ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯಾನ್ಸರ್, ಮಧುಮೇಹ ತಡೆ; ಸತ್ಯಸಾಯಿ ವಿವಿ ಒಪ್ಪಂದ

Published 9 ಜುಲೈ 2024, 12:40 IST
Last Updated 9 ಜುಲೈ 2024, 12:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕ್ಯಾನ್ಸರ್ ಮತ್ತು ಮಧುಮೇಹ ಕಾಯಿಲೆಗಳನ್ನು ತಡೆಗಟ್ಟಲು ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಯುನಿವರ್ಸಿಟಿ ಆಫ್ ಟ್ರಾನ್ಸ್-ಡಿಸಿಪ್ಲಿನರಿ ಹೆಲ್ತ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ವಿಶ್ವವಿದ್ಯಾಲಯ ಸಮಗ್ರ ಆರೋಗ್ಯ ವ್ಯವಸ್ಥೆ  ಮೂಲಕ ಒಪ್ಪಂದ ಮಾಡಿಕೊಂಡಿವೆ.

ಜಗತ್ತಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕ್ಯಾನ್ಸರ್ ಮತ್ತು ಮಧುಮೇಹ ರೋಗಗಳಿಗೆ ಸಾಂಪ್ರದಾಯಿಕ ಪೌಷ್ಟಿಕ ಆಹಾರ ಪದ್ಧತಿ ಮೂಲಕ ಔಷಧಿಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಎರಡೂ ವಿಶ್ವವಿದ್ಯಾಲಯಗಳು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿವೆ.

ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಸಂಸ್ಥಾಪಕ ಮಧುಸೂದನ ಸಾಯಿ, ‘ವಿಶ್ವವಿದ್ಯಾಲಯ ಅಂಗಸಂಸ್ಥೆ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಈ ಒಪ್ಪಂದ ಮಾಡಿಕೊಂಡಿದೆ. ಇದು ನಮಗೆ ಹೆಮ್ಮೆಯ ವಿಚಾರ. ಈ ಒಪ್ಪಂದವು ಕೇವಲ ಕೆಲವು ನಿಯಮಿತ ಸಂಪನ್ಮೂಲಗಳ ವಿನಿಮಯಕ್ಕೆ ಸೀಮಿತವಾಗಿಲ್ಲ. ಇದು ಪೂರ್ವ ಮತ್ತು ಪಶ್ಚಿಮದ ನಡುವಿನ ಸಹಯೋಗವಾಗಿ ಕಾರ್ಯನಿರ್ವಹಿಸುವ ಜಾಗತಿಕ ವೇದಿಕೆಯಾಗಲಿದೆ ಎಂದು ಹೇಳಿದರು.

ಈ ಒಪ್ಪಂದವು ರೋಗಿಗಳಿಗೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕೆ ಸಾಧ್ಯವಾದಷ್ಟು ಹೆಚ್ಚಿನ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು, ವೈವಿಧ್ಯಮಯ ಜ್ಞಾನ ವ್ಯವಸ್ಥೆಗಳು ಮತ್ತು ವಿಜ್ಞಾನ ಕ್ಷೇತ್ರದ ಸಾಧಕರನ್ನು ಒಟ್ಟುಗೂಡಿಸುವ ಗುರಿ ಹೊಂದಿದೆ. 
ಪೌಷ್ಟಿಕಾಂಶ ಆಧಾರಿತ ಸಂಶೋಧನೆಯು ಈ ಪಾಲುದಾರಿಕೆಯ ಮೂಲಾಧಾರವಾಗಿದೆ ಎಂದು ಹೇಳಿದರು.

ಯುನಿವರ್ಸಿಟಿ ಆಫ್ ಟ್ರಾನ್ಸ್-ಡಿಸಿಪ್ಲಿನರಿ ಹೆಲ್ತ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ವಿಶ್ವವಿದ್ಯಾಲಯ ಕುಲಪತಿ ದರ್ಶನ್ ಶಂಕರ್, ಆರೋಗ್ಯಚಿಕಿತ್ಸೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಪಂಚದಾದ್ಯಂತ ಸ್ಥಳೀಯ ಪದ್ಧತಿಗಳು ಇವೆ. ಹಲವು ವಿಭಿನ್ನ ಜ್ಞಾನ ವ್ಯವಸ್ಥೆಗಳಿದ್ದರೂ ನಾವು ಹೆಚ್ಚಾಗಿ ಪಾಶ್ಚಿಮಾತ್ಯ ವ್ಯವಸ್ಥೆ ಬಳಸುತ್ತಿದ್ದೇವೆ. ಅದೇನೇ ಇದ್ದರೂ, ನಾವು ಆಫ್ರಿಕಾ ಮತ್ತು ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವೈವಿಧ್ಯಮಯ ಸ್ಥಳೀಯ ವ್ಯವಸ್ಥೆಗಳನ್ನು ಹೊಂದಿದ್ದು, ಈ ಒಪ್ಪಂದದ ಮೂಲಕ ನಾವು ಈ ಜ್ಞಾನವನ್ನು ಹೆಚ್ಚು ಪ್ರಚಲಿತ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT