ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಪಾಲನೆಯಿಂದ ಜಯಂತಿಗೆ ಅರ್ಥ

ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಪೀಠಾಧ್ಯಕ್ಷ ಮಂಗಳನಾಥ ಸ್ವಾಮೀಜಿ ಅಭಿಮತ
Last Updated 27 ಜೂನ್ 2019, 17:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕೆಂಪೇಗೌಡರ ಆದರ್ಶ ಮತ್ತು ಸಾಧನೆಗಳನ್ನು ನಾವು ಮೈಗೂಡಿಸಿಕೊಂಡಾಗ ಮಾತ್ರ ಅವರ ಜಯಂತಿ ಆಚರಿಸುವುದಕ್ಕೆ ಒಂದು ಅರ್ಥ ಬರುತ್ತದೆ’ ಎಂದು ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಪೀಠಾಧ್ಯಕ್ಷ ಮಂಗಳನಾಥ ಸ್ವಾಮೀಜಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲಾ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ ಕೆಂಪೇಗೌಡರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಆ ಕಾಲದಲ್ಲಿಯೇ ನೂರಾರು ಕೆರೆಗಳನ್ನು, ದೇವಾಲಯಗಳನ್ನು ಕಟ್ಟಿಸುವ ಜತೆಗೆ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಹೊಂದಿದ್ದ ಅವರನ್ನು ನಾವು ಸದಾ ಸ್ಮರಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ಮಾತನಾಡಿ, ‘15ನೇ ಶತಮಾದಲ್ಲಿ ಎಲ್ಲ ಧರ್ಮ ಮತ್ತು ಜಾತಿಯವರನ್ನು ಪ್ರೀತಿ ಮಾಡುವ ವಿವೇಚನೆ ಹೊಂದಿದ್ದ ಕೆಂಪೇಗೌಡರು ಸಾಮಾಜಿಕ ಪರಿಕಲ್ಪನೆ ಕೊಟ್ಟಿದ್ದರು. ಮುಂದುವರಿದು ಕುವೆಂಪು ಅವರು ವಿಶ್ವ ಮಾನವರಾಗಿ ಎಂದು ಪ್ರತಿಪಾದಿಸಿದರು. ಆದರೆ ಹುಟ್ಟುವಾಗ ವಿಶ್ವ ಮಾನವರಾಗಿರುವ ನಾವು ಬೆಳೆಯುತ್ತಾ ಅಲ್ಪಮಾನವರಾಗುತ್ತೇವೆ. ಜಾತಿಯ ಗುಂಗಿನಲ್ಲಿ ಬಿದ್ದು ಮಾನವೀಯತೆ ಮರೆಯುತ್ತೇವೆ’ ಎಂದು ಹೇಳಿದರು.

‘ಇವತ್ತು ಬೆಂಗಳೂರು ಜನಸಂಖ್ಯೆಯಲ್ಲಿ ಮಾತ್ರವಲ್ಲದೆ ಎಲ್ಲಾ ರಂಗಗಳಲ್ಲಿಯೂ ಅತ್ಯಂತ ವೇಗವಾಗಿ ಮತ್ತು ಬಲಿಷ್ಠವಾಗಿ ಬೆಳೆಯುತ್ತಿದೆ ಎಂದರೆ ಅದರ ಹಿಂದೆ ಕೆಂಪೇಗೌಡರ ದೂರದೃಷ್ಟಿ ಇದೆ. ಆ ಕಾಲದಲ್ಲಿಯೇ ಅವರು ಬೆಂಗಳೂರಿನಲ್ಲಿ ವೃತ್ತಿಗೆ ಅನುಗುಣವಾಗಿ ಪೇಟೆಗಳನ್ನು ನಿರ್ಮಿಸಿದ್ದರು. ನೂರಾರು ಕೆರೆಗಳನ್ನು ಕಟ್ಟಿಸಿ ಪರಿಸರ ಪ್ರೇಮ ಮೆರೆದಿದ್ದರು. ಇವತ್ತು ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ತಿಳಿಸಿದರು.

‘ಇತ್ತೀಚೆಗೆ ನಾವು ಪ್ರಕೃತಿಯನ್ನು ಹಂತ ಹಂತವಾಗಿ ನಾಶ ಮಾಡಿ ಅದರ ವಿಕೋಪಕ್ಕೆ ತುತ್ತಾಗುತ್ತಿದ್ದೇವೆ. ಇದನ್ನು ಈಗಲೇ ಸರಿ ಮಾಡದೆ ಹೋದರೆ ಮುಂದಿನ ತಲೆಮಾರುಗಳಿಗೆ ಭೂಮಿ ಸುರಕ್ಷಿತವಾಗಿರುವುದಿಲ್ಲ. ಮನುಷ್ಯನಿಗೆ ವಾಸ ಯೋಗ್ಯವಾಗಿರುವ ಜಾಗ ಇದ್ದರೆ ಅದು ಭೂಮಿ ಮಾತ್ರ. ಆದ್ದರಿಂದ ಅದನ್ನು ನಾವು ತಾಯಿಗಿಂತ ಹೆಚ್ಚಾಗಿ ಪ್ರೀತಿಸಬೇಕಿದೆ’ ಎಂದರು.

‘ಬೆಂಗಳೂರಿನ 120ಕ್ಕೂ ಹೆಚ್ಚು ಕೆರೆಗಳು ಕಲುಷಿತವಾಗಿವೆ. ಕೆಲ ಕೆರೆ ಮತ್ತು ರಾಜಕಾಲುವೆಗಳನ್ನು ಒತ್ತುವರಿ ಮಾಡಿ ಕಟ್ಟಗಳನ್ನು ನಿರ್ಮಾಣ ಮಾಡಿದ್ದಾರೆ. ಇಂತಹದ್ದೇ ವಿದ್ಯಮಾನ ಅನೇಕ ನಗರಗಳಲ್ಲಿ ನಡೆಯುತ್ತಿದೆ. ನದಿ, ಕೆರೆ ಹಾಗೂ ಪರಿಸರ ರಕ್ಷಣೆಗೆ ಮುಂದಿನ ದಿನಗಳಲ್ಲಿ ಗಟ್ಟಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳನ್ನು ಹಾಗೂ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ರೈತರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಸಂಗಪ್ಪ ಉಪಾಸೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಆರ್.ನಾರಾಯಣಸ್ವಾಮಿ, ಕಾರ್ಯದರ್ಶಿ ಚನ್ನಪ್ಪರೆಡ್ಡಿ, ಡಿವೈಎಸ್.ಪಿ ಪ್ರಭುಶಂಕರ್, ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT