ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ | ಕಳೆಗಟ್ಟಿದ ಕ್ಯಾಮೇನಹಳ್ಳಿ ಜಾತ್ರೆ

ಎ.ಆರ್. ಚಿದಂಬರ
Published 18 ಜನವರಿ 2024, 5:56 IST
Last Updated 18 ಜನವರಿ 2024, 5:56 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನ ಕ್ಯಾಮೇನಹಳ್ಳಿ ಆಂಜನೇಯ ದನಗಳ ಜಾತ್ರೆ ಎರಡು ದಿನಗಳಿಂದ ಕಳೆಗಟ್ಟಿದ್ದು, ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ರಾಸುಗಳು ಬಂದು ಸೇರುತ್ತಿವೆ.

ತಾಲ್ಲೂಕಿನ ಹೊಳವನಹಳ್ಳಿಗೆ ಸೇರುವ ಕ್ಯಾಮೇನಹಳ್ಳಿ ದನಗಳ ಜಾತ್ರೆ ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಆಸುಪಾಸಿನಲ್ಲಿ ನಡೆಯುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಸುಗಳನ್ನು ಖರೀದಿಸಲು, ಮಾರಾಟ ಮಾಡಲು ನೂರಾರು ಜನರು ಈ ಜಾತ್ರೆಗೆ ಬರುತ್ತಾರೆ. ಮೂರ್ನಾಲ್ಕು ವರ್ಷಗಳಿಂದ ಕೋವಿಡ್‌ನಿಂದ ಕಳೆಗುಂದಿದ್ದ ಜಾತ್ರೆ, ಈ ಬಾರಿ ಮತ್ತೆ ಕಳೆಗಟ್ಟಿದೆ.

₹25 ಸಾವಿರದಿಂದ ಹಿಡಿದು ₹3 ಲಕ್ಷ ಬೆಲೆ ಮೌಲ್ಯದ ರಾಸುಗಳು ಜಾತ್ರೆಯಲ್ಲಿವೆ. ಆದಾಗ್ಯೂ ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಬರುವ ಉತ್ತಮ ತಳಿ ರಾಸುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಜಾತ್ರೆಯ ಈ ಹಿಂದಿನ ವೈಭವ ಇಲ್ಲವಾಗಿದೆ.

ಜಾತ್ರೆಯಲ್ಲಿ ಹಳ್ಳಿಕಾರ್ ತಳಿ ರಾಸುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಮೃತ್ ಮಹಲ್ ಜಾತಿಯ ಹೋರಿ ವಿರಳವಾಗಿ ಕಾಣಸಿಗುತ್ತವೆ.

ಬಳ್ಳಾರಿ, ದಾವಣಗೆರೆ, ಹೂವಿನಹಡಗಲಿ, ರಾಯಚೂರು, ಬಿಜಾಪುರ, ಹುಬ್ಬಳ್ಳಿ, ದಾರವಾಡ, ವಿಜಯಪುರ, ಕಲಬುರಗಿ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ರಾಸುಗಳ ಖರೀದಿಗೆ ರೈತರು ಈ ಜಾತ್ರೆಗೆ ಬರುತ್ತಾರೆ.

ಸಂಕ್ರಾಂತಿ ಮಾರನೇ ದಿನದಿಂದ ದನಗಳ ಜಾತ್ರೆ ಪ್ರಾರಂಭಗೊಂಡಿದೆ. ಜಾತ್ರೆ ತುಂಬೆಲ್ಲಾ ಉತ್ತರ ಕರ್ನಾಟಕ ಭಾಗದ ರೈತರು ಉತ್ತಮ ರಾಸು ಕೊಳ್ಳಲು ಓಡಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ದನಗಳು ಬರಲಿವೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಘಾಟಿ ಜಾತ್ರೆಗೆ ಹೋಲಿಕೆ ಮಾಡಿದರೆ ಈ ಜಾತ್ರೆಯ ದನಗಳ ಬೆಲೆ ತುಸು ಹೆಚ್ಚಾಗಿದೆ. ಅಲ್ಲಿ ₹50 ಸಾವಿರ ಇದ್ದ ಬೆಲೆ ಈ ಜಾತ್ರೆಯಲ್ಲಿ ₹75ರಿಂದ 80 ಸಾವಿರ ನಿಗದಿಯಾಗುತ್ತಿವೆ ಎಂದು ಸಿರಗುಪ್ಪದಿಂದ ರಾಸು ಖರೀದಿಗೆ ಬಂದಿದ್ದ ರೈತ ಸಂಗಪ್ಪ ಹೇಳಿದರು.

ಹಳ್ಳಿಕಾರ್ ತಳಿಯ ಜೋಡೆತ್ತುಗಳಿಗೆ ₹80 ಸಾವಿರದಿಂದ ₹4 ಲಕ್ಷದವರೆಗೆ ಬೆಲೆ ಇದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ರಾಸುಗಳನ್ನು ಸಾಕುವುದು ಕಷ್ಟವಾಗುತ್ತಿದೆ. ಸಕಾಲದಲ್ಲಿ ಮಳೆ-ಬೆಳೆಯಾಗದೆ ಮೇವಿನ ಕೊರತೆ ಹೆಚ್ಚಾಗಿದೆ. ವ್ಯವಸಾಯಕ್ಕೆ ಎತ್ತುಗಳ ಅವಲಂಬನೆ ಕಡಿಮೆಯಾಗುತ್ತಿದೆ. ಎತ್ತುಗಳ ಜಾಗವನ್ನು ಯಂತ್ರಗಳು ಆಕ್ರಮಿಸಿಕೊಂಡಿವೆ. ಯುವಕರಿಗೆ ರಾಸುಗಳ ಸಾಕಾಣಿಕೆಯಲ್ಲಿ ಆಸಕ್ತಿಯಿಲ್ಲ. ಅಪ್ಪನ ಕಾಲದಿಂದಲೂ ಹಳ್ಳಿಕಾರ್ ತಳಿಯ ಎತ್ತುಗಳನ್ನು ಸಾಕಿ ಈ ಜಾತ್ರೆಯಲ್ಲಿ ಮಾರಾಟ ಮಾಡುತ್ತಿದ್ದೆವು. ಈ ಸಂಸ್ಕೃತಿ ಬಹುಶಃ ನನ್ನ ತಲೆಮಾರಿಗೆ ಕೊನೆಯಾಗುತ್ತದೆ’ ಎನ್ನುತ್ತಾರೆ ರೈತ ದೊಡ್ಡಪಾಳ್ಯದ ಜಗಣ್ಣ.

ವ್ಯವಸಾಯಕ್ಕೆ ಉತ್ತಮ

ಈ ಭಾಗದ ಜಾನುವಾರುಗಳು ವ್ಯವಸಾಯಕ್ಕೆ ಉತ್ತಮವಾಗಿರುತ್ತವೆ. ಹಾಗಾಗಿ ನಮ್ಮ ಕಡೆಯಿಂದ 25 ಮಂದಿ ಈ ಜಾತ್ರೆಗೆ ಬಂದಿದ್ದೇವೆ. ಉತ್ತಮ ದನಕ್ಕಾಗಿ ಹುಡುಕುತ್ತಿದ್ದೇವೆ. ಒಮ್ಮೆ ಖರೀದಿಸಿದರೆ ಐದಾರು ವರ್ಷ ಬೇಸಾಯ ಮಾಡುತ್ತೇವೆ. ಕೆಲವೊಮ್ಮೆ ಹತ್ತು ವರ್ಷವಾದರೂ ಮಾರಾಟ ಮಾಡುವುದಿಲ್ಲ - ದುರ್ಗಪ್ಪ, ಸಿರಿಗೇರಿ, ಬಳ್ಳಾರಿ

ಜೋರು ಜಾತ್ರೆ

ಜಾತ್ರೆ ತುಂಬಾ ಜೋರು ಇದೆ. ಘಾಟಿ ಜಾತ್ರೆಗಿಂತ ಇಲ್ಲಿ ಹೆಚ್ಚು ಬೆಲೆ ಇದೆ. ಈ ಜಾತ್ರೆಯಲ್ಲಿ ವ್ಯಾಪಾರ ತುಸು ಹೆಚ್ಚಾಗಿದೆ. ಒಳ್ಳೆಯ ಮಾಲು ಜಾತ್ರಿಗೆ ಬಂದಿದೆ- ರಾಮಾಂಜಪ್ಪ, ಸಿರಗುಪ್ಪ

ಪೋಷಿಸುವವರೇ ಇಲ್ಲ

ನಮ್ಮ ಭಾಗದ ನಾಟಿ ದನಕ್ಕೆ ಬೇರೆ ಕಡೆ ಹೆಚ್ಚು ಬೇಡಿಕೆ ಇದೆ. ಆದರೆ ಅವುಗಳನ್ನು ಪೋಷಿಸಿ, ನಿರ್ವಹಿಸುವವರೆ ಇಲ್ಲ. ಹಳ್ಳಿಗಾಡಿನಲ್ಲಿ ದನಕರು ಕಟ್ಟುವವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಮೊದಲು ಗ್ರಾಮದ ಪ್ರತಿ ಮನೆಯಲ್ಲೂ ಕನಿಷ್ಠ ಒಂದು ಹಳ್ಳಿಕಾರ್ ಜೋಡೆತ್ತು ಇರುತ್ತಿದ್ದವು. ಈಗ ಆ ಜಾಗವನ್ನು ಸೀಮೆ ಹಸುಗಳು ಆಕ್ರಮಿಸಿಕೊಂಡಿವೆ. ಹಾಲು ಉತ್ಪಾದನೆ ದೃಷ್ಟಿಯಿಂದ ಸೀಮೆ ಹಸುಗಳನ್ನು ಕಟ್ಟುವವರ ಸಂಖ್ಯೆ ಜಾಸ್ತಿಯಾಗಿದೆ - ಶಿವರುದ್ರಮೂರ್ತಿ, ಶೀಥಕಲ್ಲು, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT