್ಲಿ ಆಳೆತ್ತರದ ಗಿಡಗಳು ಪೊದೆಯಂತೆ ಬೆಳೆದಿವೆ. ಈ ರಸ್ತೆ ಬದಿಗೆ ಜನರು ತ್ಯಾಜ್ಯಗಳನ್ನು ತಂದು ಸುರಿಯುವರು. ಈ ಖಾಲಿ ಜಾಗದಲ್ಲಿ ಮಳೆ ಬಂದಾಗ ಶೇಖರವಾಗಿರುವ ನೀರು ಪಾಚಿ ಹಿಡಿದಿದೆ.

ಮಳೆಗಾಲದಲ್ಲಿ ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು ಸಹ ಹೆಚ್ಚು. ರೋಗ ತಡೆಗೆ ಮತ್ತು ನಗರದ ಸ್ವಚ್ಛತೆ, ಜನರ ಆರೋಗ್ಯದ ದೃಷ್ಟಿಯಿಂದ ಚರಂಡಿ ಸ್ವಚ್ಛತೆ, ರಸ್ತೆ ಬದಿ ಅನಗತ್ಯವಾಗಿ ಬೆಳೆದಿರುವ ಕಳೆಗಳ ನಾಶ ಮಾಡುವುದು ಅಗತ್ಯ. ಸ್ವಲ್ಪ ಮಳೆ ಸುರಿದರೂ ನಗರದ ಬಹಳಷ್ಟು ಕಡೆಗಳಲ್ಲಿ ಚರಂಡಿಗಳ ಕೊಳಚೆ ನೀರು ಹೊರಗೆ ಬರುತ್ತದೆ.

ರೋಗಕ್ಕೆ ಎಡೆ
ಮಳೆಗಾಲದಲ್ಲಿ ಸಹಜವಾಗಿ ಸಮಸ್ಯೆಗಳು. ನಗರಸಭೆಯವರು ಮುನ್ನೆ ಚ್ಚರಿಕೆ ವಹಿಸಬೇಕು. ಕೆಳಗಿನ ತೋಟಕ್ಕೆ ಬರುವ ರೈಲ್ವೆ ಕೆಳಸೇತುವೆಯ ಸುತ್ತಮುತ್ತಲೇ ತ್ಯಾಜ್ಯವಿದೆ. ಸ್ವಚ್ಛತೆಯನ್ನು ಕೈಗೊಳ್ಳದಿದ್ದರೆ ಸಮಸ್ಯೆಗಳು ಉದ್ಭವಿಸುತ್ತವೆ. ಸಾಂಕ್ರಾಮಿಕರ ರೋಗಕ್ಕೆ ಎಡೆ ಮಾಡಿಕೊಡುತ್ತದೆ.
-ಗೋಪಾಲಗೌಡ ಕಲ್ವಮಂಜಲಿ, ಕೆಳಗಿನತೋಟ

ಮಳೆ ಬಂದರೆ ಕಷ್ಟ
ಮಳೆ ಬಂದರೆ ಭಯ ಆಗುತ್ತದೆ. ಏಕಾದರೂ ಮಳೆ ಬರುತ್ತದೆಯೋ ಎನಿಸುತ್ತದೆ. ನಮ್ಮ ಮನೆ ಸುತ್ತ ಹಾಗೂ ನಮ್ಮ ಭಾಗದಲ್ಲಿ ಎಲ್ಲರೂ ಯುಜಿಡಿ ಸಂಪರ್ಕ ಪಡೆದಿದ್ದೇವೆ. ಇಲ್ಲಿ ಚರಂಡಿ ಮಾಡುವಾಗ ನಮಗೆ ಚರಂಡಿ ಬೇಡ. ಯುಜಿಡಿ ಸಂಪರ್ಕವಿದೆ ಎಂದು ಜನರು ಹೇಳಿದರು. ಆದರೂ ಚರಂಡಿ ನಿರ್ಮಾಣ ವಾಯಿತು. ಮೇಲ್ಭಾಗದ ಲೇಔಟ್‌ಗಳಿಂದ ಬರುವ ಮಳೆ ನೀರು ನಮ್ಮ ಮನೆಗಳಿಗೆ ನುಗ್ಗುತ್ತಿದೆ. ಚರಂಡಿ ಸ್ವಚ್ಛ ನಾವೇ ಮಾಡಿಕೊಳ್ಳುತ್ತೇವೆ ಸಲಕರಣೆ ಕೊಡಿ ಎಂದು ಕೇಳಿದರೂ ಕೊಡಲಿಲ್ಲ. ಕಸ, ಕಡ್ಡಿ ತುಂಬುತ್ತಿದೆ. ಪ್ರತಿ ಮಳೆಗಾಲದಲ್ಲಿಯೂ ಇದೇ ಸಮಸ್ಯೆ.
-ಲಕ್ಷ್ಮಮ್ಮ, ಜೈಭೀಮ್ ನಗರ

ನೀರು ಮನೆಯೊಳಗೆ
ಹಿಂಬದಿಯ ಖಾಲಿ ನಿವೇಶನದಲ್ಲಿ ಹೆಚ್ಚು ನೀರು ನಿಲ್ಲುತ್ತದೆ. ಮನೆಯ ಒಳಗೆ ಸಣ್ಣ ತೂತು ಮಾಡಿದರೆ ನೀರು ಜಿನುಗುತ್ತದೆ. ನೀರು ಮನೆಯೊಳಗೆ ನೀರು ಒಸರುತ್ತಿರುವ ಕಡೆ ಸಿಮೆಂಟ್ ಹಾಕುತ್ತಿದ್ದೇವೆ. ಮಳೆಗಾಲದಲ್ಲಿ ಕಾಯಂ ಆಗಿ ನಮ್ಮ ಮನೆಯೊಳಗೆ ಮಳೆ ನೀರು ಬರುತ್ತದೆ.
-ಖಲೀಲ್ ಅಹಮ್ಮದ್,ಜೈಭೀಮ್ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT