ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಸರ್ಕಾರಿ ಕಚೇರಿಗಳಲ್ಲಿ ಮೂಲ ಸೌಕರ್ಯ ಕೊರತೆ

Published 29 ಜನವರಿ 2024, 7:19 IST
Last Updated 29 ಜನವರಿ 2024, 7:19 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದೆ. ಇಡೀ ತಾಲ್ಲೂಕಿನಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ, ಚರಂಡಿ, ದೀಪ ಮತ್ತಿತರ ಸೌಲಭ್ಯಗಳನ್ನು ಒದಗಿಸುವ ಹಾಗೂ ಮೇಲ್ವಿಚಾರಣೆ ಮಾಡುವ ತಾಲ್ಲೂಕು ಆಡಳಿತ ಭವನ, ತಾಲ್ಲೂಕು ಪಂಚಾಯಿತಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಲ್ಲೇ ಸಾರ್ವಜನಿಕರಿಗೆ ಮೂಲ ಸೌಕರ್ಯಗಳಿಲ್ಲ.

ಇಡೀ ಜಿಲ್ಲೆಯಲ್ಲಿ ಪ್ರಥಮವಾಗಿ ನಗರದಲ್ಲಿ ತಾಲ್ಲೂಕು ಆಡಳಿತ ಭವನ (ಮಿನಿ ವಿಧಾನಸೌಧ) ನಿರ್ಮಾಣವಾಗಿತ್ತು. ತಾಲ್ಲೂಕು ಆಡಳಿತ ಭವನದಲ್ಲಿ ತಾಲ್ಲೂಕು ಕಚೇರಿ, ಉಪಖಜಾನೆ, ಉಪ ನೋಂದಣಾಧಿಕಾರಿ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಭೂದಾಖಲೆಗಳು ಮತ್ತು ಭೂಮಾಪನಾ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ.

ಈ ಕಚೇರಿಗೆ ಪ್ರತಿನಿತ್ಯ ನೂರಾರು ಜನರು ಕೆಲಸ ಕಾರ್ಯಗಳಿಗಾಗಿ ಭೇಟಿ ನೀಡುತ್ತಾರೆ. ಸಾರ್ವಜನಿಕರು, ಸಂಘಸಂಸ್ಥೆಗಳು ಮನವಿ ಸಲ್ಲಿಸುವುದು, ಪ್ರತಿಭಟನೆ, ಧರಣಿ, ಹೋರಾಟಗಳನ್ನು ಕಚೇರಿಯ ಮುಂದೆ ಮಾಡುತ್ತಾರೆ. ಕಚೇರಿಗಳಲ್ಲಿ ಮೂಲಸೌಲಭ್ಯದ ಕೊರತೆ ಇರುವುದು ಎದ್ದು ಕಾಣುತ್ತದೆ. ಮುಖ್ಯವಾಗಿ ಶೌಚಾಲಯ, ವಾಹನಗಳ ನಿಲುಗಡೆಗೆ ಸಮಸ್ಯೆ, ಕುಡಿಯುವ ನೀರಿನ ಅಲಭ್ಯತೆ, ಅಸಮರ್ಪಕ ವಿದ್ಯುತ್ ವ್ಯವಸ್ಥೆಯಂತಹ ಸಮಸ್ಯೆಗಳನ್ನು ಸಾರ್ವಜನಿಕರು ಹಾಗೂ ಕಚೇರಿಯ ಸಿಬ್ಬಂದಿ ಸಹ ಎದುರಿಸಬೇಕಾಗಿದೆ.

ಅಂಗವಿಕಲರಿಗೆ ರ‍್ಯಾಂಪ್, ಲಿಫ್ಟ್ ಅಳವಡಿಸಿಲ್ಲ. ಆಹಾರ ಇಲಾಖೆಯ ಕಚೇರಿ, ಭೂದಾಖಲೆಗಳ ಕಚೇರಿ, ಆರ್‌ಆರ್‌ಟಿ, ಚುನಾವಣಾ ಶಾಖೆ ಸೇರಿದಂತೆ ಕಂದಾಯ ಇಲಾಖೆಯ ಕೆಲವು ವಿಭಾಗಗಳಿಗೆ ಅಂಗವಿಕಲರು, ಹಿರಿಯ ನಾಗರಿಕರು, ಮಹಿಳೆಯರು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕಾಗುತ್ತದೆ.

ಕಚೇರಿಗೆ ಬರುವ ಅಧಿಕಾರಿಗಳ, ಸಾರ್ವಜನಿಕರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇಲ್ಲ. ಕಚೇರಿ ಒಳಗೆ ಹೋಗಲು ಸಾಧ್ಯವಾಗದಂತೆ ಅಡ್ಡಾದಿಡ್ಡಿಯಾಗಿ ದ್ವಿಚಕ್ರವಾಹನಗಳನ್ನು ನಿಲುಗಡೆ ಮಾಡಿರುತ್ತಾರೆ. ಕಚೇರಿ ಮುಂದೆ ರಸ್ತೆಯಲ್ಲೂ ಪಾದಾಚಾರಿ ಮಾರ್ಗವನ್ನು ದ್ವಿಚಕ್ರವಾಹನಗಳು ಆಕ್ರಮಿಸಿಕೊಂಡಿರುತ್ತವೆ.

ಲಕ್ಷಾಂತರ ಖರ್ಚು ಮಾಡಿ ಸ್ಥಾಪಿಸಿರುವ ಶುದ್ಧ ನೀರಿನ ಘಟಕ ತುಕ್ಕು ಹಿಡಿಯುತ್ತಿದೆ. ತಾಲ್ಲೂಕು ಆಡಳಿತಭವನದಲ್ಲಿ ಸ್ಥಾಪಿಸಿರುವ ಶುದ್ಧ ನೀರಿನ ಘಟಕದಿಂದ ಒಂದು ಗ್ಲಾಸ್ ನೀರನ್ನು ಪಡೆದಿಲ್ಲ. ಈಗ ತುಕ್ಕು ಹಿಡಿದಿದೆ ಎಂದು ರೈತ ಮುಖಂಡ ಶಿವಾನಂದ ದೂರುತ್ತಾರೆ.

5-6 ಕಚೇರಿಗಳು ಕಾರ್ಯನಿರ್ವಹಿಸುತ್ತಿರುವ ಕಟ್ಟಡದಲ್ಲಿ ನೀರು, ಶೌಚಾಲಯವಿಲ್ಲ. ಕೆಲವೆಡೆ ಶೌಚಾಲಯವೇ ಇಲ್ಲ, ಕೆಲವು ಕಡೆ ಸಿಬ್ಬಂದಿಗಾಗಿ ಒಂದೆರಡು ಶೌಚಾಲಯವಿದ್ದರೂ ನಿರ್ವಹಣೆ ಇಲ್ಲದೆ ದುರ್ವಾಸನೆಯಿಂದ ಬಳಸಲು ಯೋಗ್ಯವಾಗಿಲ್ಲ. ಕಚೇರಿಯ ಸಿಬ್ಬಂದಿ ಶೌಚಾಲಯಕ್ಕಾಗಿ ಹೊರಗಡೆ ಹೋಗಬೇಕಾಗಿದೆ. ಕಟ್ಟಡದ ಸುತ್ತಲೂ ಸ್ವಚ್ಛತೆಯೂ ಮರೀಚಿಕೆಯಾಗಿದೆ.

ತಾಲ್ಲೂಕು ಪಂಚಾಯಿತಿ ಕಚೇರಿಗಾಗಿ ನೂತನವಾಗಿ ಸಾಮರ್ಥ್ಯಸೌಧ ನಿರ್ಮಾಣವಾಗಿದ್ದರೂ ಅಗತ್ಯ ಸೌಲಭ್ಯಗಳಿಲ್ಲ. ಕ್ಷೇತ್ರದ ಸಚಿವ ಡಾ.ಎಂ.ಸಿ ಸುಧಾಕರ್ 2004 ಮತ್ತು 2008 ರಲ್ಲಿ ಶಾಸಕರಾಗಿದ್ದಾಗ ಹಲವಾರು ಸರ್ಕಾರಿ ಕಚೇರಿಗಳಿಗೆ ಒಂದೇ ಸೂರಿನಡಿ ಅವಕಾಶ ಮಾಡಿಕೊಡುವುದು, ತಾಲ್ಲೂಕು ಪಂಚಾಯಿತಿ ಸಭಾಂಗಣಕ್ಕೆ ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣ ಮಾಡುವ ಕನಸನ್ನು ಕಂಡು ವಿನ್ಯಾಸ ಮಾಡಿಸಿದ್ದರು. ಸುಮಾರು ₹5 ಕೋಟಿ ಅಂದಾಜು ವೆಚ್ಚ ಪಟ್ಟಿಯನ್ನು ಮಾಡಿಸಿದ್ದರು. ಕಾಮಗಾರಿಯು ಆರಂಭವಾಗಿತ್ತು. 2013 ಚುನಾವಣೆಯಲ್ಲಿ ಅವರು ಸೋತ ನಂತರ ಕಾಮಗಾರಿ ನನೆಗುದಿಗೆ ಬಿದ್ದಿತ್ತು.

ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲೂ ಸೂಕ್ತವಾದ ಮೂಲ ಸೌಲಭ್ಯಗಳಿಲ್ಲ. ಬಹುಮುಖ್ಯವಾಗಿ ನೀರು ಮತ್ತು ಶೌಚಾಲಯವಿಲ್ಲ. ಕಚೇರಿಯ ಒಳಗಡೆ ಸಿಬ್ಬಂದಿಗಾಗಿ ಒಂದೆರಡು ಶೌಚಾಲಯಗಳಿದ್ದರೂ ಕಳಪೆ ಕಾಮಗಾರಿಯಿಂದ ಹಾಳಾಗಿವೆ. ಸಾರ್ವಜನಿಕರು ಆವರಣದ ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ ಎಂದು ಹಿರಿಯ ನಾಗರಿಕ ನಾಗರಾಜ್ ಹೇಳುತ್ತಾರೆ.

ತಾಲ್ಲೂಕು ಸಮಾಜಕಲ್ಯಾಣ ಇಲಾಖೆ ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಕಚೇರಿ ಸಹ ಮಹಡಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅಂಗವಿಕಲರು, ಹಿರಿಯ ನಾಗರಿಕರು, ಮಹಿಳೆಯರು ಮೆಟ್ಟಿಲು ಹತ್ತಿ ಹೋಗಬೇಕು.

ರೇಷ್ಮೆಗೂಡಿನ ಮಾರುಕಟ್ಟೆ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಿರಿಯ ತೋಟಗಾರಿಕ ನಿರ್ದೇಶಕರ ಕಚೇರಿ, ಎಆರ್‌ಟಿಒ ಕಚೇರಿ, ಅಬಕಾರಿ ಕಚೇರಿಗಳು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳು ಮೂಲಸೌಕರ್ಯಗಳಿಲ್ಲದೆ ಸೊರಗುತ್ತಿವೆ. ಕಚೇರಿ ಸಿಬ್ಬಂದಿ ಮತ್ತು ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ನಿತ್ಯಕರ್ಮಗಳಿಗೆ ಪರದಾಡುವಂತಾಗಿದೆ ಎನ್ನುತ್ತಾರೆ ರೈತ ನರಸಿಂಹಮೂರ್ತಿ.

ತಾಲ್ಲೂಕು ಆಡಳಿತಭವದಲ್ಲಿ ಸ್ಥಾಪಿಸಿರುವ ಶುದ್ಧ ನೀರಿನ ಘಟಕ ಕೆಟ್ಟು ತುಕ್ಕು ಹಿಡಿಯುತ್ತಿದೆ. ಇಲ್ಲಿನ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ನೀರಿಲ್ಲದೆ ಪರದಾಡಬೇಕಿದೆ. ಪ್ರತಿನಿತ್ಯ ಮನೆಯಿಂದ ನೀರು ಹೊತ್ತು ತರಬೇಕಿದೆ. ಶುದ್ಧ ನೀರಿನ ಘಟಕವನ್ನು ರಿಪೇರಿ ಮಾಡಿಸಿ ಬಳಕೆ ಆಗುವಂತೆ ಮಾಡಬೇಕು ಎನ್ನುತ್ತಾರೆ  ಮಹಿಳಾ ಸಿಬ್ಬಂದಿ.ವಿವಿಧ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರು ಶೌಚಾಲಯಕ್ಕೆ ಅಲೆಯಬೇಕಾಗಿದೆ. ಸರ್ಕಾರಿ ಕಚೇರಿಗಳಲ್ಲೂ ಸಮರ್ಪಕವಾದ ಶೌಚಾಲಯ ವ್ಯವಸ್ಥೆ ಮಾಡಿ ಸ್ವಚ್ಛತೆ ಕಾಪಾಡಬೇಕು ಲಕ್ಷ್ಮಣಮೂರ್ತಿ ನಾಗರಿಕ

ಚಿಂತಾಮಣಿಯ ತಾಲ್ಲೂಕು ಆಡಳಿತಭವನ
ಚಿಂತಾಮಣಿಯ ತಾಲ್ಲೂಕು ಆಡಳಿತಭವನ
ಚಿಂತಾಮಣಿಯ ತಾಲ್ಲೂಕು ಪಂಚಾಯಿತಿ ಆವರಣ ಗೋಡೆಗೆ ಮೂತ್ರ ವಿಸರ್ಜನೆ ಮಾಡುತ್ತಿರುವ ನಾಗರಿಕ
ಚಿಂತಾಮಣಿಯ ತಾಲ್ಲೂಕು ಪಂಚಾಯಿತಿ ಆವರಣ ಗೋಡೆಗೆ ಮೂತ್ರ ವಿಸರ್ಜನೆ ಮಾಡುತ್ತಿರುವ ನಾಗರಿಕ
ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರಿಗೆ ಮೂಲ ಸೌಲಭ್ಯವೇ ಇಲ್ಲ. ಯಾವುದೇ ಕಚೇರಿಯಲ್ಲಿ ಲಿಫ್ಟ್ ಅಥವಾ ರ‍್ಯಾಂಪ್‌ ಇಲ್ಲ. ಆಯಾಸದಿಂದ ಮೆಟ್ಟಿಲು ಹತ್ತಿಹೋಗಬೇಕಾಗಿದೆ.
ಕೃಷ್ಣಮೂರ್ತಿ ಅಂಗವಿಕಲ
ತಾಲ್ಲೂಕು ಆಡಳಿತಭವನ ಕಟ್ಟಡ ಹಳೆಯದಾಗಿದೆ. ಅಂಗವಿಕಲರಿಗೆ ಸೌಲಭ್ಯ ಕಲ್ಪಿಸಲು ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು
ಸುದರ್ಶನ ಯಾದವ್ ತಹಶೀಲ್ದಾರ್
ವಿವಿಧ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರು ಶೌಚಾಲಯಕ್ಕೆ ಅಲೆಯಬೇಕಾಗಿದೆ. ಸರ್ಕಾರಿ ಕಚೇರಿಗಳಲ್ಲೂ ಸಮರ್ಪಕವಾದ ಶೌಚಾಲಯ ವ್ಯವಸ್ಥೆ ಮಾಡಿ ಸ್ವಚ್ಛತೆ ಕಾಪಾಡಬೇಕು
ಲಕ್ಷ್ಮಣಮೂರ್ತಿ ನಾಗರಿಕ
ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯಸೌಧದ ಕಟ್ಟಡ ಇನ್ನೂ ಅಪೂರ್ಣವಾಗಿದೆ. ಕಾಮಗಾರಿ ಪೂರ್ಣವಾದ ನಂತರ ಎಲ್ಲ ಸೌಲಭ್ಯಗಳ ವ್ಯವಸ್ಥೆ ಆಗುತ್ತದೆ.
ಎಸ್.ಆನಂದ್ ತಾ.ಪಂ.ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT