ಮಂಗಳವಾರ, ಫೆಬ್ರವರಿ 25, 2020
19 °C
ಥಂಡಿಗೆ ಥರಗುಡುತ್ತಿರುವ ಗಡಿ ಜಿಲ್ಲೆಯ ಜನ, ಬೆಚ್ಚನೆ ಉಡುಗೆ ಇಲ್ಲದೆ ಹೊರಗೆ ಹೆಜ್ಜೆ ಇಡಲಾಗದ ಪರಿಸ್ಥಿತಿ

ಕವಿದ ಮೋಡ, ಜನಜೀವನ ಗಡಗಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕಳೆದ ಒಂದು ವಾರದಿಂದ ಈಚೆಗೆ ಗಡಿಭಾಗದ ಜಿಲ್ಲೆಯ ಜನರು ಥರಗುಟ್ಟು ನಡುಗುತ್ತಿದ್ದಾರೆ. ರಾಜ್ಯದಾದ್ಯಂತ ಕುಸಿತ ಕಂಡಿರುವ ತಾಪಮಾನ ಜಿಲ್ಲೆಯನ್ನೂ ಬಿಟ್ಟಿಲ್ಲ. ಪರಿಣಾಮ, ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ತೀವ್ರ ಚಳಿಯ ಅನುಭವವಾಗುತ್ತಿದೆ.

ಚಳಿಗಾಲದ ಸಾಮಾನ್ಯ ಚಳಿಯ ಜತೆಗೆ ದಿಢೀರ್‌ನೇ ಉಂಟಾದ ಈ ಹವಾಮಾನ ವೈಪರೀತ್ಯ ಹುಟ್ಟಿಸಿದ ಮೈ ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಶನಿವಾರ ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದರು. ಮನೆಯಿಂದ ಹೊರಗಡೆ ಹೋಗುವವರೆಲ್ಲ ಸ್ವೆಟರ್‌, ಟೋಪಿ, ರೇನ್‌ಕೋಟ್‌ ಧರಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು.

ಶನಿವಾರ ಬೆಳಿಗ್ಗೆಯಿಂದಲೇ ಕವಿದ ಮೋಡಗಳು ಕರಗಿ ಬಿಸಿಲು ಹರಿಯಲೇ ಇಲ್ಲ. ಬಹುತೇಕರು ಚಳಿಯಿಂದಾಗಿ ಮನೆಯಲ್ಲೇ ಕಳೆದರು. ತಣ್ಣನೆಯ ಗಾಳಿ ಮೈ ನಡುಕ ಉಂಟು ಮಾಡುತ್ತಿದ್ದ ಕಾರಣಕ್ಕೆ ಜನರು ದಿನವೀಡಿ ಮನೆ ಕಿಟಕಿ, ಬಾಗಿಲುಗಳನ್ನು ಮುಚ್ಚಿಯೇ ಇದ್ದರು.

ಕೊರೆಯುವ ಚಳಿ ಜನಜೀವನದ ಮೇಲೆ ಪರಿಣಾಮ ಬೀರಿದೆ. ಬೆಳಿಗ್ಗೆ ವಾಯುವಿಹಾರ ಮಾಡುತ್ತಿದ್ದವರೆಲ್ಲ ಮನೆಯಿಂದ ಹೊರ ಬರಲು ಅಂಜುತ್ತಿದ್ದಾರೆ. ಅದರಲ್ಲೂ ಕಾಯಿಲೆ ಪೀಡಿತರಂತೂ ಹೊರ ಹೋಗಲು ಭಯ ಪಡುತ್ತಿದ್ದಾರೆ. ಹಾಲು, ಪತ್ರಿಕೆ ಸೇರಿ ಅಗತ್ಯ ವಸ್ತುಗಳನ್ನು ಬೆಳಿಗ್ಗೆಯೇ ಸರಬರಾಜು ಮಾಡುತ್ತಿದ್ದವರು ಈಗ ತಮ್ಮ ಕೆಲಸವನ್ನು ಸ್ವಲ್ಪ ತಡ ಮಾಡುತ್ತಿದ್ದಾರೆ.

ಬೆಳಿಗ್ಗೆ ಹೆಚ್ಚಿನ ಮಂಜು ಆವರಿಸಿ, ಇಬ್ಬನಿ ಬೀಳುತ್ತಿದೆ. ಇದರಿಂದಾಗಿ, ಬೆಳಗಿನ ವೇಳೆ ಉದ್ಯಾನಗಳು ಹಾಗೂ ಮೈದಾನಗಳಿಗೆ ವಾಯುವಿಹಾರಕ್ಕೆ ಅಥವಾ ಆಡಲು ಬರುವವರ ಸಂಖ್ಯೆ ಕ್ಷೀಣಿಸಿದೆ ಅಥವಾ ಸೂರ್ಯನ ಕಿರಣಗಳು ಭೂರಮೆಯನ್ನು ಬೆಳಗಿದ ನಂತರ ಈ ಚಟುವಟಿಕೆಗಳಿಗೆ ಜನರು ಮುಂದಾಗುತ್ತಿರುವುದು ಸಾಮಾನ್ಯವಾಗಿದೆ.

ಜನರು ಅಲ್ಲಲ್ಲಿ ಕಾಗದ, ಸೌದೆ ಅಥವಾ ಕಸಕಡ್ಡಿ ಒಟ್ಟುಗೂಡಿಸಿ ಬೆಂಕಿ ಹಚ್ಚಿ ಬಿಸಿ ಕಾಯಿಸಿಕೊಳ್ಳುವುದು ಸಾಮಾನ್ಯವಾಗಿದೆ. ಬೆಳಿಗ್ಗೆಯೇ ಶಾಲಾ–ಕಾಲೇಜುಗಳಿಗೆ ಹೋಗುವವರು ಸ್ವೆಟರ್‌, ಉಣ್ಣೆಯ ಟೋಪಿಗಳ ಮೊರೆ ಹೋಗುತ್ತಿದ್ದಾರೆ. ಜತೆಗೆ ಸಂಜೆ, ಬೆಳಿಗ್ಗೆ ಬಿಸಿ ಬಿಸಿ ಚಹಾ, ಕಾಫಿ, ಕಷಾಯ, ಸೂಪ್ ಹೀರಿ ಬೆಚ್ಚಾಗಾಗುತ್ತಿದ್ದಾರೆ. ಕುರುಕಲು ತಿಂಡಿ, ಬಿಸಿ ಮಿರ್ಚಿ, ಬಜ್ಜಿ, ಪಕೋಡ ಸವಿಯುತ್ತಿದ್ದಾರೆ. ಕಾಫಿ ಮತ್ತು ಟೀ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ಕಾಣುತ್ತಿದೆ.

ನಾಲ್ಕೈದು ದಿನಗಳಿಂದ ರಾತ್ರಿಯಿಡಿ ಚಳಿಯ ಅನುಭವ ತೀವ್ರವಾಗುತ್ತಿದೆ. ಚಳಿಯ ಕಾರಣಕ್ಕೆ ರಾತ್ರಿ ಅಂಗಡಿಗಳು ಬೇಗನೆ ಬಂದ್‌ ಆಗುತ್ತಿವೆ. ಬೆಳಿಗ್ಗೆ ತೆರೆಯುವುದೂ ತಡವಾಗುತ್ತಿದೆ. ತಣ್ಣೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಇದ್ದವರೂ ಬಿಸಿನೀರಿಗೆ ಮೊರೆಹೋಗುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಬಿಸಿಲಿದ್ದರೂ, ಶೀತದ ಅನುಭವ ಆಗುತ್ತಿದೆ. ಚಳಿಯಿಂದಾಗಿ ನಸುಕಿನಲ್ಲಿ ಎದ್ದು ಹಾಲು ಕರೆಯಬೇಕಾದ ಹೈನುಗಾರರಿಗಂತೂ ಹೈರಾಣಾಗಿ ಹೋಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು