ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಚಕರ ಸಮಸ್ಯೆ ಆಲಿಸಲು ಸಭೆ

ಅರ್ಚಕರ, ಆಗಮಿಕರ ಸಂಘದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ
Last Updated 22 ಜನವರಿ 2020, 16:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅರ್ಚಕರು ದೇವರು ಮತ್ತು ಭಕ್ತರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು. ಶೀಘ್ರದಲ್ಲಿಯೇ ವಿಧಾನಸೌಧದಲ್ಲಿ ಅರ್ಚಕರ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸಿ, ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಬಗೆಹರಿಸುವ ಕೆಲಸ ಮಾಡುತ್ತೇನೆ’ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ಅರ್ಚಕರ, ಆಗಮಿಕರ ಸಂಘದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸರ್ಕಾರ, ಶಾಸಕರು ಜನರಿಗೆ ಸಾಂತ್ವನ ಹೇಳಬಹುದಷ್ಟೇ. ಆದರೆ ದೇವಾಲಯಗಳು, ದೇವರನಲ್ಲಿನ ನಂಬಿಕೆ ಜನಸಾಮಾನ್ಯರಲ್ಲಿ ಆತ್ಮಸ್ಥೈರ್ಯ ತುಂಬಿಸುತ್ತದೆ. ಹೀಗಾಗಿಯೇ ದೇವಾಲಯಗಳು ಜನರ ದುಃಖ, ದುಮ್ಮಾನ, ಆತಂಕ ನಿವಾರಣೆ ಮಾಡುವ ಕೇಂದ್ರಗಳಾಗಿ, ಬದುಕಿನಲ್ಲಿ ನೆಮ್ಮದಿ ತರುವ ಕೆಲಸ ಮಾಡುತ್ತಿವೆ’ ಎಂದು ತಿಳಿಸಿದರು.

‘ರಾಜ್ಯದ ಹಲವು ದೇವಸ್ಥಾನಗಳು ಸರ್ಕಾರದ ನೆರವಿಲ್ಲದೆ ನಡೆಯುತ್ತಿವೆ. ಇಂತಹ ದೇವಾಲಯಗಳಲ್ಲೂ ಸಮಾಜಮುಖಿ ಕೆಲಸಗಳು ಭಕ್ತರ ಸಹಕಾರದಲ್ಲೇ ನಡೆಯುತ್ತಿವೆ. ಅವುಗಳ ಜೀರ್ಣೋದ್ಧಾರವೂ ಮುಖ್ಯ. ಹೀಗಾಗಿ, ಮುಜರಾಯಿ ವ್ಯಾಪ್ತಿಗೆ ಒಳಪಡದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೂ ಸರ್ಕಾರ ನೆರವು ನೀಡಲಿದೆ’ ಎಂದರು.

‘ರಾಜ್ಯದ ಸುಮಾರು 110 ಮುಜರಾಯಿ ದೇವಸ್ಥಾನಗಳಲ್ಲಿ ಏ.26ರಂದು ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ವಧು–ವರರಿಗೆ ₹ 40 ಸಾವಿರ ಮೌಲ್ಯದ ತಾಳಿ, ₹ 10 ಸಾವಿರ ಮೌಲ್ಯದ ಧಾರೆ ಸೀರೆ ಸೇರಿ ಪ್ರತಿ ದಂಪತಿಗೆ
₹ 55 ಸಾವಿರ ವೆಚ್ಚ ಮಾಡಲಾಗುವುದು. ದೇವಸ್ಥಾನ ಸಮಿತಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾಮೂಹಿಕ ಮದುವೆಗೆ ಸಹಕರಿಸಬೇಕು’ ಎಂದು ಕೋರಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ಹಿಂದೂ ಧರ್ಮ, ಸಂಪ್ರದಾಯ ಉಳಿದಿರುವುದೇ ಅರ್ಚಕರಿಂದ. ಅವರು ಇವತ್ತು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿರುವ ದೇವಾಲಯಗಳ ಸ್ಥಿತಿ ಉತ್ತಮವಾಗಿದ್ದರೂ, ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ದೀಪ ಬೆಳಗಲು ಎಣ್ಣೆ ಇಲ್ಲದ ಸ್ಥಿತಿ ಇದೆ. ಸಾಕಷ್ಟು ದೇವಾಲಯಗಳು ಶಿಥಿಲಾವಸ್ಥೆಯಲ್ಲಿವೆ’ ಎಂದು ಹೇಳಿದರು.

‘ಹಿಂದೆ ರಾಜ ಮಹಾರಾಜರ ಕಾಲದಲ್ಲಿ ದೇವಾಲಯಕ್ಕಾಗಿಯೇ ಜಮೀನು ಮೀಸಲು ಇಡುವ ಜತೆಗೆ ಅನುದಾನ ನೀಡುತ್ತಿದ್ದರು. ಆದರೆ ಈಗ ಆ ಸಂಸ್ಕೃತಿ ಇಲ್ಲವಾಗಿದೆ. ಅರ್ಚಕರು ಇತರರಂತೆ ಬೇರೆ ಕೆಲಸ ಮಾಡಬಹುದು. ಆದರೆ ಆತ್ಮಸಂತೋಷಕ್ಕಾಗಿ ಇದೇ ವೃತ್ತಿಯಲ್ಲಿ ಮುಂದುವರಿಯುತ್ತಿದ್ದಾರೆ. ಹೀಗಾಗಿ ಅವರ ಬೇಡಿಕೆಗಳನ್ನು ಸರ್ಕಾರ ಆಲಿಸಿ ಈಡೇರಿಸಲು ಕ್ರಮಕೈಗೊಳ್ಳಲಿದೆ’ ಎಂದು ತಿಳಿಸಿದರು.

ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ಯಾರು ಧರ್ಮವನ್ನು ರಕ್ಷಣೆ ಮಾಡುತ್ತಾರೋ ಅವರನ್ನು ಧರ್ಮ ರಕ್ಷಣೆ ಮಾಡುತ್ತದೆ. ಇವತ್ತು ಅರ್ಚಕರು ಧರ್ಮ ರಕ್ಷಣೆಯ ನೇತೃತ್ವವಹಿಸಿದ್ದಾರೆ. ಅರ್ಚಕರಾದವರು ಸದಾ ಸರ್ವರಿಗೂ ಒಳ್ಳೆದಾಯಲಿ ಎಂದು ಲೋಕಕಲ್ಯಾಣ ಬಯಸುತ್ತಾರೆ. ಹೀಗಾಗಿ, ಅರ್ಚಕರು ನೋವಿಗೆ ನಾವು ಸ್ಪಂದಿಸುವ ಕೆಲಸ ಮಾಡುತ್ತೇವೆ. ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳನ್ನು ಜಿರ್ಣೋದ್ಧಾರ ಮಾಡಲು ಕ್ರಮಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಅಧ್ಯಕ್ಷ ಜಾನಕಿರಾಮ್ ಮಾತನಾಡಿ, ‘ದೇವರ ಪೂಜೆ ಮತ್ತು ಆರಾಧನೆಯನ್ನೇ ನಂಬಿ ಬದುಕುತ್ತಿರುವ ಅರ್ಚಕರು ಮತ್ತು ಆಗಮಿಕರ ನೋವಿಗೆ ಸರ್ಕಾರ ಸ್ಪಂದಿಸಬೇಕಿದೆ. ಈಗಾಗಲೇ ಅರ್ಚಕರ ಕುಂದು ಕೊರತೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರಲು ಸಂಘ ಶ್ರಮಿಸಿದೆ. ನಗರ ಮತ್ತು ಪಟ್ಟಣಗಳ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರ ಬದುಕು ಸ್ಪಲ್ಪ ಮಟ್ಟಿಗೆ ಸುಧಾರಿಸಿದರೂ ಗ್ರಾಮೀಣ ಪ್ರದೇಶದಲ್ಲಿ ಅರ್ಚಕರು ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ತಿಳಿಸಿದರು.

ಜ್ಯೋತಿಷಿ ಆನಂದ್ ಗುರೂಜಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಅನಂತರಾಮಾಚಾರ್‌, ಗೌರವಾಧ್ಯಕ್ಷ ಎ.ವಿ.ಲಕ್ಷ್ಮೀನಾರಾಯಣಾಚಾರ್‌, ಉಪಾಧ್ಯಕ್ಷ ಆರ್‌.ಎನ್‌.ಶ್ರೀನಿವಾಸಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ರಾಜಗೋಪಾಲಾಚಾರ್‌, ಖಜಾಂಚಿ ಎನ್‌. ವರದರಾಜ ಭಟ್ಟಾಚಾರ್‌, ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್‌, ಮುಖಂಡರಾದ ಎನ್‌.ಭಾಸ್ಕರ್‌, ಸಿದ್ದಲಿಂಗ ಪ್ರಭು, ಎಂ.ವಿ.ಕೃಷ್ಣಮೂರ್ತಿ, ಎಂ.ಎಸ್‌.ವೆಂಕಟಾಚಲಯ್ಯ, ಚಂದ್ರಶೇಖರ ಶಾಸ್ತ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT