ಸೋಮವಾರ, ಸೆಪ್ಟೆಂಬರ್ 20, 2021
21 °C
ರಾಗಿ ಮಾರಾಟ ಮಾಡಿದ 7,240 ರೈತರಿಗೆ ₹46.15 ಕೋಟಿ ಪಾವತಿ

ಚಿಕ್ಕಬಳ್ಳಾಪುರ: 164 ರೈತರಿಗೆ ಬಾರದ ರಾಗಿ ಹಣ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರಕ್ಕೆ ರಾಗಿ ಮಾರಾಟ ಮಾಡಿದ ಜಿಲ್ಲೆಯ 164 ರೈತರಿಗೆ ತಾಂತ್ರಿಕ ಕಾರಣಗಳಿಂದ ಇನ್ನೂ ಹಣ ಬಿಡುಗಡೆ ಸಾಧ್ಯವಾಗಿಲ್ಲ. ಇತ್ತೀಚೆಗೆ ಮೂರನೇ ಕಂತಿನಲ್ಲಿ1,098 ರೈತರಿಗೆ ₹ 6,94,11,898 ಬಿಡುಗಡೆಯಾಗಿದೆ. ಈ ಮೂಲಕ ಜಿಲ್ಲೆಯ ಬಹುತೇಕ ರೈತರಿಗೆ ರಾಗಿ ಮಾರಾಟ ಮಾಡಿದ ಹಣ ತಲುಪಿದೆ.

ಆದರೆ ಆಧಾರ್ ಕಾರ್ಡ್‌ನಲ್ಲಿನ ಹೆಸರು ಹೊಂದಾಣಿಕೆ ಆಗದಿರುವುದು, ಬ್ಯಾಂಕ್‌ಗಳಿಂದ ತಿರಸ್ಕೃತ, ಎನ್‌ಪಿಸಿಐ ಕಾರಣಗಳಿಂದ 164 ರೈತರಿಗೆ ಹಣ ಬಿಡುಗಡೆ ಸಾಧ್ಯವಾಗಿಲ್ಲ. ಈ ರೈತರಿಗೆ ಒಟ್ಟು ₹ 1.03 ಕೋಟಿ ಬಿಡುಗಡೆ ಬಾಕಿ ಇದೆ. ಈ ತಾಂತ್ರಿಕ ಸಮಸ್ಯೆಗಳು ಪರಿಹಾರವಾದ ತಕ್ಷಣವೇ ಹಣ ರೈತರ ಖಾತೆಗೆ ಜಮೆ ಆಗುತ್ತದೆ ಎನ್ನುವರು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ‌ಅಧಿಕಾರಿಗಳು.

ಜಿಲ್ಲೆಯ ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಶಿಡ್ಲಘಟ್ಟದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಏಪ್ರಿಲ್ 30ರವರೆಗೆ ಈ ಐದು ಕೇಂದ್ರಗಳಿಗೆ ಒಟ್ಟು 7,404 ರೈತರು 1,41,303 ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದರು. ಇದರ ಒಟ್ಟು ಮೌಲ್ಯ ₹ 47.18 ಕೋಟಿಯಾಗಿತ್ತು. ಇಷ್ಟೊಂದು ಪ್ರಮಾಣದಲ್ಲಿ ರೈತರು ರಾಗಿ ಮಾರಾಟ ಮಾಡಿದ್ದು ದಾಖಲೆಯೂ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ರಾಗಿಯನ್ನು ರೈತರು ಮಾರಾಟ ಮಾಡಿದ್ದಾರೆ.

ಮೊದಲ ಹಂತದಲ್ಲಿ ರಾಗಿ ಮಾರಾಟ ಮಾಡಿದ 1,979 ರೈತರಿಗೆ ₹ 12.79 ಕೋಟಿ ಹಾಗೂ ಎರಡನೇ ಹಂತದಲ್ಲಿ 2,861 ರೈತರಿಗೆ ₹ 18.56 ಕೋಟಿ ಹಣ ಬಿಡುಗಡೆಯಾಗಿದೆ. ಈಗ ಮೂರು ತಿಂಗಳ ನಂತರ ಮೂರನೇ ಹಂತದಲ್ಲಿ 1,098 ರೈತರಿಗೆ ₹ 6,94,11,898 ಬಿಡುಗಡೆಯಾಗಿದೆ. ಇಲ್ಲಿಯವರೆಗೆ ಜಿಲ್ಲೆಯ 7,240 ರೈತರಿಗೆ ₹ 46.15 ಕೋಟಿ ಹಣ ಕೈ ಸೇರಿದೆ. 

ಹೀಗೆ ಮೂರು ಹಂತಗಳಲ್ಲಿ ಹಣ ಬಿಡುಗಡೆಯಾಗಿದ್ದರೂ ತಾಂತ್ರಿಕ ಕಾರಣಗಳಿಂದ ಇನ್ನೂ 164 ರೈತರು ಹಣ ಬಿಡುಗಡೆಯಿಂದ ದೂರವೇ ಉಳಿದಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಹಣ ಬಿಡುಗಡೆ ಆಗಿರುವುದು ಸಹಜವಾಗಿ ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ. ಮೂರು ತಿಂಗಳಿನಿಂದ ಹಣ ಬಿಡುಗಡೆ ಆಗದಿರುವ ಬಗ್ಗೆ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಜಿಲ್ಲಾಧಿಕಾರಿ ಅವರಿಗೆ ಮನವಿ ಸಹ ಸಲ್ಲಿಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.