ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls 2024 | ಚಿಕ್ಕಬಳ್ಳಾಪುರ: ಕೋಟಿಗಳು ವೆಚ್ಚ; ಲಕ್ಷಗಳಲ್ಲಿ ಲೆಕ್ಕ

ಲೋಕಸಭೆ ಚುನಾವಣೆ; ಡಾ.ಕೆ.ಸುಧಾಕರ್ ವೆಚ್ಚ ₹ 65 ಲಕ್ಷ, ₹ 42 ಲಕ್ಷ ವ್ಯಯಿಸಿದ ರಕ್ಷಾ ರಾಮಯ್ಯ
Published 2 ಜುಲೈ 2024, 4:00 IST
Last Updated 2 ಜುಲೈ 2024, 4:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮಾಡಿರುವ ವೆಚ್ಚ ಎಷ್ಟು? ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಎಷ್ಟು ಹಣ ಖರ್ಚು ಮಾಡಿದ್ದಾರೆ–ಹೀಗೊಂದು ಪ್ರಶ್ನೆಯನ್ನು ಆಯಾ ಪಕ್ಷಗಳ ಪ್ರಮುಖ ಮುಖಂಡರು, ಕಾರ್ಯಕರ್ತರನ್ನು ಕೇಳಿದರೆ ಕೋಟಿಗಳ ಲೆಕ್ಕ ಹೇಳುವರು.

ಚುನಾವಣೆ ಕಣದಲ್ಲಿ ತೊಡೆ ತಟ್ಟಿ ಕ್ಷೇತ್ರದಾದ್ಯಂತ ನಾನಾ ರೀತಿಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದವರು, ಉಡುಗೊರೆಗಳನ್ನು ಧಾರಾಳವಾಗಿ ಹಂಚಿದ್ದವರು ಚುನಾವಣಾ ಆಯೋಗಕ್ಕೆ ನೀಡಿರುವ ವೆಚ್ಚದ ಮಾಹಿತಿ ಅಚ್ಚರಿ ಮೂಡಿಸುತ್ತದೆ. 

ಲೋಕಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗರಿಷ್ಠ ₹ 90 ಲಕ್ಷದವರೆಗೆ ವೆಚ್ಚ ಮಾಡಲು ಚುನಾವಣಾ ಆಯೋಗವು ಮಿತಿ ವಿಧಿಸಿದೆ. ಈ ಮಿತಿಯನ್ನು ಅಭ್ಯರ್ಥಿಗಳು ದಾಟಬಾರದು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಯಾವ ಅಭ್ಯರ್ಥಿಯೂ ಈ ಮಿತಿ ದಾಟಿಲ್ಲ. ಕೋಟಿಗಟ್ಟಲೆ ಚುನಾವಣೆಗೆ ವೆಚ್ಚ ಮಾಡಿರುವವರು ಆಯೋಗಕ್ಕೆ ಲಕ್ಷಗಳ ಲೆಕ್ಕದಲ್ಲಿ ಮಾಹಿತಿ ನೀಡಿದ್ದಾರೆ.

ಚುನಾವಣಾ ವೆಚ್ಚಗಳನ್ನು ವೆಚ್ಚ ವೀಕ್ಷಕರಿಗೆ ಏ.15, 18, 24ರಂದು ಅಭ್ಯರ್ಥಿಗಳು ಮಾಹಿತಿ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಎಷ್ಟು ವೆಚ್ಚವಾಗಿದೆ ಎನ್ನುವುದನ್ನು ನಮೂದಿಸಿದ್ದಾರೆ. ಅಂತಿಮವಾಗಿ ಏ.25ಕ್ಕೆ ಒಟ್ಟು ಮೊತ್ತವನ್ನು ನಮೂದಿಸಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈ ಬಾರಿ 29  ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಕ್ಷೇತ್ರದ ಇತಿಹಾಸದಲ್ಲಿಯೇ ಈ ಬಾರಿ ಗರಿಷ್ಠ ಸಂಖ್ಯೆಯಲ್ಲಿ ಕಣಕ್ಕೆ ಇಳಿದಿದ್ದರು. 19 ಅಭ್ಯರ್ಥಿಗಳು ಪಕ್ಷೇತರರಾಗಿದ್ದರೆ 10 ಮಂದಿ ವಿವಿಧ ಪಕ್ಷಗಳ ಚಿಹ್ನೆಯಡಿ ಸ್ಪರ್ಧಿಸಿದ್ದರು. 

ಗೆಲುವಿನ ನಗೆ ಬೀರಿದ ಸುಧಾಕರ್ ವೆಚ್ಚ ಇಷ್ಟು: ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಚುನಾವಣೆಯಲ್ಲಿ ಗೆಲ್ಲಲು ₹ 65,17,785 ವೆಚ್ಚ ಮಾಡಿದ್ದಾರೆ.  ಪ್ರತಿ ದಿನವೂ ಯಾವುದಕ್ಕೆ ಎಷ್ಟು ವೆಚ್ಚ ಮಾಡಲಾಗಿದೆ ಎನ್ನುವುದನ್ನು ವಿವರವಾಗಿ ಮಾಹಿತಿ ನೀಡಿದ್ದಾರೆ.

ಕೋಟಿಯ ಒಡೆಯನದ್ದು ₹ 42 ಲಕ್ಷ ವೆಚ್ಚ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಣದಲ್ಲಿದ್ದ ಅತ್ಯಂತ ಶ್ರೀಮಂತ ಅಭ್ಯರ್ಥಿ ಕಾಂಗ್ರೆಸ್‌ನ ರಕ್ಷಾ ರಾಮಯ್ಯ. ಇಂತಿಪ್ಪ ರಕ್ಷಾ ರಾಮಯ್ಯ ಅವರು ಮಾಡಿರುವ ಮಾಡಿರುವ ಚುನಾವಣಾ ವೆಚ್ಚ ₹ 42,87,067.

ಚುನಾವಣೆ ಸಮಯದಲ್ಲಿಯೇ ಕುಕ್ಕರ್, ಮಿಕ್ಸರ್, ಸೀರೆ, ಟಿವಿ, ಪಕ್ಷದ ವರಿಷ್ಠರು, ರಾಜ್ಯ ನಾಯಕರಿಂದ ರ‍್ಯಾಲಿ...ಹೀಗೆ ದೊಡ್ಡ ಮಟ್ಟದಲ್ಲಿಯೇ ವೆಚ್ಚಗಳನ್ನು ಮಾಡಿದ್ದಾರೆ. ಆದರೆ ಆಯೋಗಕ್ಕೆ ನೀಡಿರುವ ಮಾಹಿತಿಯಲ್ಲಿ ಮಾತ್ರ ₹ 90 ಲಕ್ಷ ವೆಚ್ಚ ದಾಟಿಲ್ಲ!

ಪ್ರಚಾರ ಸಾಮಗ್ರಿಗಳಾದ ಧ್ವನಿವರ್ಧಕ ಸಾಧನಗಳು, ಬ್ಯಾನರ್, ಕರಪತ್ರ, ಬಾವುಟ, ಫ್ಲೆಕ್ಸ್‌, ಪೋಸ್ಟರ್ ಗಳು, ವಾಹನಗಳ ಬಾಡಿಗೆ ದರ, ಊಟ, ವಸತಿ ವ್ಯವಸ್ಥೆಯ ದರ, ವಾಹನ ಚಾಲಕರು ಮತ್ತು ಇತರ ಸೇವೆಗಳ ದರ, ಪೀಠೋಪಕರಣಗಳ ದರ ಸೇರಿದಂತೆ ಚುನಾವಣೆ ನಿಮಿತ್ತ ಬಳಸುವ ವಸ್ತುಗಳು ಮತ್ತು ಸೇವೆಗಳ ಬಳಕೆಯ ದರವನ್ನು ಜಿಲ್ಲಾಡಳಿತ ನಿಗದಿ ಮಾಡಿತ್ತು. 

ವೆಚ್ಚದಲ್ಲಿ ಏನೆಲ್ಲ ಸೇರುತ್ತದೆ: ಚುನಾವಣೆ ಪ್ರಚಾರದ ಅವಧಿಯಲ್ಲಿ ಅಭ್ಯರ್ಥಿ ಸಾರ್ವಜನಿಕ ಸಭೆ, ಸಮಾರಂಭ, ಮೆರವಣಿಗೆ ಮಾಡುವ ಖರ್ಚು ಅಭ್ಯರ್ಥಿಯ ವೆಚ್ಚದಲ್ಲಿ ಮುಖ್ಯವಾಗಿರುತ್ತದೆ. ಇವುಗಳ ಜೊತೆಗೆ ಪ್ರಚಾರ ಸಾಮಗ್ರಿಗಳಾದ ಕರಪತ್ರ, ಪೋಸ್ಟರ್‌, ವಿಡಿಯೊ ಮತ್ತು ಆಡಿಯೊ ಕ್ಯಾಸೆಟ್‌ಗಳು, ಧ್ವನಿವರ್ಧಕಕ್ಕೆ ಮಾಡುವ ವೆಚ್ಚ, ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ನೀಡುವ ಶುಲ್ಕ ಸೇರಿಸಲಾಗುತ್ತದೆ.

ಪ್ರಚಾರದಲ್ಲಿ ಭಾಗವಹಿಸುವ ಕಾರ್ಯಕರ್ತರ ಸಂಖ್ಯೆ, ಪ್ರಚಾರ ಕಾರ್ಯಗಳಿಗಾಗಿ ಬಳಕೆ ಮಾಡಿದ ವಾಹನಗಳ ಬಾಡಿಗೆ, ಕಟೌಟ್‌, ಬ್ಯಾನರ್‌ಗಳಿಗಾಗಿ ಮಾಡುವ ಖರ್ಚು ಸೇರಿದಂತೆ ಸಣ್ಣಪುಟ್ಟ ಖರ್ಚಿನ ಲೆಕ್ಕವನ್ನು ಇತರೆ ಕಾಲಂನಲ್ಲಿ ತೋರಿಸಿ ಒಟ್ಟು ವೆಚ್ಚದ ಲೆಕ್ಕವನ್ನು ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. 

ಪ್ರಮುಖ ಪಕ್ಷಗಳ ಅಭ್ಯರ್ಥಿ;ಪಕ್ಷ;ಚುನಾವಣಾ ವೆಚ್ಚ

ಮಹದೇವ್ ಪಿ.;ಬಿಎಸ್‌ಪಿ;2,35,415
ಮುನಿವೆಂಕಟಪ್ಪ;ಎಂ.ಪಿ;ಸಿಪಿಎಂ;10,110
ಕಲಾವತಿ ಎನ್.;ಎಸ್‌ಯುಸಿಐ;40,584
ನಾಗೇಶ್;ದಿಗ್ವಿಜಯ ಭಾರತ ಪಕ್ಷ;1,10,800
ಟಿ.ಆರ್.ನಾರಾಯಣರಾವ್;ಇಂಡಿಯನ್ ಲೇಬರ್ ಪಾರ್ಟಿ;25,000
ವಿ.ವೆಂಕಟೇಶಮೂರ್ತಿ;ಉತ್ತಮ ಪ್ರಜಾಕೀಯ ಪಕ್ಷ;310
ಜಿ.ಸುಬ್ರಮಣಿಶೆಟ್ಟಿ;ಕರ್ನಾಟಕ ರಾಷ್ಟ್ರಸಮಿತಿ;1,15,970

ಮೃತ ರಾಜಾರೆ ಡ್ಡಿಯದ್ದು 25 ಸಾವಿರ ವೆಚ್ಚ

ಚುನಾವಣೆ ನಡೆಯುವ ವೇಳೆಯಲ್ಲಿಯೇ ಪಕ್ಷೇತರ ಅಭ್ಯರ್ಥಿ ರಾಜಾರೆಡ್ಡಿ ಮೃತಪಟ್ಟಿದ್ದರು. ಅವರು ಏ.15ರಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದ ಪ್ರಕಾರ ₹ 25 ಸಾವಿರ ವೆಚ್ಚ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT