ಬುಧವಾರ, ಮಾರ್ಚ್ 3, 2021
19 °C

ಪ್ರಜಾವಾಣಿ ಫಲಶ್ರುತಿ | ಕೆಎಸ್‌ಟಿಡಿಸಿ ಮದ್ಯ ಕಳ್ಳತನ: ಉಗ್ರಾಣಾಧಿಕಾರಿ ಅಮಾನತು

ಈರಪ್ಪ ಹಳಕಟ್ಟಿ  Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟದಲ್ಲಿರುವ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ‘ಮಯೂರ ಫೈನ್‌ಟಾಪ್‌’ ಹೋಟೆಲ್‌ನಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಮದ್ಯ ಕಳ್ಳತನ ಮಾಡಿದ ಉಗ್ರಾಣ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಹೋಟೆಲ್‌ನ ಮದ್ಯ ದಾಸ್ತಾನಿನಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ 300 ಎಂ.ಎಲ್‌ ಸಾಮರ್ಥ್ಯದ 21 ಮದ್ಯದ ಟಿನ್‌ಗಳು ಕಾಣೆಯಾಗಿರುವ ಬಗ್ಗೆ ‘ಪ್ರಜಾವಾಣಿ’ ಭಾನುವಾರ (ಮೇ 3) ‘ಕೋತಿ ಕೊರಳಿಗೆ ಮದ್ಯದ ಗೋಲ್ ಮಾಲ್’ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.

ವರದಿ ಪ್ರಕಟವಾದ ಬೆನ್ನಲ್ಲೇ ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಅವರು ‘ಮಯೂರ ಫೈನ್‌ಟಾಪ್‌’ ಹೋಟೆಲ್‌ನ ಉಗ್ರಾಣ ಅಧಿಕಾರಿ ಜಯಭೀಮಾ ಅವರನ್ನು ಅಮಾನತು ಮಾಡಿದ್ದಾರೆ.

‘ಮಯೂರ ಫೈನ್‌ಟಾಪ್‌’ ಹೋಟೆಲ್‌ನ ಉಗ್ರಾಣದಿಂದ ಅಕ್ರಮವಾಗಿ ಟಿನ್ ಗಳನ್ನು ಕದ್ದು ಹೊರಗೆ ಸಾಗಿಸಿದ ಬಗ್ಗೆ ಉಗ್ರಾಣ ಅಧಿಕಾರಿ ಜಯಭೀಮಾ ಅವರು ತಪ್ಪು ಒಪ್ಪಿಕೊಂಡು, ಕದ್ದ ಮದ್ಯದ ಮೌಲ್ಯವನ್ನು ಅವರು ಪಾವತಿಸಿದ್ದಾರೆ' ಎಂದು ಕುಮಾರ್ ಪುಷ್ಕರ್ 'ಪ್ರಜಾವಾಣಿ'ಗೆ ತಿಳಿಸಿದರು.

'ಜಯಭೀಮಾ ಅವರ ವಿರುದ್ಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೋಟೆಲ್‌ನ ಸಿ.ಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ತರಿಸಿಕೊಂಡು, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ' ಎಂದು ಹೇಳಿದರು.

ಮದ್ಯದ ದಾಸ್ತಾನಿನ ಈ ಗೋಲ್‌ಮಾಲ್‌ ಬಗ್ಗೆ ಹೋಟೆಲ್‌ ವ್ಯವಸ್ಥಾಪಕ ಮಂಜೇಗೌಡ ಅವರು ಏ. 28ರಂದು ಕುಮಾರ್ ಪುಷ್ಕರ್ ಅವರಿಗೆ ಪತ್ರ ಬರೆದಿದ್ದರು. ಆ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿತ್ತು.

ಸೋಜಿಗದ ಸಂಗತಿ ಎಂದರೆ ಮದ್ಯದ ಟಿನ್‌ಗಳನ್ನು ಕೋತಿಗಳು ಹಾಳು ಮಾಡಿವೆ ಎಂದು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು