ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಒಕ್ಕಲಿಗರು ಗೆದ್ದದ್ದು ಎರಡೇ ಬಾರಿ!

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಸಣ್ಣ ಸಮುದಾಯಕ್ಕೆ ಹೆಚ್ಚು ಮನ್ನಣೆ- ಕಾಂಗ್ರೆಸ್‌, ದಳ ನೆಲದಲ್ಲಿ ಅರಳಿದ ಕಮಲ
Published 14 ಜನವರಿ 2024, 21:50 IST
Last Updated 14 ಜನವರಿ 2024, 21:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಒಕ್ಕಲಿಗ ಸಮುದಾಯದ ಮತದಾರರೇ ನಿರ್ಣಾಯಕರಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಈ ಸಮುದಾಯದ ಅಭ್ಯರ್ಥಿಗಳು ಗೆದ್ದದ್ದು ಕೇವಲ ಎರಡು ಬಾರಿ ಮಾತ್ರ. ಮೊದಲಿನಿಂದಲೂ ಈ ಕ್ಷೇತ್ರದಿಂದ ಸಣ್ಣಪುಟ್ಟ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. 

ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಎರಡು ಬಾರಿ ಮಾತ್ರ ಗೆಲುವು ಸಾಧಿಸಿದ್ದಾರೆ. ತೀರಾ ಕಡಿಮೆ ಸಂಖ್ಯೆಯಲ್ಲಿರುವ ಸಮುದಾಯಗಳ ಅಭ್ಯರ್ಥಿಗಳು ಹಲವು ಬಾರಿ, ಭಾರಿ ಅಂತರದಿಂದಲೇ ಗೆಲುವು ದಾಖಲಿಸಿದ್ದಾರೆ. ಇದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಇತಿಹಾಸದ ವೈಶಿಷ್ಟ್ಯ.

ಕ್ಷೇತ್ರದ ಇಂದಿನ ರಾಜಕೀಯ ಸನ್ನಿವೇಶ, ಲೆಕ್ಕಾಚಾರ ಬದಲಾಗಿದೆ. ‘ಪ್ರಬಲ’ ಸಮುದಾಯದ ಅಭ್ಯರ್ಥಿಗಳೇ ಗೆಲ್ಲುವ ಕುದುರೆಗಳು ಎನ್ನುವ ಪರಿಸ್ಥಿತಿ ಇದೆ. ಸಣ್ಣ ಪುಟ್ಟ ಸಮುದಾಯಗಳ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಕ್ಷೀಣವಾಗುತ್ತಿದೆ. 

ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿದ್ದ ಚಿಕ್ಕಬಳ್ಳಾಪುರ 2008ರಲ್ಲಿ ಜಿಲ್ಲೆಯಾಗಿ ರೂಪುಗೊಂಡಿತು. ಹಿಂದೆ ಮಧುಗಿರಿ, ಹೊಸಕೋಟೆ ಲೋಕಸಭಾ ಕ್ಷೇತ್ರಗಳ ಭಾಗವಾಗಿದ್ದ ಚಿಕ್ಕಬಳ್ಳಾಪುರ 1977ರಲ್ಲಿ ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದಿತು.

ಅಂದಿನಿಂದ ಇಲ್ಲಿಯವರೆಗೆ ಎರಡು ಬಾರಿ ಒಕ್ಕಲಿಗರು ಗೆಲುವು ಸಾಧಿಸಿದ್ದಾರೆ. ನಾಲ್ಕು ಬಾರಿ ಈಡಿಗರು, ಮೂರು ಬಾರಿ ಬ್ರಾಹ್ಮಣರು, ಎರಡು ಬಾರಿ ದೇವಾಡಿಗರು, ಒಮ್ಮೆ ವೈಶ್ಯ ಸಮುದಾಯದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 

ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಎಂ.ವಿ. ಕೃಷ್ಣಪ್ಪ ಗೆಲುವು ದಾಖಲಿಸಿದರು. ತರುವಾಯ 2019ರ ಚುನಾವಣೆಯವರೆಗೂ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಗೆಲ್ಲಲೇ ಇಲ್ಲ. 2019ರಲ್ಲಿ ಬಿ.ಎನ್.ಬಚ್ಚೇಗೌಡ  ಗೆಲ್ಲುವ ಮೂಲಕ ಹಲವು ಹೊಸ ದಾಖಲೆ ಸೃಷ್ಟಿಸಿದರು.

1980ರ ಚುನಾವಣೆಯಲ್ಲಿ ವೈಶ್ಯ ಸಮುದಾಯದ ಎಸ್.ಎನ್.ಪ್ರಸನ್ನ ಕುಮಾರ್, 1984ರಿಂದ 1991ರವರೆಗೂ ಬ್ರಾಹ್ಮಣ ಸಮುದಾಯದ ವಿ. ಕೃಷ್ಣರಾವ್, 1996ರಿಂದ 2004ರವರೆಗೆ ಈಡಿಗ ಸಮುದಾಯದ ಆರ್‌.ಎಲ್.ಜಾಲಪ್ಪ, 2009 ಮತ್ತು 2014ರಲ್ಲಿ ದೇವಾಡಿಗ ಸಮುದಾಯದ ಎಂ.ವೀರಪ್ಪ ಮೊಯಿಲಿ ಈ ಕ್ಷೇತ್ರದಿಂದ ಗೆದ್ದಿದ್ದಾರೆ.

ಬಿಜೆಪಿ ಖಾತೆ ತೆರೆದ ಬಚ್ಚೇಗೌಡ

  2019ರ ಲೋಕಸಭೆ ಚುನಾವಣೆಯಲ್ಲಿ ಬಿ.ಎನ್.ಬಚ್ಚೇಗೌಡರ ಗೆಲುವು ನಾನಾ ರೀತಿಯ ಬೆಳವಣಿಗೆಗೆ ಕಾರಣವಾಯಿತು. ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿತು. ಅಲ್ಲಿಯವರೆಗೂ ಕಾಂಗ್ರೆಸ್‌ ಜನತಾದಳ ಹೊರತುಪಡಿಸಿದರೆ ಮೂರನೇ ಪಕ್ಷ ಇಲ್ಲಿ ಗೆದ್ದಿರಲಿಲ್ಲ. 1980ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ದಾಖಲೆ ವೈಶ್ಯ ಸಮುದಾಯದ ಎಸ್.ಎನ್.ಪ್ರಸನ್ನಕುಮಾರ್‌ ಹೆಸರಿನಲ್ಲಿ ಇತ್ತು. ಅವರು 408214 ಮತ ಪಡೆದಿದ್ದರು. 2019ರ ಚುನಾವಣೆಯಲ್ಲಿ ಬಚ್ಚೇಗೌಡರು 745912 ಮತ ಪಡೆದು ಪ್ರತಿಸ್ಪರ್ಧಿ ವಿರುದ್ಧ 182110 ಮತಗಳಿಂದ ಗೆಲುವು ದಾಖಲಿಸಿದರು.     ಒಕ್ಕಲಿಗರ ಬಹುಸಂಖ್ಯೆಯ ಮತಗಳು ಒಂದೇ ತೆಕ್ಕೆಗೆ ಜಾರಿದ್ದು ಬಚ್ಚೇಗೌಡರು ಈ ಪ್ರಮಾಣದಲ್ಲಿ ಮತ ಗಳಿಸಲು  ಕಾರಣ ಎನ್ನುತ್ತಾರೆ ಜಿಲ್ಲೆಯ ರಾಜಕೀಯ ಅಂತರಾಳ ಬಲ್ಲವರು. ಹಲವು ದಶಕಗಳ ನಂತರ ಮತ್ತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ‘ಗೌಡ’ರ ಕೈವಶವಾಗಿದೆ. ಕ್ಷೇತ್ರವನ್ನು ಮತ್ತೆ ಉಳಿಸಿಕೊಳ್ಳಬೇಕು ಎನ್ನುವ ಪ್ರತಿಷ್ಠೆ ಸಹ ಒಕ್ಕಲಿಗ ಸಮುದಾಯದಲ್ಲಿದೆ. ಮತ್ತೊಂದು ಕಡೆ ‘ಅಹಿಂದ’ ಸಮುದಾಯಗಳು ಸಹ ರಾಜಕೀಯವಾಗಿ ಜಾಗೃತವಾಗಿವೆ.

ಯಾರ ಬಲ ಎಷ್ಟು?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಬಲಿಜ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.  ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಅಂದಾಜು 4.50 ಲಕ್ಷ ಪರಿಶಿಷ್ಟ ಜಾತಿ ಮತ್ತು ಪಂಗಡದ 5 ಲಕ್ಷ ಮತ್ತು ಬಲಿಜ ಸಮುದಾಯದ 1.80 ಲಕ್ಷ ಮತ ಇವೆ.   ಈ ಬಾರಿ ಪ್ರಬಲ ಸಮುದಾಯಗಳ ಒಗ್ಗಟ್ಟು ಅಹಿಂದ ಮತಗಳ ಧ್ರುವೀಕರಣ ಹೀಗೆ ನಾನಾ ವಿಚಾರ ಈಗಲೇ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ.  ಕಾಂಗ್ರೆಸ್‌ನಿಂದ ಒಕ್ಕಲಿಗರಲ್ಲದ ಅಭ್ಯರ್ಥಿಗೆ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದಿಂದ ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT