ಮಂಗಳವಾರ, ಸೆಪ್ಟೆಂಬರ್ 22, 2020
21 °C
ನಗರದಲ್ಲಿ ಕಾರ್ಯಾಚರಣೆ ನಡೆಸಿ ಪ್ಲಾಸ್ಟಿಕ್ ಕೈಚೀಲ ಕೊಂಡೊಯ್ಯುತ್ತಿದ್ದವರಿಗೆ ದಂಡ ವಿಧಿಸಿ, ಬಟ್ಟೆ ಕೈಚೀಲ ವಿತರಿಸಿದ ಜಿಲ್ಲಾಧಿಕಾರಿ, ಎಸ್‌ಪಿ

ನಿಷೇಧಿತ ಪ್ಲಾಸ್ಟಿಕ್ ಬಳಸಿದರೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು ಅವರು ಗುರುವಾರ ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪ್ಲಾಸ್ಟಿಕ್ ಕೈಚೀಲ ಕೊಂಡೊಯ್ಯುತ್ತಿದ್ದ ಪಾದಚಾರಿಗಳಿಗೆ ದಂಡ ವಿಧಿಸಿ, ಬಟ್ಟೆ ಕೈಚೀಲ ನೀಡಿ ಬಳಸುವಂತೆ ಸಲಹೆ ನೀಡಿದರು.

ನಗರದ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತ ಕಾರ್ಯಾಚರಣೆ ನಡೆಸಿದ ಈ ಇಬ್ಬರು ಅಧಿಕಾರಿಗಳು ಅಂಗಡಿಗಳಿಂದ ಪ್ಲಾಸ್ಟಿಕ್ ಕೈಚೀಲದಲ್ಲಿ ವಸ್ತುಗಳನ್ನು ಕೊಂಡೊಯ್ಯುತ್ತಿದ್ದ ಪಾದಚಾರಿಗಳಿಗೆ ಹಾಗೂ ಪ್ಲಾಸ್ಟಿಕ್ ಕೈಚೀಲ ನೀಡಿದ ಅಂಗಡಿ ಮಾಲೀಕರಿಗೆ ₹200 ದಂಡ ವಿಧಿಸಿದರು. ದಂಡ ಪಾವತಿಸಿದವರಿಗೆ ಬಟ್ಟೆ ಕೈಚೀಲಗಳನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ಅನಿರುದ್ಧ್ ಶ್ರವಣ್, ‘2016ರಿಂದ ಇಡೀ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಈ ಕುರಿತು ಈಗಾಗಲೆ ಜಿಲ್ಲೆಯ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದರೆ ನಾಗರಿಕರು ಅರಿವಿಲ್ಲದಂತೆ ಪ್ಲಾಸ್ಟಿಕ್ ಬಳಕೆಯನ್ನು ಹೆಚ್ಚೆಚ್ಚು ಮಾಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗುರುವಾರದಿಂದ (ಆ.1) ಕಟ್ಟುನಿಟ್ಟಾಗಿ ದಂಡ ಹಾಕುವುದಾಗಿ ಮೊದಲೇ ಘೋಷಣೆ ಮಾಡಿದ್ದೆವು’ ಎಂದು ಹೇಳಿದರು.

‘ಪ್ರಥಮ ಹಂತವಾಗಿ ಚಿಕ್ಕಬಳ್ಳಾಪುರ ನಗರದಲ್ಲಿ ಗುರುವಾರ ಪ್ಲಾಸ್ಟಿಕ್ ಕೈಚೀಲ ಕೊಂಡೊಯ್ಯುತ್ತಿದ್ದವರಿಗೆ ದಂಡ ವಿಧಿಸಲಾಗಿದೆ. ಸಾರ್ವಜನಿಕರು ಇನ್ನು ಮುಂದೆ ಯಾವುದೇ ರೀತಿಯಾ ಪ್ಲಾಸ್ಟಿಕ್ ಲೋಟ, ಚಮಚ, ತಟ್ಟೆ ಇವುಗಳನ್ನು ಬಳಕೆ ಮಾಡಬಾರದು. ಬಳಕೆ ಮಾಡಿದವರಿಗೆ ತಲಾ ₹200 ದಂಡ ವಿಧಿಸಲಾಗುವುದು. ಸಾರ್ವಜನಿಕರು ಕೂಡ ಎಲ್ಲಿಯಾದರೂ ಪ್ಲಾಸ್ಟಿಕ್ ಬಳಕೆ ಮಾಡುವುದು ಗಮನಕ್ಕೆ ಬಂದರೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ತಿಳಿಸಿದರು. ನಗರಸಭೆ ಆಯುಕ್ತ ಉಮಾಕಾಂತ್ ಈ ವೇಳೆ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.