ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha 2024 | ಕಾಂಗ್ರೆಸ್ ಟಿಕೆಟ್: ಹಿರಿಯ ನಾಯಕನ ಪರ ಧ್ವನಿ

Published 2 ಜನವರಿ 2024, 6:22 IST
Last Updated 2 ಜನವರಿ 2024, 6:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ತೀವ್ರವಾಗಿ ಬೆಳವಣಿಗೆಗಳು ನಡೆಯುತ್ತಿವೆ. ಅಭ್ಯರ್ಥಿಗಳ ಬಗ್ಗೆ ಮುಖಂಡರ ಅಭಿಪ್ರಾಯ ಆಲಿಸಲು ಲೋಕಸಭಾ ಕ್ಷೇತ್ರದ ವೀಕ್ಷಕ ಬಿ.ಝೆಡ್. ಜಮೀರ್‌ ಅಹಮದ್ ಖಾನ್ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದರು.‌

ಆ ಸಭೆಯಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಮಾಜಿ ಸಂಸದ ಎಂ.ವೀರಪ್ಪ ಅವರ ಬೆಂಬಲಿಗರ ನಡುವೆ ಪರಸ್ಪರ ಜೋರು ಘೋಷಣೆಗಳು ಮೊಳಗಿದ್ದವು. ಆ ಸಭೆಯಲ್ಲಿಯೇ ಗೌರಿಬಿದನೂರು ಮಾಜಿ ಶಾಸಕ ಎನ್‌.ಎಚ್‌. ಶಿವಶಂಕರ ರೆಡ್ಡಿ ಅವರ ಪರವಾಗಿಯೂ ಕಾಂಗ್ರೆಸ್ ಮುಖಂಡರು ಧ್ವನಿ ಮೊಳಗಿಸಿದ್ದರು. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಪಕ್ಷದ ಕೆಲವು ಪ್ರಮುಖ ನಾಯಕರು ಎನ್‌.ಎಚ್‌. ಶಿವಶಂಕರ ರೆಡ್ಡಿ ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ವೇದಿಕೆಗಳಲ್ಲಿ ಮತ್ತೆ ಧ್ವನಿ ಮೊಳಗಿಸಿದ್ದಾರೆ. 

ಜಮೀರ್‌ ಅಹಮದ್ ಅವರು ಸಭೆ ನಡೆಸಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ವೀರಪ್ಪ ಮೊಯಿಲಿ, ರಕ್ಷಾ ರಾಮಯ್ಯ, ಎನ್‌.ಎಚ್‌. ಶಿವಶಂಕರ ರೆಡ್ಡಿ, ದೊಡ್ಡಬಳ್ಳಾಪುರ ಮಾಜಿ ಶಾಸಕ ವೆಂಕಟರಮಣಯ್ಯ ಮತ್ತು ಮುಖಂಡ ಕೆಂಚೇಗೌಡ ಅವರ ಹೆಸರುಗಳೊಂದಿಗೆ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು. 

ಆ ಪ್ರಕಾರ ಶಿವಶಂಕರ ರೆಡ್ಡಿ ಅವರು ಸ್ಪರ್ಧೆಯ ಕಣದಲ್ಲಿ ಇರುವುದು ನಿಶ್ಚಳವಾಗಿದೆ. ರಕ್ಷಾ ರಾಮಯ್ಯ ಮತ್ತು ವೀರಪ್ಪ ಮೊಯಿಲಿ ಅವರ ಗುಂಪುಗಳ ನಡುವೆ ಚಟುವಟಿಕೆಗಳು ಬಿರುಸಾಗಿವೆ. ಈ ನಡುವೆಯೇ ಶಿವಶಂಕರ ರೆಡ್ಡಿ ಅವರಿಗೆ ಟಿಕೆಟ್ ನೀಡುವಂತೆ ರಾಜ್ಯ ಕಾಂಗ್ರೆಸ್‌ನ ಕೆಲವು ಮುಖಂಡರು ಒತ್ತಾಯಿಸುತ್ತಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಪಕ್ಷದ ಮೂಲಗಳು. 

‘ರಾಜ್ಯ ಮಟ್ಟದ ಪ್ರಮುಖ ಕಾಂಗ್ರೆಸ್‌ ಮುಖಂಡರು ಶಿವಶಂಕರ ರೆಡ್ಡಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಸಂಪರ್ಕವೂ ಇದೆ. ಈ ಎಲ್ಲವೂ ವರಿಷ್ಠರಿಗೆ ಗೊತ್ತು. ಈಗಾಗಲೇ ತಮ್ಮದೇ ಆದ ಸಂ‍‍ಪರ್ಕ ಜಾಲದ ಮೂಲಕ ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ’ ಎಂದು ಶಿವಶಂಕರ ರೆಡ್ಡಿ ಅವರ ಆಪ್ತ ಮೂಲಗಳು ತಿಳಿಸುತ್ತವೆ. 

ಐದು ಬಾರಿ ಗೌರಿಬಿದನೂರು ಕ್ಷೇತ್ರದ ಶಾಸಕರಾಗಿದ್ದ ಶಿವಶಂಕರ ರೆಡ್ಡಿ ಅವರು ಒಮ್ಮೆ ಸಚಿವರಾಗಿ ಮತ್ತು ವಿಧಾನಸಭೆ ಉಪಾಧ್ಯಕ್ಷರಾಗಿಯೂ (ಡೆಪ್ಯುಟಿ ಸ್ಪೀಕರ್) ಕೆಲಸ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಸಶಕ್ತಗೊಳಿಸುವಲ್ಲಿ ಅಗ್ರನಾಯಕರಾಗಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭೆ ಟಿಕೆಟ್ ವಿಚಾರದಲ್ಲಿ ಅವರ ಅಭಿಪ್ರಾಯವೂ ಪ್ರಮುಖವಾಗಿತ್ತು. 

ನಾಗಸಂದ್ರದ ಹಿಡಿತ: ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕಾರಣದಲ್ಲಿ ಗೌರಿಬಿದನೂರು ತಾಲ್ಲೂಕಿನ ಎಚ್‌.ನಾಗಸಂದ್ರ ಗ್ರಾಮದ ಹೆಜ್ಜೆ ಹುರುತುಗಳು ಈ ಹಿಂದಿನಿಂದಲೂ ಇದೆ. 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಎನ್.ಸಿ.ನಾಗಯ್ಯ ರೆಡ್ಡಿ , ಐದು ಬಾರಿ ಶಾಸಕರಾಗಿದ್ದ ಶಿವಶಂಕರರೆಡ್ಡಿ, ಒಮ್ಮೆ ಶಾಸಕಿಯಾಗಿದ್ದ ‌ಎನ್.ಜ್ಯೋತಿರೆಡ್ಡಿ ಅವರ ತವರೂರು ಎಚ್‌.ನಾಗಸಂದ್ರ. 

ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಶಿವಶಂಕರರೆಡ್ಡಿ ಅವರಿಗೆ ಕೆಲವು ಕ್ಷೇತ್ರಗಳ ಉಸ್ತುವಾರಿ ಸಹ ನೀಡಲಾಗಿತ್ತು.

‘ಹಿರಿಯನಿದ್ದೇನೆ ಪಕ್ಷಕ್ಕೆ ಕೊಡುಗೆ ಇದೆ’

‘ನಾನು ಕಾಂಗ್ರೆಸ್ ಪಕ್ಷದಲ್ಲಿ ಹಿರಿಯನಿದ್ದೇನೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಷ್ಟೇ ಅಲ್ಲ ಸುತ್ತಮುತ್ತಲ ಜಿಲ್ಲೆಗಳಲ್ಲಿಯೂ ಪಕ್ಷ ಕಟ್ಟಿದ್ದೇನೆ. ಕಾಂಗ್ರೆಸ್ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ’ ಎಂದು ಎನ್‌.ಎಚ್‌. ಶಿವಶಂಕರ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.  ಎಂದೂ ಈ ಸ್ಥಾನ ಬೇಕು ಎಂದು ಕೇಳಿದವನಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿದರೆ ಕಣಕ್ಕೆ ಇಳಿಯುವೆ. ನಾವು ಸಮಾಜ ಸೇವೆಯ ಮೂಲಕ ರಾಜಕಾರಣಕ್ಕೆ ಬಂದವರು. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದ ನಾಡಿ ಮಿಡಿತವನ್ನು ಚೆನ್ನಾಗಿ ಬಲ್ಲೆ ಎಂದು ಹೇಳಿದರು.

ಶಿವಶಂಕರ ರೆಡ್ಡಿ ಛಾಪು

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 1999ರ ಚುನಾವಣೆಯಿಂದ 2018ರ ಚುನಾವಣೆಯವರೆಗೂ ಸತತ ಐದು ಬಾರಿ ಗೆಲುವಿನ ನಗೆ ಬೀರಿದ್ದಾರೆ ಕಾಂಗ್ರೆಸ್‌ನ ಎನ್.ಎಚ್.ಶಿವಶಂಕರರೆಡ್ಡಿ. ಮೊದಲ ಬಾರಿಗೆ ಪಕ್ಷೇತರರಾಗಿ ಗೆಲುವು ಸಾಧಿಸಿದ ಅವರು ನಂತರ ಕಾಂಗ್ರೆಸ್ ಸೇರಿದರು. ನಾಲ್ಕು ಬಾರಿ ಕೈ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದರು.  2023ರ ವಿಧಾನಸಭೆ ಚುನಾವಣೆಯವರೆಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಎನ್ನುವಂತಿದ್ದವರು. ವಿಧಾನಸಭೆ ಸೋಲಿನ ತರುವಾಯವೂ ಕಾಂಗ್ರೆಸ್‌ನಲ್ಲಿ ಅಗ್ರಗಣ್ಯ ನಾಯಕ ಎನಿಸಿದ್ದಾರೆ ಶಿವಶಂಕರರೆಡ್ಡಿ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT