ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನದಿ ನೀರು: ಮತ್ತೆ ಕಾವೇರಿದ ಚರ್ಚೆ

ಲೋಕಸಭೆ ಚುನಾವಣೆ ವೇಳೆ ನಾಯಕರಿಂದ ಭರವಸೆ
Published 28 ಏಪ್ರಿಲ್ 2024, 16:33 IST
Last Updated 28 ಏಪ್ರಿಲ್ 2024, 16:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಆಗ ನಾವು ಪ್ರಧಾನಿ ಅವರ ಬಳಿ ಹೋಗಿ ಕೃಷ್ಣಾ ನದಿ ನೀರು ಕೊಡಿ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ ಎಂದು ಕೇಳಬಹುದು– ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ.

‘ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕೊಂಡೊಯ್ಯಲಾಗುವುದು’ ಎಂಬ ಎಚ್‌.ಡಿ.ದೇವೇಗೌಡರ ಹೇಳಿಕೆ ಜನರನ್ನು ದಾರಿ ತಪ್ಪಿಸುವಂತಿದೆ. ಕೃಷ್ಣಾ ನದಿ ನೀರಿನ ವಿಷಯವಾಗಿ ದೇವೇಗೌಡರ ಹೇಳಿಕೆ ಸರಿಯಿಲ್ಲ. ಕೃಷ್ಣಾ ನದಿಯಿಂದ ಒಂದು ಹನಿ ನೀರು ತೆಗೆದುಕೊಂಡು ಹೋಗಲು ನಾವೂ ಬಿಡುವುದಿಲ್ಲ-ಸಚಿವ ಎಂ.ಬಿ.ಪಾಟೀಲ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಮುಗಿದಿದೆ. ಹೀಗಿದ್ದರೂ ರಾಜಕೀಯ ಅಂಗಳದಲ್ಲಿ ನಾಯಕರ ಕೃಷ್ಣಾ ನದಿ ನೀರಿನ ಕುರಿತು ಆಡಿದ ಮಾತುಗಳು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸದ್ದು ಮಾಡುತ್ತಿವೆ. ಚುನಾವಣೆಯ ಹೊತ್ತಿನಲ್ಲಿ ಮಾತ್ರ ರಾಜಕೀಯ ನಾಯಕರ ಮಾತುಗಳಲ್ಲಿ ಕೃಷ್ಣಾ ನದಿ ನೀರಿನ ವಿಚಾರವು ಜಿಲ್ಲೆಯಲ್ಲಿ ಕೇಳಿ ಬರುತ್ತದೆ. ಆದರೆ ನೀರು ಹರಿಸುವ ಇಚ್ಛಾಶಕ್ತಿಯನ್ನು ಯಾರೂ ತೋರುತ್ತಿಲ್ಲ ಎನ್ನುವುದು ಮತದಾರರ ನುಡಿ.

ಚಿಕ್ಕಬಳ್ಳಾಪುರಕ್ಕೆ ಹೊಂದಿಕೊಂಡಿರುವ ನೆರೆಯ ಆಂಧ್ರಪ್ರದೇಶದಲ್ಲಿ ಕೃಷ್ಣಾ ನದಿ ನೀರು ಹರಿಯುತ್ತಿದೆ. ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಗಡಿ ಗ್ರಾಮಗಳಲ್ಲಿ ಈ ನೀರು ಹರಿಯುತ್ತಿದೆ. ಆದರೆ ಚಿಕ್ಕಬಳ್ಳಾಪುರಕ್ಕೆ ಕೃಷ್ಣಾ ನದಿ ನೀರು ಹರಿಸಬೇಕು ಎನ್ನುವ ಈ ಭಾಗದ ಜನರ ಬಹುವರ್ಷಗಳ ಬೇಡಿಕೆ ಇಂದಿಗೂ ಈಡೇರಿಲ್ಲ.

ಪ್ರತಿ ಲೋಕಸಭೆ, ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕೃಷ್ಣಾ ನದಿ ನೀರು ಹರಿಸುವ ವಿಚಾರವು ಚಿಕ್ಕಬಳ್ಳಾಪುರದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತದೆ. ನೆರೆಯ ಆಂಧ್ರಪ್ರದೇಶದ ಗಡಿಭಾಗದಲ್ಲಿ ಹರಿಯುತ್ತಿರುವ ಕೃಷ್ಣಾ ನೀರನ್ನು ಜಿಲ್ಲೆಗೆ ತರಲಾಗುವುದು. ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ರಾಜಕೀಯ ನಾಯಕರು ಭರವಸೆಗಳನ್ನು ನೀಡುತ್ತಲೇ ಇದ್ದಾರೆ. ಈ ಚುನಾವಣೆಯ ಸಮಯದಲ್ಲಿಯೂ ಕೃಷ್ಣಾ ನದಿ ನೀರಿನ ವಿಚಾರಗಳು ಹೆಚ್ಚು ಚರ್ಚೆಗೆ ಕಾರಣವಾಗಿವೆ. 

‘2020ರಲ್ಲಿಯೇ ಕೇಂದ್ರ ಸರ್ಕಾರದ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲ್ಯುಡಿಎ) ಕೃಷ್ಣಾ–ಆಲಮಟ್ಟಿ– ಪೆನ್ನಾರ್ ನದಿ ಜೋಡಣೆ ಯೋಜನೆ ಪ್ರಸ್ತಾಪಿಸಿದೆ. ಕರ್ನಾಟಕದ ಪೆನ್ನಾರ್ ನದಿ ಜಲಾನಯನ ಪ್ರದೇಶಕ್ಕೆ ಸೇರಿದ ಕೋಲಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 1.82 ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಯೋಜನೆಗೆ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಿ ಕೇಂದ್ರದ ಮನಮೋಹನ್ ಸಿಂಗ್ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.

2015ರಲ್ಲಿ ಚದಲಪುರ ಕ್ರಾಸ್‌ನಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನಡೆಸಿದ ಅನಿರ್ದಿಷ್ಟಾವಧಿ ಧರಣಿಯ ಸ್ಥಳಕ್ಕೆ ಬಂದಿದ್ದ ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ ‍ಪಾಟೀಲ ಅವರಿಗೆ ಈ ಬಗ್ಗೆ ದಾಖಲೆಗಳನ್ನು ಸಹ ನೀಡಲಾಗಿದೆ ಎಂದಿದ್ದಾರೆ.

ಹೀಗೆ ಬಯಲು ಸೀಮೆಯ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೆ ಕೃಷ್ಣಾ ನದಿ ನೀರು ಹರಿಸುವ ವಿಚಾರ ಈಗ ಮತ್ತೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT