ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೀಕರ ಕೈ ಸುಡುತ್ತಲಿವೆ ಚಿತ್ರಮಂದಿರ

ಬಾಗಿಲು ತೆರೆದರೂ ಲಾಭವಿಲ್ಲ; ಶೇ 50ರಷ್ಟು ಆಸನಗಳು ಭರ್ತಿಯೇ ಆಗುತ್ತಿಲ್ಲ
Last Updated 15 ಆಗಸ್ಟ್ 2021, 7:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶೇ 50ರಷ್ಟು ಆಸನಗಳ (ಸೀಟ್‌) ಭರ್ತಿಯೊಂದಿಗೆ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದೆ. ಹೀಗಿದ್ದರೂ ಜಿಲ್ಲೆಯ ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಸೊರಗಿವೆ. ಇತ್ತ ಬಾಗಿಲು ತೆರೆದರೂ ‘ಲಾಭ’ವಿಲ್ಲ ಎನ್ನುವ ಬೇಸರದ ಮುಖದಲ್ಲಿ ಮಾಲೀಕರು ಇದ್ದಾರೆ.

ಗುಡಿಬಂಡೆ ಹೊರೆತುಪಡಿಸಿ ಜಿಲ್ಲೆಯ ಉಳಿದ ಎಲ್ಲ ತಾಲ್ಲೂಕುಗಳಲ್ಲಿ ಎರಡರಿಂದ ಮೂರು ಚಿತ್ರಮಂದಿರಗಳಿವೆ. ರಾಜ್ಯ ಸರ್ಕಾರ ಚಿತ್ರಮಂದಿರಗಳ ಪ್ರಾರಂಭಕ್ಕೆ ಅನುಮತಿ ನೀಡಿದ ತಕ್ಷಣವೇನೂ ಜಿಲ್ಲೆಯಲ್ಲಿ ಚಿತ್ರ ಮಂದಿರಗಳು ಬಾಗಿಲು ತೆರೆಯಲಿಲ್ಲ. ಸರ್ಕಾರದ ಅನುಮತಿ ಬೆನ್ನಲ್ಲೇ ಚಿತ್ರಮಂದಿರಗಳ ಸ್ವಚ್ಛತಾ ಕಾರ್ಯ ನಡೆಯಿತು.

ಹಲವು ದಿನಗಳಿಂದ ಮಂದಿರಗಳು ಬಾಗಿಲು ಮುಚ್ಚಿದ್ದವು. ಈ ಕಾರಣದಿಂದ ಆವರಣ ದೂಳಿನಿಂದ ತುಂಬಿತ್ತು. ಈ ಎಲ್ಲವನ್ನೂ ಸ್ವಚ್ಛಗೊಳಿಸಿ ಮತ್ತೆ ಶಿಳ್ಳೆ ಕೇಕೆಯ ಸದ್ದಿಗಾಗಿ ಮಾಲೀಕರು ಮತ್ತು ಚಿತ್ರಮಂದಿರದ ಸಿಬ್ಬಂದಿ ಎದುರು ನೋಡಿದ್ದರು. ಆದರೆ ಅವರ ನಿರೀಕ್ಷೆ ಮಾತ್ರ ಈಡೇರಿಲ್ಲ.

ನಗರದ ಬಾಲಾಜಿ ಚಿತ್ರಮಂದಿರವು ಸರ್ಕಾರ ಅನುಮತಿ ನೀಡಿದ ಒಂದು ವಾರಕ್ಕೆ ಕಾರ್ಯಾರಂಭವಾಯಿತು. ಸದ್ಯ ತೆಲುಗಿನ ಪಾಗಲ್ ಸಿನಿಮಾ ಮಂದಿರಲ್ಲಿದೆ. ನಿತ್ಯ ನಾಲ್ಕು ಆಟ (ಶೋ)ಗಳು ಪ್ರದರ್ಶನಗೊಳ್ಳುತ್ತಿವೆ. ಆದರೆ ಚಿತ್ರಮಂದಿರದ ಆವರಣ ಮಾತ್ರ ಖಾಲಿ ಇರುತ್ತದೆ. ಶಿಳ್ಳೆ, ಕೇಕೆ ಇರಲಿ ಸಣ್ಣ ಮಟ್ಟದ ಸಂಭ್ರಮವೂ ಇಲ್ಲ.

ಶೇ 50ರಷ್ಟು ಆಸನಗಳ ಭರ್ತಿಗೆ ಅವಕಾಶವಿದ್ದರೂ ಶೇ 10ರಷ್ಟು ಆಸನಗಳು ಸಹ ಭರ್ತಿ ಆಗುತ್ತಿಲ್ಲ. ವಿದ್ಯುತ್, ಚಿತ್ರಮಂದಿರದ ಸಿಬ್ಬಂದಿಯ ಖರ್ಚು ವೆಚ್ಚಗಳು ಸಹ ಪ್ರದರ್ಶನದಿಂದ ದೊರೆಯುವುದು ದುಸ್ಸಾಹದ ಎನ್ನುವ ಸ್ಥಿತಿ ಇದೆ.

ಅಂದಮೇಲೆ ಚಿತ್ರಮಂದಿರಗಳ ಬಾಗಿಲು ಮುಚ್ಚಬಹುದು ಅಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಹೀಗೆ ಮುಚ್ಚುವುದರಿಂದ ಮತ್ತಷ್ಟು ನಷ್ಟಕ್ಕೆ ಮಾಲೀಕರು ಸಿಲುಕಬೇಕಾಗುತ್ತದೆ. ಪ್ರಾಜೆಕ್ಟರ್ ಸೇರಿದಂತೆ ಕೆಲವು ತಾಂತ್ರಿಕ ಪರಿಕರಗಳು ವಾರಕ್ಕೆ ಒಮ್ಮೆಯಾದರೂ ಚಾಲನೆಗೊಳ್ಳಬೇಕು. ಇಲ್ಲದಿದ್ದರೆ ಹಾಳಾಗುವ ಸಂಭವ ಇರುತ್ತದೆ. ಈ ಕಾರಣದಿಂದ ಪ್ರೇಕ್ಷಕರು ಇಲ್ಲದಿದ್ದರೂ ತೆರೆಯಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ.

ಸ್ಟಾರ್ ನಟರ ಮತ್ತು ದೊಡ್ಡ ಬಜೆಟ್‌ನ ಸಿನಿಮಾಗಳು ಬಿಡುಗಡೆ ಆಗದ ಹೊರತು ಲಾಭವಿಲ್ಲ ಎನ್ನುವುದು ಈ ಕ್ಷೇತ್ರದಲ್ಲಿ ತೊಡಗಿರುವವರ ಅನುಭವದ ಮಾತು. ಸ್ಟಾರ್ ನಟರು ಮತ್ತು ದೊಡ್ಡ ಬಜೆಟ್ ಸಿನಿಮಾಗಳು ಪ್ರದರ್ಶನಗೊಂಡರೆ ಹೆಚ್ಚು ಪ್ರೇಕ್ಷಕರು ಬರುವರು. ಆಗ ಸಹಜವಾಗಿ ಚಿತ್ರಮಂದಿಗಳ ಎದುರು ಚಿತ್ರಮಂದಿರ ತುಂಬಿದೆ ಎನ್ನುವ ಫಲಕ ಕಾಣುತ್ತದೆ. ಆದರೆ ಇಲ್ಲಿಯವರೆಗೂ ಅಂತಹ ಅವಕಾಶಗಳು ಒದಗಿಲ್ಲ.

ಚಿಕ್ಕಬಳ್ಳಾಪುರದಲ್ಲಿ ಸಂಕಷ್ಟಗಳ ನಡುವೆ ಚಿತ್ರಮಂದಿರಗಳು ತೆರೆದಿದ್ದರೆ ಉಳಿದ ತಾಲ್ಲೂಕು ಕೇಂದ್ರಗಳ ಬಹುತೇಕ ಮಂದಿರಗಳು ಬಾಗಿಲು ಮುಚ್ಚಿವೆ.

ಹಳಿಗೆ ಬಾರದ ಬದುಕು: ಟಿಕೆಟ್ ವಿತರಕ, ಸ್ವಚ್ಛತಾ ಸಿಬ್ಬಂದಿ, ಕಾವಲುಗಾರರು, ಲೆಕ್ಕ ನಿರ್ವಹಿಸುವ ನೌಕರರು, ಗೇಟ್ ಕೀಪರ್, ಬಾಕ್ಸ್ ರೂಂ ಸಿಬ್ಬಂದಿ, ಆಪರೇಟರ್, ವ್ಯವಸ್ಥಾಪಕ ಹೀಗೆ ಹಲವು ವಿಭಾಗಗಳಲ್ಲಿ ಸಿಬ್ಬಂದಿ ಚಿತ್ರಮಂದಿರಗಳಲ್ಲಿ ಕಾರ್ಯನಿರ್ವಹಿಸುವರು. ಆದರೆ ಈಗ ಚಿತ್ರಮಂದಿರ ತೆರೆಯಲು ಅವಕಾಶ ನೀಡಿದ್ದರೂ ಜಿಲ್ಲೆಯ ಕೆಲವು ಕಡೆಗಳಲ್ಲಿ ಬಹಳಷ್ಟು ಕಾರ್ಮಿಕರಿಗೆ ಅವಕಾಶಗಳು ದೊರೆಯುತ್ತಿಲ್ಲ. ಚಿತ್ರಮಂದಿರಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಮಂದಿಯ ಬದುಕಿನ ಸಂಕಷ್ಟ ಇಂದಿಗೂ ದೂರವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT