ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗಳನ್ನೇ ಮರೆತ ಸಂಸದ ಮುನಿಸ್ವಾಮಿ

ಒಂಬತ್ತು ತಿಂಗಳಾದರೂ ತಮ್ಮ ಕ್ಷೇತ್ರ ವ್ಯಾಪ್ತಿಯ ಶಿಡ್ಲಘಟ್ಟ, ಚಿಂತಾಮಣಿ ತಾಲ್ಲೂಕುಗಳ ಅಭಿವೃದ್ಧಿ ಪರಿಶೀಲಿಸದ ಸಂಸದ, ಜನಪ್ರತಿನಿಧಿಯ ಧೋರಣೆಗೆ ಮತದಾರರ ಬೇಸರ
Last Updated 18 ಫೆಬ್ರುವರಿ 2020, 9:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆ ಕಳೆದು ಒಂಬತ್ತು ತಿಂಗಳಾದರೂ ಕೋಲಾರ ಲೋಕಸಭೆ ಕ್ಷೇತ್ರದ ಸಂಸದ ಎಸ್‌.ಮುನಿಸ್ವಾಮಿ ಅವರು ತಮ್ಮ ಕ್ಷೇತ್ರ ವ್ಯಾಪ್ತಿಗೆ ಸೇರುವ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳ ಅಭಿವೃದ್ಧಿ ಪರಿಶೀಲನೆ ವಿಚಾರವಾಗಿ ಈವರೆಗೆ ಒಂದೇ ಒಂದು ಸಭೆಗೂ ಹಾಜರಾಗದೆ ಇರುವುದು ಉಭಯ ತಾಲ್ಲೂಕುಗಳ ಮತದಾರರಲ್ಲಿ ಬೇಸರ ತರಿಸಿದೆ.

ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಮುನಿಸ್ವಾಮಿ ಅವರು ರಾಜಕೀಯ ಮುತ್ಸದಿ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಪರಾಭವಗೊಳಿಸುವ ಮೂಲಕ ಅಚ್ಚರಿಯ ಗೆಲುವು ಸಾಧಿಸಿದಾಗ, ಕೆಲ ದಶಕಗಳ ಬಳಿಕ ಹೊಸ ಸಂಸದನನ್ನು ಕಂಡು ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳ ಮತದಾರರಲ್ಲಿ ಹೊಸ ಭರವಸೆಯೊಂದು ಮೂಡಿತ್ತು. ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಬಾವುಟ ಹಾರಿಸಿದ ಮುನಿಸ್ವಾಮಿ ಅವರಿಂದ ಜನರು ಸಹಜವಾಗಿಯೇ ಬದಲಾವಣೆ ಬಯಸಿದ್ದರು.

ವಾಸ್ತವ ಮಾತ್ರ ‘ಯಾರೂ ಬಂದರೂ ಪರಿಸ್ಥಿತಿ ಬದಲಾಗಲಿಲ್ಲ’ ಎನ್ನುವಂತಿದೆ, ಮುನಿಸ್ವಾಮಿ ಅವರು ಕೋಲಾರಕ್ಕೆ ಸೀಮಿತವಾಗಿ, ಚಿಂತಾಮಣಿ, ಶಿಡ್ಲಘಟ್ಟ ಮರೆತಿದ್ದಾರೆ ಎಂದು ಮತದಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಸಂಸದರಾಗಿದ್ದ ಮುನಿಯಪ್ಪ ಅವರು ಆಗಾಗ ದಿಶಾ ಸಭೆ, ಪ್ರಗತಿ ಪರಿಶೀಲನಾ ಸಭೆಗಳು, ವಿವಿಧ ಸರ್ಕಾರಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು. ಆದರೆ, ಹೊಸ ಸಂಸದರು ಆಯ್ಕೆಯಾಗಿ ಒಂಬತ್ತು ತಿಂಗಳಾದರೂ ಈವರೆಗೆ ಒಂದೇ ಒಂದು ಬಾರಿ ಮತದಾರರ ಸ್ಥಿತಿ ಅವಲೋಕಿಸುವ ಗೊಡವೆಗೆ ಹೋಗದಿರುವುದು ಚರ್ಚೆಗೆ ಎಡೆಮಾಡಿದೆ.

ಹಿಂದೆಲ್ಲ ಸಂಸದರು ಜನ ಸಾಮಾನ್ಯರ ಕಣ್ಣಿಗೆ ಕಾಣಿಸುತ್ತಿದ್ದದ್ದೇ ಚುನಾವಣೆ ಸಮಯದಲ್ಲಿ. ಶಾಸಕರು, ಪಂಚಾಯಿತಿ ಸದಸ್ಯರು, ನಗರಸಭೆ, ಪುರಸಭೆ ಸದಸ್ಯರುಗಳಷ್ಟೇ ಜನರ ಸಂಪರ್ಕದಲ್ಲಿ ಉಳಿದಿದ್ದರು. ತಮ್ಮ ಬದುಕಿನಲ್ಲಿ ಬದಲಾವಣೆ ತರಬಲ್ಲವರು ಇವರಷ್ಟೇ ಎನ್ನುವ ಭಾವನೆ ಜನರಲ್ಲಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಲೋಕಸಭೆ ಸದಸ್ಯರು ಶಾಸಕರಷ್ಟೇ ಕ್ರಿಯಾಶೀಲರಾಗಿ ಕ್ಷೇತ್ರದ ತುಂಬಾ ಓಡಾಡಬೇಕಾಗಿದೆ. ಈ ಬದಲಾವಣೆಗೆ ತೆರೆದುಕೊಳ್ಳದ ರಾಜಕಾರಣಿಗಳನ್ನು ಮತದಾರ ಒಂದಿಷ್ಟೂ ಕನಿಕರ ಇಲ್ಲದೆ ಮನೆಗೆ ಕಳಿಸಿದ ಉದಾಹರಣೆಗಳಿವೆ ಎನ್ನುತ್ತಾರೆ ರಾಜಕೀಯ ಪರಿಣಿತರು.

ಮುನಿಸ್ವಾಮಿ ಅವರು ಆಯ್ಕೆಯಾದ ಹೊಸತರಲ್ಲಿ ಚಿಂತಾಮಣಿ, ಶಿಡ್ಲಘಟ್ಟಗಳಲ್ಲಿ ನಡೆದ ಬಿಜೆಪಿ ಕಾರ್ಯಕ್ರಮಗಳಿಗಾಗಿ ಒಂದೆರಡು ಬಾರಿ ಭೇಟಿ ನೀಡಿದ್ದಾರೆ. ನಂತರ ಕಳೆದ ಅಕ್ಟೋಬರ್ 17 ರಂದು ರೈಲ್ವೆ ಪ್ರಯಾಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಆಲಿಸಲು ನೈರುತ್ಯ ರೈಲ್ವೆ ವಿಭಾಗದ ವ್ಯವಸ್ಥಾಪಕ ಎಂ.ಅಜಯ್ ಕುಮಾರ್ ಅವರೊಂದಿಗೆ ರೈಲು ಪ್ರಯಾಣ ನಡೆಸಿದ್ದರು. ಅದನ್ನು ಬಿಟ್ಟರೆ ಈವರೆಗೆ ತಮ್ಮ ವ್ಯಾಪ್ತಿಯ ತಾಲ್ಲೂಕುಗಳ ಆಗುಹೋಗುಗಳ ಬಗ್ಗೆ ಪರಿಶೀಲನೆ ನಡೆಸಿದ ಉದಾಹರಣೆ ಇಲ್ಲ.

ಜಿಲ್ಲೆಯಲ್ಲಿ ಕಳೆದ ಜನವರಿಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ರಚನೆಯಾಗಿದೆ. ಆ ಸಮಿತಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ಅವರು ಅಧ್ಯಕ್ಷರಾದರೆ, ಮುನಿಸ್ವಾಮಿ ಅವರು ಉಪಾಧ್ಯಕ್ಷರಾಗಿದ್ದಾರೆ. ಬಚ್ಚೇಗೌಡರು ತಮ್ಮ ಕ್ಷೇತ್ರಕ್ಕೆ ಮೇಲಿಂದ ಮೇಲೆ ಭೇಟಿ ನೀಡುವ ಜತೆಗೆ ದಿಶಾ ಸಭೆಯನ್ನು ಕೂಡ ನಡೆಸಿ ತಮ್ಮ ಜವಾಬ್ದಾರಿ ಮೆರೆಯುತ್ತಿದ್ದಾರೆ.

ಆದರೆ, ಮುನಿಸ್ವಾಮಿ ಅವರು ಮಾತ್ರ ದಿಶಾ ಸಭೆಗೂ ಹಾಜರಾಗಿಲ್ಲ. ಜತೆಗೆ ತಾವು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಯ ಮತದಾರರ ಸಮಸ್ಯೆಗಳನ್ನು ಯಾವೊಂದು ಸಭೆಯ ಮೂಲಕವೂ ಆಲಿಸುವ ಸೌಜನ್ಯವನ್ನೂ ತೋರಿಲ್ಲ ಎನ್ನುವುದು ಮತದಾರರಲ್ಲಿ ಆಕ್ರೋಶ ಮಡುಗಟ್ಟಿಸಿದೆ.

ಅಪರೂಪಕ್ಕೆ ಎಂಬಂತೆ ಮುನಿಸ್ವಾಮಿ ಅವರು ಕಳೆದ ಅಕ್ಟೋಬರ್‌ನಲ್ಲಿ ರೈಲ್ವೆ ಪ್ರಯಾಣಿಕರ ದೂರು ಆಲಿಸಲು ಶಿಡ್ಲಘಟ್ಟಕ್ಕೆ ಬಂದ ವೇಳೆ, ಸ್ಥಳೀಯರು ರೈಲ್ವೆ ಕೆಳಸೇತುವೆ ಅವ್ಯವಸ್ಥೆಯ ಬಗ್ಗೆ ಗಮನ ಸೆಳೆದು ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರು. ಆಗ ಮುನಿಸ್ವಾಮಿ ಅವರು 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಹೋಗಿದ್ದರು. ಅದಾಗಿ ನಾಲ್ಕು ತಿಂಗಳು ಕಳೆದರೂ ರೈಲ್ವೆ ಕೆಳಸೇತುವೆ ಅವ್ಯವಸ್ಥೆಯ ಚಿತ್ರಣ ಬದಲಾಗಲಿಲ್ಲ ಎನ್ನುವ ಬೇಸರ ಶಿಡ್ಲಘಟ್ಟದ ಪ್ರಜ್ಞಾವಂತ ನಾಗರಿಕರದು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಂಸದ ಮುನಿಸ್ವಾಮಿ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT