ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದ ಪರಿಭಾಷೆ ಬದಲಾಗಬೇಕು: ಸ್ಯಾಮ್ ಪಿತ್ರೋಡಾ

Last Updated 29 ಏಪ್ರಿಲ್ 2018, 8:32 IST
ಅಕ್ಷರ ಗಾತ್ರ

ಮಂಗಳೂರು: ‘ಭಾರತದ ರಾಜಕೀಯ ಪರಿಭಾಷೆ ಸಂಪೂರ್ಣವಾಗಿ ಬದಲಾಗಬೇಕು. ಈಗ ನಮ್ಮ ರಾಜಕಾರಣವನ್ನು ಧರ್ಮ ಆವರಿಸಿಕೊಂಡಿದ್ದು, ಅದರ ಸ್ಥಾನದಲ್ಲಿ ಅಭಿವೃದ್ಧಿಯನ್ನು ತರಬೇಕಿದೆ’ ಎಂದು ಕಾಂಗ್ರೆಸ್‌ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಭಾನುವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ರಾಜಕೀಯದಲ್ಲಿರುವ ಹಲವರು ಈಗ ಧರ್ಮ ಮತ್ತು ಅದರ ಸುತ್ತಲಿನ ವಿಚಾರಗಳ ಬಗ್ಗೆಯೇ ಮಾತನಾಡುತ್ತಾರೆ. ಇದರಿಂದ ಭಾರತದ ರಾಜಕಾರಣ ದಿಕ್ಕು ತಪ್ಪಿದಂತಾಗಿದೆ. ಈಗಿನ ಪರಿಸ್ಥಿತಿ ನೋಡಿದರೆ ನೋವಾಗುತ್ತದೆ. ಅಭಿವೃದ್ಧಿಯ ಕುರಿತ ಚರ್ಚೆಯೇ ನಮ್ಮ ರಾಜಕಾರಣದ ಪ್ರಧಾನ ಭಾಗವಾಗಬೇಕು’ ಎಂದರು.

ಕರ್ನಾಟಕದ ಚುನಾವಣೆ ದೇಶದ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮಹತ್ವವಾದುದು. ಇದು 2019ರ ಲೋಕಸಭಾ ಚುನಾವಣೆಯ ಮೇಲೆ ಗಾಢವಾದ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ಈಗ ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿಗಳ ಸಾಗರದಂತಾಗಿವೆ. ರಾಜಕೀಯ ವಿರೋಧಿಗಳನ್ನು ಹಳಿಯುವುದಕ್ಕೆ ಸುಳ್ಳು ಸುದ್ದಿ ಬಿತ್ತುವ ಪಡೆಯನ್ನೇ ಕಟ್ಟಿಕೊಳ್ಳಲಾಗಿದೆ. 70 ವರ್ಷ ಈ ದೇಶದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂಬುದು ದೇಶದ ಜನರಿಗೆ ಮಾಡುವ ಅವಮಾನ. ಅಂದುಕೊಂಡಂತೆ ಕೆಲವು ಕೆಲಸಗಳಲ್ಲಿ ಗುರಿ ತಲುಪದೇ ಇರಬಹುದು, ಆದರೆ ದೇಶದ ಈಗ ಏನಾಗಿದೆಯೋ ಅದಕ್ಕೆ 70 ವರ್ಷಗಳ ಪರಿಶ್ರಮವೇ ಕಾರಣ ಎಂದು ಹೇಳಿದರು.

‘ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ನಾನು ಅವರ ಸಲಹೆಗಾರನಾಗಿ ಕೆಲಸ ಮಾಡಿದ್ದೆ. ಆಗ ದೇಶದಲ್ಲಿ ದೂರವಾಣಿ ಸಂಪರ್ಕಗಳ ಸಂಖ್ಯೆ 20 ಲಕ್ಷ ಮಾತ್ರ. ಈಗ 200 ಕೋಟಿ ದೂರವಾಣಿ ಸಂಪರ್ಕಗಳಿವೆ. ಇದಕ್ಕೆ ಕಾರಣ ಯಾರು? ಆ ಕಾಲದಲ್ಲಿ ದೇಶದಿಂದ ಪೋಲಿಯೊ ರೋಗವನ್ನು ನಿರ್ಮೂಲನೆ ಮಾಡುವ ಕೆಲಸಕ್ಕೆ ಬೀಜ ಬಿತ್ತಲಾಯಿತು. ರಾಜೀವ್‌ ಗಾಂಧಿಯವರ ಕಾಲದಲ್ಲಿ ಆದ ಕೆಲಸಗಳಿಂದಾಗಿಯೇ ದೇಶ ಈಗ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರು ಜಗತ್ತಿನ ಗಮನ ಸೆಳೆಯುತ್ತಿದೆ’ ಎಂದರು.

ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ ಬಡತನ ತೀವ್ರವಾಗಿ ಕಾಡುತ್ತಿತ್ತು. ಬಡವರನ್ನು ಆರ್ಥಿಕವಾಗಿ ಮೇಲೆತ್ತುವುದಕ್ಕೆ ಸಾಕಷ್ಟು ಶ್ರಮಿಸಲಾಗಿದೆ. ಈ ಕಾರಣದಿಂದಾಗಿಯೇ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತುಸು ಹಿನ್ನಡೆಯೂ ಆಗಿರಬಹುದು. ಆದರೆ, ತ್ರಿಪುರಾದ ಒಂದು ಹಳ್ಳಿಗೆ ವಿದ್ಯುತ್‌ ಸಂಪರ್ಕ ನೀಡಿ ಬಿಜೆಪಿ ಸರ್ಕಾರ ಬೆನ್ನು ತಟ್ಟಿಕೊಳ್ಳುವುದು ಸಮಂಜಸ ಎನಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಂಗಳೂರು ನಗರ ಕಳೆದ ಐದು ವರ್ಷಗಳ ಅವಧಿಯಲ್ಲಿ ಸಾಕಷ್ಟು ಪಡೆದಿದೆ. ರಾಜ್ಯ ಸರ್ಕಾರ ನಗರದ ಅಭಿವೃದ್ಧಿಗಾಗಿ ಮಹತ್ವದ ಕೆಲಸಗಳನ್ನು ಮಾಡಿದೆ. ಇನ್ನೂ ಕೆಲಸಗಳಾಗಬೇಕಿದೆ. ಅದನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಐದು ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸುವುದು, ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು, ಕೌಶಲ ಅಭಿವೃದ್ಧಿ ಇವೆಲ್ಲವೂ ಕಾಂಗ್ರೆಸ್‌ ‍ಪ್ರಣಾಳಿಕೆಯ ಭಾಗವಾಗಿವೆ ಎಂದು ತಿಳಿಸಿದರು.

ಜನರ ಮಾತು ಕೇಳಿ ಪ್ರಣಾಳಿಕೆ

ಜನರ ಮಾತು ಆಲಿಸಿ ಪ್ರಣಾಳಿಕೆ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕಾಂಗ್ರೆಸ್ ಆರಂಭಿಸಿದೆ. ಗುಜರಾತ್‌ ಚುನಾವಣೆಯ ಬಳಿಕ ಕರ್ನಾಟಕದಲ್ಲೂ ಈ ಕೆಲಸ ಆಗಿದೆ. ಮುಂಬರುವ ಲೋಕಸಭಾ ಚುನಾವಣೆಗೂ ಇದೇ ಮಾದರಿಯಲ್ಲಿ ಪ್ರಣಾಳಿಕೆ ರೂಪಿಸಲಾಗುವುದು. ಜನರೊಂದಿಗಿನ ಸಂವಾದವನ್ನು ಯಾವ ಸಮಯದಲ್ಲಿ ಆರಂಭಿಸಬೇಕು ಎಂಬುದನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನಿರ್ಧರಿಸುತ್ತಾರೆ ಎಂದರು.

ಕರ್ನಾಟಕದ ಪ್ರಣಾಳಿಕೆ ತಯಾರಿಸುವ ಕೆಲಸದಲ್ಲಿ ತಾವು ನೇರವಾಗಿ ಯಾವುದೇ ಪಾತ್ರ ನಿರ್ವಹಿಸಿಲ್ಲ. ಈ ಕುರಿತು ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಅವರೊಂದಿಗೆ ಚರ್ಚಿಸಲಾಗಿತ್ತು. ಎಲ್ಲ ಪ್ರದೇಶಗಳ ವಿಚಾರಗಳಿಗೆ ಸ್ಪಂದಿಸುವಂತಹ ಪ್ರಣಾಳಿಕೆಯನ್ನು ಕಾಂಗ್ರೆಸ್ ರೂಪಿಸಿದೆ ಎಂದು ಉತ್ತರಿಸಿದರು.

ಎಐಸಿಸಿ ಕಾರ್ಯದರ್ಶಿ ಮಧು ಯಾಸ್ಕಿ ಗೌಡ್‌, ಮಹಾರಾಷ್ಟ್ರದ ಮಾಜಿ ಸಚಿವ ಸುರೇಶ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಕಾರ್ಯದರ್ಶಿ ನವೀನ್‌ ಡಿಸೋಜ ಉಪಸ್ಥಿತರಿದ್ದರು.

ಸೌಹಾರ್ದ ಭಾರತ ಬೇಕು

‘ನಾನು ಹುಟ್ಟಿದ್ದು 1942ರಲ್ಲಿ. ನನ್ನ ನೆರೆಹೊರೆಯಲ್ಲಿ ಮುಸ್ಲಿಮರು, ಪಂಜಾಬ್‌ನ ಕ್ರೈಸ್ತರು, ಮಾರವಾಡಿಗಳು, ಗುಜರಾತಿಗಳು ಎಲ್ಲರೂ ಇದ್ದರು. ಒಬ್ಬರಿಗೊಬ್ಬರು ಹೊಂದಿಕೊಂಡು ಬದುಕಿದೆವು. ಒಬ್ಬರ ಮಕ್ಕಳನ್ನು ಇನ್ನೊಬ್ಬರು ತಬ್ಬಿ ಪ್ರೀತಿಸುತ್ತಿದ್ದರು. ಅಭಿವೃದ್ಧಿಯ ಜೊತೆಯಲ್ಲೇ ಅಂತಹ ಸೌಹಾರ್ದ ಭಾರತ ನಮಗೆ ಬೇಕು’ ಎಂದು ಸ್ಯಾಮ್‌ ಪಿತ್ರೋಡಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT