ಭಾನುವಾರ, ಜನವರಿ 24, 2021
18 °C
ಚೆಕ್‌ ಡ್ಯಾಂ ನಿರ್ಮಾಣ ನನೆಗುದಿಗೆ: ಸಾರ್ವಜನಿಕರಿಂದ ಸರ್ಕಾರಕ್ಕೆ ಮನವಿ

ಚಿತ್ರಾವತಿ ನದಿ ಪಾತ್ರದಲ್ಲಿ ಇಂಗದ ನೀರು

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಚಿತ್ರಾವತಿ ನದಿ ಪಾತ್ರದಲ್ಲಿ ನೀರು ವ್ಯರ್ಥವಾಗಿ ಹರಿದುಹೋಗುತ್ತಿದ್ದು, ಚೆಕ್‌ ಡ್ಯಾಂ ನಿರ್ಮಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಲಿದೆ. ಇದರಿಂದ ಕೃಷಿ ಹಾಗೂ ಕುಡಿಯುವ ನೀರಿಗೂ ಸಹಕಾರಿ ಆಗುತ್ತದೆ ಎಂದು ಸಾರ್ವಜನಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರದ ನಂದಿಬೆಟ್ಟದ ತಪ್ಪಲಿನಲ್ಲಿ ಬೀಳುವ ಮಳೆ ನೀರು, ವಿವಿಧ ಕೆರೆಗಳನ್ನು ತುಂಬಿ ಕೋಡಿ ಹರಿದು, ಚಿತ್ರಾವತಿ ಮೂಲಕ ಆಂಧ್ರಪ್ರದೇಶದ ಬುಕ್ಕಪಟ್ನಂನ ಕೆರೆಗೆ ಸೇರುತ್ತದೆ. ಇದರಿಂದ ಕೆರೆ, ಕುಂಟೆ ಹಾಗೂ ನದಿ ಪಾತ್ರದ ಪಕ್ಕದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಮೂಲಕ ನೀರು ಶೇಖರಣೆ ಮಾಡಿದರೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಎಂಬುದು ಜನರ ಒತ್ತಾಯ.

ತಾಲ್ಲೂಕಿನಲ್ಲಿ ಶಾಶ್ವತವಾದ ನೀರಿನ ಮೂಲಗಳು ಇಲ್ಲ. ನದಿಗಳು ಹರಿಯುವುದಿಲ್ಲ. ಮಳೆ ನೀರನ್ನು ಶೇಖರಣೆ ಮಾಡುವುದರಿಂದ ಜನ-ಜಾನುವಾರುಗಳಿಗೆ ನೀರು ಸಿಗುತ್ತದೆ. ಕೃಷಿ ಬಳಕೆಗೆ ಸಹಕಾರಿ ಆಗುತ್ತದೆ.

ಇಲ್ಲಿನ ಪ್ರಮುಖ ಬೆಳೆಗಳಾದ ನೆಲಗಡಲೆ, ಮುಸುಕಿನಜೋಳ, ರಾಗಿ, ಭತ್ತ ಬೆಳೆಯಲು ಅನುಕೂಲ ಆಗುತ್ತದೆ. ತಾಲ್ಲೂಕಿನಲ್ಲಿ ನೀರಿನ ಕೊರತೆಯಿಂದ ರೈತರು, ಸಿಮೆಂಟ್, ಗಾರೆ ಕೆಲಸ ಮಾಡುತ್ತಿದ್ದಾರೆ. ಕೂಲಿ ನಂಬಿಯೇ ಜೀವನ ನಡೆಸಬೇಕಿದೆ. ಕೆಲ ರೈತರು ಹೊಲ-ಗದ್ದೆಗಳನ್ನು ಬೀಡಾಗಿರಿಸಿ ಬೆಂಗಳೂರು, ಮುಂಬೈಗಳಿಗೆ ವಲಸೆ ಹೋಗುತ್ತಿದ್ದಾರೆ. ಅಂತರ್ಜಲದ ಮರುಪೂರಣ ಮಾಡಲು ಚೆಕ್ ಡ್ಯಾಂಗಳನ್ನು ನಿರ್ಮಿಸಬೇಕಾದ ಅನಿವಾರ್ಯತೆ ಇದೆ.

ಪಟ್ಟಣದ ಸಿವಿಲ್ ನ್ಯಾಯಾಲಯದ ಪಕ್ಕದಲ್ಲಿ ಚಿತ್ರಾವತಿ ಮೇಲುಸೇತುವೆ ಇದೆ. ಬ್ರಿಟಿಷರು ಅತ್ಯಂತ ಪೂರ್ವಯೋಜಿತವಾಗಿ ನೀರು ಸಂಗ್ರಹ ಮಾಡಲು ಚೆಕ್ ಡ್ಯಾಂ ನಿರ್ಮಿಸಿದ್ದಾರೆ. ಇದನ್ನು ಚಿತ್ರಾವತಿ ಕಣಜ ಎಂದು ಕರೆಯಲಾಗುತ್ತದೆ. ಇದೇ ಚೆಕ್ ಡ್ಯಾಂನಲ್ಲಿ ನೀರು ಶೇಖರಣೆ ಆಗಿದೆ. ಈ ನೀರು ಜಾನುವಾರುಗಳ ದಾಹ ನೀಗಿಸುತ್ತಿದೆ.

ಇದೇ ಚೆಕ್ ಡ್ಯಾಂ ಪಕ್ಕದಲ್ಲಿ ಸಣ್ಣ ಕಾಲುವೆಗಳನ್ನು ನಿರ್ಮಿಸಲಾಗಿದೆ. ಮಳೆನೀರು ಹರಿಯುವ ಸಂದರ್ಭದಲ್ಲಿ ಕಾಲುವೆಗಳ ಮೂಲಕ ಅಕ್ಕಪಕ್ಕದ ಹೊಲ-ಗದ್ದೆಗಳಿಗೆ ಹರಿಯುವಂತೆ ಮಾಡಿದ್ದಾರೆ. ಮಳೆಯನ್ನೇ ನಂಬಿಕೊಂಡ ಕೃಷಿಕರು, ಇದೇ ಕಾಲುವೆಗಳ ಮೂಲಕ ನೀರನ್ನು ಹೊಲ-ಗದ್ದೆಗಳಿಗೆ ಹರಿಸಿ ಸಮೃದ್ಧವಾಗಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ರೈತರ ಆರ್ಥಿಕತೆಗೆ ಸಹಕಾರಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು