ಬುಧವಾರ, ಸೆಪ್ಟೆಂಬರ್ 22, 2021
22 °C
ನಂದಿಬೆಟ್ಟದಲ್ಲಿ ಸ್ಥಳ ಪರಿಶೀಲಿಸಿದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್

ಚಿಕ್ಕಬಳ್ಳಾಪುರ: 2 ವರ್ಷದೊಳಗೆ ರೋಪ್‌ ವೇ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಇದುವರೆಗೆ ಎಲ್ಲೂ ರೋಪ್ ವೇ ಮಾಡಲು ಸಾಧ್ಯವಾಗಿಲ್ಲ. ನಂದಿಬೆಟ್ಟಕ್ಕೆ ರೋಪ್ ವೇ ಮಾಡಬೇಕು ಎನ್ನುವುದು ಹಲವು ವರ್ಷಗಳ ಕನಸು. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ 2 ವರ್ಷದ ಒಳಗೆ ರೋಪ್ ವೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಸಂಬಂಧ ಶುಕ್ರವಾರ ಸ್ಥಳಪರಿಶೀಲಿಸಿ ಅವರು ಮಾತನಾಡಿದರು.

ನಂದಿಬೆಟ್ಟ ಸೂಕ್ಷ್ಮ ಪರಿಸರ ವಲಯ. ಯಾವುದೇ ರೀತಿ ಧಕ್ಕೆ ಆಗದಂತೆ ಅಭಿವೃದ್ಧಿ ಕೈಗೊಳ್ಳಲಾಗುವುದು. ಇಷ್ಟು ದಿನ ನಂದಿಬೆಟ್ಟವು ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿತ್ತು. ಈಗ ಸಂಪೂರ್ಣ ಒಡೆತನ ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟಿದೆ. ಗಿರಿಧಾಮವನ್ನು ಪರಿಸರ ಸ್ನೇಹಿ ತಾಣವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು.

ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಒಟ್ಟು 7 ಎಕರೆಯನ್ನು ಸರ್ಕಾರ ಮಂಜೂರು ಮಾಡಿದೆ. ವಾಹನ ನಿಲುಗಡೆಗೆ ಸರ್ಕಾರಿ ಜಾಗದ ಕೊರತೆ ಇದೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಒಳಪಟ್ಟ 30ರಿಂದ 35 ಎಕರೆ ಸರ್ಕಾರಿ ಜಮೀನು ಇದೆ. ಅದನ್ನು ಇಲಾಖೆಗೆ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ ಎಂದರು.

ಐಡೆಸ್ಕ್ ಸಂಸ್ಥೆಯಿಂದ ಸರ್ವೆ: ರೋಪ್ ವೇ ಅಳವಡಿಸುವ ಸಂಬಂಧ ದೇಶದ ಪ್ರತಿಷ್ಠಿತ ರೋಪ್ ವೇ ನಿರ್ಮಾಣ ಸಂಸ್ಥೆ ಐಡೆಸ್ಕ್ ಈಗಾಗಲೇ ನಂದಿಬೆಟ್ಟದಲ್ಲಿ ಸರ್ವೆ ನಡೆಸುತ್ತಿದೆ. ರೋಪ್ ವೇ ಮೂಲಕ ಎಷ್ಟು ಜನರನ್ನು ಕೊಂಡೊಯ್ಯಬಹುದು, ಎಲ್ಲಿಂದ ಎಲ್ಲಿಗೆ ಹೀಗೆ ವಿವಿಧ ರೀತಿ ಸಮೀಕ್ಷೆಗಳನ್ನು ಸಂಸ್ಥೆ ನಡೆಸುತ್ತಿದೆ. ಶೀಘ್ರದಲ್ಲಿಯೇ ಟೆಂಡರ್ ಸಹ ನಡೆಯಲಿದೆ. ಈ ಸಂಸ್ಥೆಯ ತಾಂತ್ರಿಕ ಸಲಹೆಗಳನ್ನು ಆಧರಿಸಿ ರೋಪ್ ವೇ ನಿರ್ಮಾಣವಾಗಲಿದೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಸಿಂಧೂ ರೂಪೇಶ್, ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಕಾ.ಪು ಸಿದ್ಧಲಿಂಗಸ್ವಾಮಿ, ವ್ಯವಸ್ಥಾಪಕ ನಿರ್ದೇಶಕರಾದ ವಿಜಯಶರ್ಮಾ, ಕುಮಾರ್ ಪುಷ್ಕರ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಜಿತೇಂದ್ರನಾಥ್, ಐಡೆಸ್ಕ್ ರೋಪ್ ವೇ ಸಂಸ್ಥೆಯ ಮುಖ್ಯಸ್ಥ ಲಾಲ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಆ್ಯಪ್ ಅಭಿವೃದ್ಧಿಗೆ ಚಿಂತನೆ
ಪ್ರವಾಸಿಗರ ದಟ್ಟಣೆಯನ್ನೂ ನಿಯಂತ್ರಿಸಬೇಕಾಗಿದೆ. ಬೆಳಿಗ್ಗೆ ಮತ್ತು ಸಂಜೆ ಬೆಟ್ಟ ಪ್ರವೇಶಿಸಲು ಇಂತಿಷ್ಟು ಜನರಿಗೆ ಮಾತ್ರ ಅವಕಾಶ ಮಾಡಿಕೊಡಬೇಕು. ಆ್ಯಪ್ ಅಭಿವೃದ್ಧಿಗೊಳಿಸಿದರೆ ಯಾವಾಗ ನಂದಿ ಪ್ರವಾಸಕ್ಕೆ ಹೋಗಬಹುದು ಎನ್ನುವುದು ಪ್ರವಾಸಿಗರಿಗೆ ತಿಳಿಯಲಿದೆ. ಅವರೇ ಆ್ಯಪ್ ಮೂಲಕ ದಿನ ನಿಗದಿಮಾಡಿಕೊಂಡು ಬರಬಹುದು. ಈ ದೃಷ್ಟಿಯಂದ ಆ್ಯಪ್ ಅಭಿವೃದ್ಧಿಗೂ ಚಿಂತನೆ ಇದೆ ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.