ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಅರಿತರೆ ಆಚರಣೆಗೆ ಅರ್ಥ

ಜಚನಿ ಕಾಲೇಜಿನಲ್ಲಿ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಕಿವಿಮಾತು
Last Updated 8 ಮಾರ್ಚ್ 2020, 13:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಪ್ರತಿಯೊಬ್ಬ ಹೆಣ್ಣು ಮಗಳಲ್ಲಿ ಅಗಾಧ ಶಕ್ತಿ, ಸಾಮರ್ಥ್ಯವಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳದೆ ಹೋದರೆ ಮಹಿಳಾ ದಿನಾಚರಣೆ ಆಚರಿಸುವುದರಲ್ಲಿ ಅರ್ಥವಿಲ್ಲ. ಆದ್ದರಿಂದ, ಹೆಣ್ಣು ಮಕ್ಕಳು ತಮ್ಮೊಳಗಿನ ಶಕ್ತಿ ಅರಿತು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಹೇಳಿದರು.

ನಗರದ ಜಚನಿ ಕಾಲೇಜಿನಲ್ಲಿ ಭಾನುವಾರ ಅಲೆಮಾರಿ ಬುಡಕಟ್ಟು ಮಹಾಸಭಾ ಸಹಯೋಗದಲ್ಲಿ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದು ಶ್ಲಾಘನೀಯ. ಹೆಣ್ಣು, ಗಂಡು ದೇವರ ಸೃಷ್ಟಿ, ಹೀಗಾಗಿ ಲಿಂಗ ತಾರತಮ್ಯ ಮಾಡಬಾರದು. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕಿದೆ. ವೇದಗಳ ಕಾಲದಿಂದಲೂ ದೇಶದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನ ನೀಡಿದ್ದರೂ, ಇಂದಿಗೂ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ಬದುಕಿನ ಸಂಕಷ್ಟಗಳನ್ನು ಸಶಕ್ತವಾಗಿ ಎದುರಿಸುವ ಮಹಿಳೆಯರನ್ನು ಪುರಸ್ಕರಿಸುವ ಔದಾರ್ಯ ನಮ್ಮದಾಗಬೇಕು’ ಎಂದು ತಿಳಿಸಿದರು.

‘ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ದಾಪುಗಾಲು ಹಾಕಿ ಪ್ರತಿಭೆ ಮೆರೆಯುತ್ತಿದ್ದರೂ ಎಲ್ಲೋ ಒಂದು ಕಡೆ ತುಳಿತಕ್ಕೆ ಒಳಗಾಗಿದ್ದು, ಅದನ್ನು ಮೀರಿ ಹೊರಬರುವ ಶಕ್ತಿ ಮಹಿಳೆಯರಿಗೆ ಇದೆ. ಸಾಧನೆ ಮಾಡುವ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಪ್ರತಿ ಮನೆಯಲ್ಲಿಯೂ ಚಿಕ್ಕವಯಸ್ಸಿನಿಂದಲೇ ಗಂಡು, ಹೆಣ್ಣೆಂಬ ತಾರತಮ್ಯ ಮೂಲಕ ಹೆಣ್ಣಿನ ಶಕ್ತಿ ಕುಗ್ಗಿಸುವ ಕಾರ್ಯ ನಡೆಯುತ್ತಿದೆ. ಅದನ್ನು ಮೆಟ್ಟಿ ನಿಂತು ಮಹಿಳೆಯರು ತಮ್ಮಿಂದ ಎಲ್ಲವೂ ಸಾಧ್ಯ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

‘ಸಮಾಜದ ಎಲ್ಲ ರಂಗಗಳಲ್ಲೂ ಮಹಿಳೆಯರು ಅಪಾರವಾದ ಕೊಡುಗೆ ನೀಡುತ್ತಿದ್ದು, ಸೇನೆಗೆ ಸೇರಿ ಗಡಿಭಾಗದ ಕೊರೆಯುವ ಶೀತ ವಲಯದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ನೌಕಾದಳ, ವಾಯುದಳದಲ್ಲಿಯೂ ತಮ್ಮ ಛಾಪು ಮೂಡಿಸಿ ನಾಯಕತ್ವ ಹೊಂದಿರುವುದು ಹೆಮ್ಮೆಯ ವಿಚಾರವಾಗಿದೆ. ಯುವಜನರು ಬದ್ಧತೆ, ಛಲದಿಂದ ಉನ್ನತ ವ್ಯಾಸಂಗ ಮಾಡುವ ಮೂಲಕ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಂದೆ ಸಾಗಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಎಂ.ವಿ.ಉಷಾದೇವಿ ಅವರು ‘ಮಹಿಳಾ ಸಬಲೀಕರಣ ಚಾರಿತ್ರಿಕ ವಿಶ್ಲೇಷಣೆ’, ಬಾಗೇಪಲ್ಲಿಯ ವಕೀಲ ಎ.ಜಿ.ಸುಧಾಕರ್ ಅವರು ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ ತಡೆ ಮತ್ತು ಸಂರಕ್ಷಣೆ, ‘ಜನ ಕಲಾರಂಗ’ ನಿರ್ದೇಶಕ ಎ.ವಿ.ವೆಂಕಟರಮಣ ಅವರು ‘ಮಹಿಳಾ ದಿನಾಚರಣೆ ಉಗಮ ಮತ್ತು ಪ್ರಸಕ್ತ ಸ್ಥಿತಿಗತಿ’ ಎಂಬ ವಿಷಯ ಕುರಿತು ಮಾತನಾಡಿದರು.

ಶಿಕ್ಷಕಿಯರಾದ ಎ.ಆರ್.ಶಶಿಕಲಾ, ಎಸ್.ಕೆ.ಸಾವಿತ್ರಮ್ಮ, ಕಲಾವಿದೆ ಪಾರ್ವತಮ್ಮ, ಎಚ್.ಕ್ರಾಸ್ ಪಿಡಿಒ ನಾಗಮಣಿ, ಅಂಗನವಾಡಿ ಕಾರ್ಯಕರ್ತೆ ಇಬ್ರತ್ ಉನ್ನೀಸಾ, ಆಶಾ ಕಾರ್ಯಕರ್ತೆ ಎಸ್.ಟಿ.ಸುಜಾತಾ, ಹೋರಾಟಗಾರ್ತಿ ಬಿ.ಮಧುಲತಾ, ಶಿಕ್ಷಣ ಕ್ಷೇತ್ರದ ಸಾಧಕಿಯರಾದ ಡಿ.ಎ.ಮಂಜುಳಾ, ಎ.ಉಷಾರಾಣಿ, ಎಸ್.ವಿ.ವೈಷ್ಣವಿ ಅವರನ್ನು ಸನ್ಮಾನಿಸಲಾಯಿತು.

ಜಚನಿ ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ಶಿವಜ್ಯೋತಿ, ನಗರಸಭಾ ಸದಸ್ಯರಾದ ಅಂಬಿರಾ, ಸುಮಾ ಶಶಿಕುಮಾರ್, ಹಕ್ಕಿಪಿಕ್ಕಿ ಸಮುದಾಯ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಜಗದೀಶ್, ಮುಖಂಡರಾದ ಜೆ.ಶ್ರೀನಿವಾಸಪ್ಪ, ಜಿ.ಚಂದ್ರಶೇಖರ್, ಬಿ.ಎನ್.ನರಸಿಂಹಮೂರ್ತಿ, ಎಸ್.ವಿ.ಗಂಗಾಧರಪ್ಪ, ನಾರಾಯಣಸ್ವಾಮಿ, ಅಶ್ವತ್ಥಪ್ಪ, ಶಂಕರಪ್ಪ, ಮಂಜುನಾಥ್, ಜಚನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ್, ಉಪಪ್ರಾಂಶುಪಾಲ ಎನ್.ಗಂಗಾಧರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT