ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ದಶಕದಿಂದ ನೀರಿಲ್ಲ, ರಸ್ತೆ ಕಂಡಿಲ್ಲ

ಪಾತಪಾಳ್ಯ ಹೋಬಳಿಯ ವಾಲಿಬಾಲ್ ಗುಟ್ಟೆ ಕಾಲೊನಿ ದುಃಸ್ಥಿತಿ
Last Updated 6 ಜನವರಿ 2021, 4:56 IST
ಅಕ್ಷರ ಗಾತ್ರ

ಚೇಳೂರು: ಕನಿಷ್ಠ ಮೂಲಭೂತ ಸೌಲಭ್ಯಗಳಲ್ಲಿದೆ ಕೊಳಚೆ ಪ್ರದೇಶದಲ್ಲಿ ವಾಸಿಸುವ ದುಃಸ್ಥಿತಿ ಪಾತಪಾಳ್ಯ ಗ್ರಾಮದ ವಾಲಿಬಾಲ್ ಗುಟ್ಟೆ ಕಾಲೊನಿಯಲ್ಲಿದೆ. ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಇಲ್ಲಿನ ನಾಗರಿಕರಿಗೆ ಮಾತ್ರ ಕನಿಷ್ಠ ಮೂಲಸೌಲಭ್ಯಗಳು ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಪಾತಪಾಳ್ಯ ಗ್ರಾಮ ಪಂಚಾಯಿತಿ ಕೇಂದ್ರ ಹಾಗೂ ಹೋಬಳಿ ಕೇಂದ್ರ ಸ್ಥಾನ. ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂಭಾಗದಲ್ಲಿರುವ ವಾಲಿಬಾಲ್ ಗುಟ್ಟ ಕಾಲೊನಿ ನಿವಾಸಿಗಳಿಗೆ ಕನಿಷ್ಠ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ. ಮುಖ್ಯರಸ್ತೆಗೆ ಹೊಂದಿಕೊಂಡಿರುವ ಈ ಕಾಲೊನಿಗೆ ಕಾಲ್ನಡಿಗೆಯಲ್ಲೆ ತೆರಳಬೇಕಾದರೂ ಕಷ್ಟಸಾಧ್ಯವಾಗಿದೆ. ಇಲ್ಲಿನ ರಸ್ತೆಗಳು ಸಂಪೂರ್ಣ ಇಂದಿಗೂ ಕಾಡು ಕಲ್ಲಿನ ರಸ್ತೆಗಳಾಗಿದ್ದು, ರಸ್ತೆ ಮತ್ತು ಮನೆಗಳ ಮುಂಭಾಗದಲ್ಲಿ ಚರಂಡಿಗಳು ನಿರ್ಮಾಣ ಮಾಡದ ಕಾರಣ, ನಿತ್ಯ ಬಳಕೆ ಹಾಗೂ ಶೌಚಾಲಯ ಕೊಳಚೆ ನೀರು ನಿಂತಲ್ಲೆ ನಿಂತುಕೊಂಡಿರುತ್ತದೆ.

ಇನ್ನು ಕೆಲ ಸಾರ್ವಜನಿಕರು ಮನೆಗಳ ಮಧ್ಯದಲ್ಲಿರುವ ಖಾಲಿ ಜಾಗದಲ್ಲಿ ಗುಂಡಿಗಳನ್ನು ತೋಡಿಕೊಂಡು ಚರಂಡಿಯ ಕೊಳಚೆ ನೀರನ್ನು ಬಿಡುತ್ತಿದ್ದಾರೆ. ಕೊಳಚೆ ನೀರಿನ ಗುಂಡಿಗಳಿಂದ ಸೊಳ್ಳೆಗಳ ಸಂತತಿ ಹೆಚ್ಚಾಗುವುದರ ಜೊತೆಗೆ ಗಬ್ಬು ವಾಸನೆ ಬೀರುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ಅನೇಕ ರೀತಿಯ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಸರಬರಾಜು ಇಲ್ಲದೆ ಪರದಾಡುವ ಪರಿಸ್ಥಿತಿ ಇದೆ.

ಜಿ.ಪಂ, ತಾ.ಪಂ ಹಾಗೂ ಗ್ರಾ.ಪಂ ಚುನಾವಣೆಗಳ ಸಮಯದಲ್ಲಿ ಮತಗಳಗಾಗಿ ಇಲ್ಲಿನ ನಿವಾಸಿಗಳ ಮನೆಗಳ ಬಳಿ ತೆರಳುವ ಮತಯಾಚನೆ ಮಾಡುವ ರಾಜಕಾರಣಿಗಳಿಗೆ ಈ ಭಾಗದ ಜನರ ಮೂಲ ಸೌಲಭ್ಯಗಳು ಹಾಗೂ ಜಲ್ವಂತ ಸಮಸ್ಯೆಗಳು ಕಣ್ಣಿಗೆ ಕಾಣಿಸುವುದಿಲ್ಲವೆ ಎಂಬ ನಾಗರಿಕರ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಕಾಳಜಿ ಇಲ್ಲದ ಅಧಿಕಾರಿಗಳು

ವಾಲಿಬಾಲ್ ಗುಟ್ಟ ಕಾಲೊನಿಯ ನಿವಾಸಿಗಳಿಗೆ ಮೂಲಸೌಲಭ್ಯಗಳು ಕಲ್ಪಿಸುವಲ್ಲಿ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರಿಸಿದ್ದಾರೆ. ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡುತ್ತಿದ್ದರು ಕಾಳಜಿ ಇಲ್ಲದ ಅಧಿಕಾರಿಗಳ ಧೋರಣೆಯಿಂದ ಇಲ್ಲಿನ ನಿವಾಸಿಗಳ ಸೌಲಭ್ಯ ವಂಚಿತರಾಗಿದ್ದಾರೆ

- ಮೂರ್ತಿ, ಅಂಬೇಡ್ಕರ್ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ

***

ಅನುದಾನದ ಕೊರತೆ

ಪಾತಪಾಳ್ಯ ಗ್ರಾಮದ ವಾಲಿಬಾಲ್ ಗುಟ್ಟ ಕಾಲೊನಿ ಎತ್ತರದ ಪ್ರದೇಶದಲ್ಲಿದ್ದು, ಸಮತಟ್ಟು ಇಲ್ಲದ ಕಾರಣ ರಸ್ತೆ ಮತ್ತು ಚರಂಡಿಗಳ ನಿರ್ಮಾಣಕ್ಕೆ ಅಡಚಣೆ ಉಂಟಾಗಿದೆ. ಕಾಲೊನಿಯ ಸಂಪೂರ್ಣ ರಸ್ತೆಗಳನ್ನು ಏಕಕಾಲದಲ್ಲಿ ನಿರ್ಮಿಸಿ ಎಂಬ ಸ್ಥಳೀಯರ ಬೇಡಿಕೆಗೆ ಗ್ರಾ.ಪಂನಲ್ಲಿ ಅಗತ್ಯ ಅನುದಾನದ ಕೊರತೆ ಇದೆ. ಹಂತ ಹಂತವಾಗಿ ಸೌಲಭ್ಯಗಳನ್ನು ಕಲ್ಪಿಸುತ್ತೇವೆ.

- ಜಿ.ವಿ.ನಾರಾಯಣ, ಪಿಡಿಒ, ಪಾತಪಾಳ್ಯ ಗ್ರಾ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT