ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿಗೆ ಯಾರು ಸಾರಥಿ?

ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇಂದು: 144 ಸೆಕ್ಷನ್ ಜಾರಿ
Last Updated 1 ನವೆಂಬರ್ 2020, 4:20 IST
ಅಕ್ಷರ ಗಾತ್ರ

ಚಿಂತಾಮಣಿ: ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಭಾನುವಾರ ನಗರಸಭೆಯ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ.

ಚುನಾವಣೆ ಕುರಿತು ಚುನಾವಣಾ ಅಧಿಕಾರಿಯೂ ಆದ ಉಪವಿಭಾಗಾಧಿಕಾರಿ ರಘುನಂದನ್ ಸದಸ್ಯರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಶಾಂತಿ ಸುವ್ಯವಸ್ಥೆ ಕಾಪಾಡಲು ನವೆಂಬರ್ 1 ರಂದು ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಗರಸಭೆ ಕಚೇರಿಯಿಂದ ಸುತ್ತಲೂ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ ಸೆಕ್ಷನ್ 144 ಜಾರಿಗೊಳಿಸಿ ದಂಡಾಧಿಕಾರಿ ಡಿ.ಹನುಮಂತರಾಯಪ್ಪ ಆದೇಶ ಹೊರಡಿಸಿದ್ದಾರೆ.

ಕುತೂಹಲದ ಸಮಬಲ: ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬಣ ಮತ್ತುಜೆಡಿಎಸ್ ಸಮಬಲದ ಸದಸ್ಯರನ್ನು ಹೊಂದಿರುವುದರಿಂದ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ (ಬ) ಮಹಿಳೆಗೆ ಮೀಸಲಾಗಿಡಲಾಗಿದೆ.

ನಗರದ 31 ನೇ ವಾರ್ಡ್ ತಿಮ್ಮಸಂದ್ರದಿಂದ ಆಯ್ಕೆಯಾಗಿರುವ ಜೆಡಿಎಸ್ ಅಭ್ಯರ್ಥಿ ಟಿ.ವಿ.ಮಂಜುಳ ಹಾಗೂ 27 ನೇ ವಾರ್ಡ್ ಶಾಂತಿನಗರದಿಂದ ಆಯ್ಕೆಯಾಗಿರುವ ಡಾ.ಎಂ.ಸಿ.ಸುಧಾಕರ್ ಬಣದ ಕೆ.ರಾಣಿಯಮ್ಮ ಅಧ್ಯಕ್ಷ ಪದವಿಯ ಆಕಾಂಕ್ಷಿಗಳು.

ಜೆಡಿಎಸ್‌ನಿಂದ ಆಯ್ಕೆಯಾಗಿರುವ ಮಹ್ಮದ್ ಶಫೀಕ್ ನಡೆ ನಿಗೂಢವಾಗಿದೆ. ಶಾಸಕರು ಹಾಗೂ ಜೆಡಿಎಸ್ ಮುಖಂಡರ ವಿರುದ್ಧ ಮುನಿಸಿಕೊಂಡಿರುವ ಶಫೀಕ್ ತಮ್ಮ ನಿರ್ಧಾರವನ್ನು ಬಹಿರಂಗಗೊಳಿಸಿಲ್ಲ. ಶಾಸಕರು ಹಾಗೂ ಪಕ್ಷದ ಸ್ಥಳೀಯ ಮುಖಂಡರ ವಿರುದ್ಧ ಟೀಕೆ ಮಾಡುತ್ತಿದ್ದ ಶಫೀಕ್ ಕಳೆದ 2-3 ದಿನಗಳಿಂದ ಯಾರ ಕೈಗೂ ಸಿಗುತ್ತಿಲ್ಲ, ಮೊಬೈಲ್ ಸ್ವಿಚ್ ಆಫ್‌ ಆಗಿದೆ. ಇವರ ಮತ ನಿರ್ಣಾಯಕವಾಗುತ್ತದೆ.

ಜೆಡಿಎಸ್‌ ಜತೆ ಪಕ್ಷೇತರರು:

ಪಕ್ಷೇತರಾಗಿ ಆಯ್ಕೆಯಾಗಿರುವ ಇಬ್ಬರಲ್ಲಿ ಒಬ್ಬರು ಜೆಡಿಎಸ್ ಜತೆ ಗುರುತಿಸಿಕೊಂಡಿದ್ದಾರೆ. ಮತ್ತೊಬ್ಬ ಯುವ ಸದಸ್ಯ, ಎಂಜನಿಯರಿಂಗ್ ಪದವೀಧರ ಅಕ್ಷಯಕುಮಾರ್ ಅವರು ಸಹ ತಮ್ಮ ನಿರ್ಧಾರ ಬಹಿರಂಗಗೊಳಿಸಿಲ್ಲ. ಇವರು ಸಹ ಕಳೆದ 2-3 ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೆ ಮೊಬೈಲ್‌ ಸ್ವಿಚ್ ಆಫ್‌ ಮಾಡಿಕೊಂಡಿದ್ದಾರೆ.

ಬೆಂಬಲಿಗರಿಗೆ ರಕ್ಷಣೆ:

ಕಾಂಗ್ರೆಸ್ ಪಕ್ಷದ ಏಕೈಕ ಸದಸ್ಯ ಜೆಡಿಎಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎರಡು ಬಣಗಳು ತಮ್ಮ ಬೆಂಬಲಿಗರನ್ನು ಕೂಡಿಟ್ಟು ಜೋಪಾವಾಗಿ ಕಾಯ್ದುಕೊಂಡಿದ್ದಾರೆ. ಸದಸ್ಯರನ್ನು ನಾಳೆ ಚುನಾವಣೆ ಸಮಯಕ್ಕೆ ನೇರವಾಗಿ ನಗರಸಭೆಗೆ ಕರೆ ತರಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT